Advertisement

Uv Fusion: ಗುರು ಎಂಬ ಶಿಲ್ಪಿ

01:11 PM Nov 14, 2023 | Team Udayavani |

ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ, ಸುಜ್ಞಾನವೆಂಬ ಬೆಳಕಿನೆಡೆಗೆ ಕೊಂಡೊಯ್ಯುವವರೇ ಗುರುಗಳು. ಒಂದು ಮಗುವನ್ನು ಬೆಳೆಸಿ ಪ್ರಭುದ್ಧರನ್ನಾಗಿ ಮಾಡಲು ತಂದೆ ತಾಯಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಗುರು. ಸರಿಯಾದ ಗುರುವು ಇಲ್ಲದಿದ್ದಲ್ಲಿ ಮಕ್ಕಳ ಬುದ್ಧಿಮತ್ತೆ ಶೂನ್ಯವಾಗಿರುತ್ತದೆ. ಗುರುಗಳೆಂದರೆ ದೇವರಿಗೆ ಸಮಾನವಾದವರು. ಕಣ್ಣಿಗೆ ಕಾಣುವ ದೇವರೆಂದರೆ ತಂದೆ -ತಾಯಿ ಮತ್ತು ಗುರು. ಗುರುವನ್ನು ನಾವು ಎರಡನೆಯ ಪೋಷಕರೆಂದೇ ಹೇಳಬಹುದು.

Advertisement

ಕುಂಬಾರ ಮಣ್ಣನ್ನು ಕಲಸಿ ಹದಮಾಡಿ ಹೇಗೆ ಮಡಿಕೆಯನ್ನು ತಯಾರಿಸುತ್ತಾನೋ ಹಾಗೆಯೇ ಗುರುಗಳು ತಮ್ಮ ಶಿಷ್ಯರನ್ನು ತಮ್ಮ ಸ್ವಂತ ಮಕ್ಕಳಂತೆಯೇ ಕಂಡು, ಮಾರ್ಗದರ್ಶನವನಿತ್ತು, ತಿದ್ಧಿ, ತೀಡಿ ಪ್ರಭುದ್ಧರನ್ನಾಗಿ ಮಾಡುತ್ತಾರೆ. ತನ್ನ ಶಿಷ್ಯರಿಗೆ ಪಾಠವನ್ನು ಬೋಧಿಸುವುದರಲ್ಲಿ ಮಾತ್ರವಲ್ಲದೆ, ಅವರು ತನ್ನ ಶಿಷ್ಯರ ಜೀವನದಲ್ಲಿ ಪ್ರಭಾವವನ್ನುಂಟು ಮಾಡಿ ಅವರನ್ನು ಬದಲಾಯಿಸುವಲ್ಲಿ ಕೂಡ ಸಮರ್ಥರು. ಕೇವಲ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರವನ್ನು ಮಾತ್ರವಲ್ಲದೆ, ಶಿಷ್ಯನ ಅಂಧಕಾರವನ್ನು ತೊಡೆದು ಹಾಕಿ, ಕಲ್ಮಶ ಇಲ್ಲವಾಗಿಸಿ, ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಿ ಜ್ಞಾನವೆಂಬ ಅಕ್ಷರವನ್ನು ಬಿತ್ತಲು ಸಾಮರ್ಥ್ಯವುಳ್ಳವರೇ ಗುರುಗಳು. ಗುರುಗಳಲ್ಲಿರುವ ಧನಾತ್ಮಕ ಶಕ್ತಿಯನ್ನು ಶಿಷ್ಯರಿಗೆ ಧಾರೆಯೆರೆದು ಅವರ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲ್ಗೊಂಡು ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿ ನೀಡುವಲ್ಲಿ ಅವರ ಪಾತ್ರ ಬಹಳ ಮುಖ್ಯವಾದದ್ದು.

ಗುರುವೆಂದರೆ ಶಕ್ತಿ. ಗುರುಗಳು ಇರುವುದೇ ತನ್ನ ಶಿಷ್ಯರನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಬೆಳೆಸುವುದಕ್ಕಾಗಿ, ಸಂಸ್ಕಾರಯುತರನ್ನಾಗಿ ರೂಪಿಸುವುದಕ್ಕಾಗಿ. ಬದುಕುವ ಕಲೆಯನ್ನು ಕಲಿಸುವವರು ಗುರುಗಳು. ಚಿಕ್ಕಂದಿನಿಂದಲೇ ಹಿರಿಯರನ್ನು ಗೌರವಿಸಲು ಮನೆಯವರು ಮನೆಯಲ್ಲಿ ಕಲಿಸುತ್ತಾರೆ ಆದರೆ ಅದನ್ನು ಪೂರ್ಣಗೊಳಿಸುವಂತಹ ಕಾರ್ಯವನ್ನು ಗುರುಗಳು ಮಾಡುತ್ತಾರೆ.

ಗುರುಗಳು ತನ್ನಲ್ಲಿನ ಸೃಜನಶೀಲತೆಯನ್ನು ಶಿಷ್ಯಂದಿರಲ್ಲಿ ಮೈಗೂಡಿಸುವಲ್ಲಿ ಬಹಳ ದೊಡ್ಡದಾದ ಪಾತ್ರವನ್ನು ವಹಿಸುತ್ತಾರೆ. ತನ್ನ ಸ್ಫೂರ್ತಿದಾಯಕ ಮಾತುಗಳಿಂದ ಶಿಷ್ಯರನ್ನು ಹುರಿದುಂಬಿಸುವವರೇ ಗುರುಗಳು. ಆದುದರಿಂದ ನಾವು ನಮ್ಮ ಜೀವನದಲ್ಲಿ ಗುರು ಗಳನ್ನು ಸದಾಕಾಲವೂ ಗೌರವಿಸುತ್ತಾ, ಸ್ಮರಿಸುತ್ತಲೇ ಇರಬೇಕು.

„ ಕಾವ್ಯಶ್ರೀ ಎಸ್‌. ಸಾಮೆತ್ತಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next