Advertisement

ವೈಜ್ಞಾನಿಕವಾಗಿ ನೀರು ಶುದ್ಧೀಕರಿಸಿ

11:55 AM Dec 02, 2018 | Team Udayavani |

ಬೆಂಗಳೂರು: ತ್ಯಾಜ್ಯನೀರು ಸಂಸ್ಕರಣ ಘಟಕಗಳಲ್ಲಿ (ಎಸ್‌ಟಿಪಿ) ನಡೆಯುತ್ತಿರುವ ನೀರು ಶುದ್ಧೀಕರಣ ಪ್ರಕ್ರಿಯೆ ಇನ್ನಷ್ಟು ಆಧುನಿಕ ಹಾಗೂ ವೈಜ್ಞಾನಿಕ ರೀತಿಯಲ್ಲಿ ನಡೆಯುವಂತೆ ಜಲಮಂಡಳಿಯು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಜೆ.ಆರ್‌.ಮುದಕವಿ ಅಭಿಪ್ರಾಯಪಟ್ಟರು.

Advertisement

ಯುವಶಕ್ತಿ ವತಿಯಿಂದ ಶನಿವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಬಯಲು ಸೀಮೆಯ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ಬೆಂಗಳೂರಿನ ತ್ಯಾಜ್ಯ ನೀರು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜಲಮಂಡಳಿಯು ಬೆಂಗಳೂರಿನ ಜನತೆ ಬಳಸಿದ ನೀರನ್ನು ತನ್ನ 20ಕ್ಕೂ ಹೆಚ್ಚು ತ್ಯಾಜ್ಯನೀರು ಸಂಸ್ಕರಣೆ ಘಟಕಗಳಲ್ಲಿ ಸಂಸ್ಕರಿಸಿ, ನಂತರ ಕೆರೆಗಳಿಗೆ ಹರಿಸುತ್ತಿದೆ.

ಸಂಸ್ಕರಿಸಿದ ನೀರಿನ ಸ್ಥಿತಿಗತಿ ಪರೀಕ್ಷೆಯು ಕೇವಲ ಬಿಒಡಿ ಹಾಗೂ ಸಿಒಡಿ ಎಂಬ ಎರಡು ಮಾದರಿಯ ಪರೀಕ್ಷೆಗಳಲ್ಲಿ ಮುಕ್ತಾಯವಾಗುತ್ತಿದೆ. ಆದರೆ, ಜನರು ನಿತ್ಯ ಬಳಸುತ್ತಿರುವ ನೀರಿನಲ್ಲಿ ಹೊಸ ಹೊಸ ರಾಸಾಯನಿಕಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳು ಮೇಲಿನ ಎರಡೂ ಪರೀಕ್ಷೆಗಳಿಂದ ಪತ್ತೆಯಾಗುತ್ತಿಲ್ಲ. ಜತೆಗೆ ಪರೀಕ್ಷಾ ಕೇಂದ್ರಗಳಲ್ಲಿ ಜಲಮಂಡಳಿ ಪಾರದರ್ಶಕತೆ ಪಾಲಿಸುತ್ತಿಲ್ಲ ಎಂದರು.

ಅಮೆರಿಕ, ಜಪಾನ್‌, ಜರ್ಮನಿ ದೇಶಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ವ್ಯವಸ್ಥೆಯಲ್ಲಿ ಶೇ.50ರಷ್ಟು ಇಂಜಿನಿಯರ್‌ಗಳು, ಶೇ.50 ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ನಮ್ಮಲ್ಲಿ ಶೇ.90ರಷ್ಟು ಇಂಜಿನಿಯರ್‌ಗಳೇ ಇದ್ದು, ವಿಜ್ಞಾನಿಗಳಿಗೆ ಇಲ್ಲಿ ಅವಕಾಶವಿಲ್ಲ. ಇದೇ ಪರಿಸ್ಥಿತಿ ಬೆಂಗಳೂರು ಜಲಮಂಡಳಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿದೆ.

ಇಲ್ಲಿ ಯಾವುದೇ ರಾಸಾಯನಿಕ ತಜ್ಞರಿಲ್ಲ, ನೀರಿನ ಸಂಸ್ಕರಣೆ ಹಾಗೂ ಪರೀಕ್ಷೆಯನ್ನು ಇಂಜಿನಿಯರ್‌ಗಳೇ ನಿರ್ವಹಿಸುತ್ತಿದ್ದು, ಅವರು ಪರೀಕ್ಷೆಗಳಿಗೆ ಒಂದಷ್ಟು ಯಂತ್ರೋಪಕರಣಗಳನ್ನು ಅವಲಂಭಿಸಿದ್ದಾರೆ. ಅದರ ಹೊರತಾಗಿ ಹೆಚ್ಚುವರಿ ರಾಸಾಯನಿಕಗಳ ಪರೀಕ್ಷೆ, ಆಧುನಿಕ ಹಾಗೂ ಬದಲಿ ಪರೀಕ್ಷೆಗಳು ನಡೆಯುತ್ತಿಲ್ಲ. ಈ ರೀತಿ ಸಂಸ್ಕರಿಸಿದ ನೀರನ್ನು ಬಯಲು ಸೀಮೆ ಕೆರೆಗಳಿಗೆ ಬಿಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.

Advertisement

ರಾಷ್ಟ್ರೀಯ ಜೀವ ವೈವಿದ್ಯ ಪ್ರಾಧಿಕಾರದ ಸದಸ್ಯ ಡಾ.ಎಂ.ಕೆ.ರಮೇಶ್‌ ಮಾತನಾಡಿ, ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೋಲಾರದ ಕೆರೆಗಳಿಗೆ ತುಂಬಿಸಲಾಗುತ್ತಿದೆ. ಆದರೆ, ನೀರು ಸಂಪೂರ್ಣವಾಗಿ ಶುದ್ಧಿಕರಣಗೊಳ್ಳದೆ ಕೆಲ ರಾಸಾಯನಿಕ ಅಂಶಗಳು ಹಾಗೇ ಉಳಿಯುತ್ತಿವೆ. ಆ ನೀರನ್ನು ಕೆರೆಗಳಿಗೆ ಹರಿಸಿದಾಗ ವಿಷಯುಕ್ತ ನೊರೆ ಬರುತ್ತಿದೆ. ಇನ್ನು ಕೆ.ಸಿ.ವ್ಯಾಲಿ ನೀರು ಹಂಚಿಕೆ ಯೋಜನೆ ವೈಜ್ಞಾನಿಕ ಚಿಂತನೆಗಳಿಂದ ಕೂಡಿಲ್ಲ.

ಯೋಜನೆಯ ಕುರಿತು ವಿಜ್ಞಾನಿ ಹಾಗೂ ತಂತ್ರಜ್ಞರಿಂದ ಸಲಹೆಗಳನ್ನು ಪಡೆದುಕೊಳ್ಳದ ಕಾರಣ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಾದರೂ ಸರ್ಕಾರ ವಿಜ್ಞಾನಿಗಳ ಅಭಿಪ್ರಾಯ ಪಡೆಯಬೇಕು ಎಂದು ಹೇಳಿದರು. ಕೇಂದ್ರೀಯ ಅಂತರ್ಜಲ ಮಂಡಳಿಯ ನಿವೃತ್ತ ನಿರ್ದೇಶಕ ಡಾ. ವಿ.ಎಸ್‌.ಪ್ರಕಾಶ್‌ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದ ಅಂತರ್ಜಲದ ಸ್ವರೂಪ ಹೇಗಿದೆ?

ಕೆ.ಸಿ ವ್ಯಾಲಿ ಮೂಲಕ ಬಿಡುವ ಸಂಸ್ಕರಿಸಿದ ತ್ಯಾಜ್ಯ ನೀರು ಅಂತರ್ಜಲಕ್ಕೆ ಹೋದರೆ ಆಗುವ ಪರಿಣಾಮಗಳೇನು? ಹಾಗೂ ಆ ಭಾಗದಲ್ಲಿ ಬೆಳೆಯುವ ಬೆಳೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರಿನ ಬಳಕೆ ಯೋಗ್ಯವೆ? ಎಂಬ ಬಗ್ಗೆ ಸಂಶೋಧನೆಗಳು ನಡೆದಿಲ್ಲ. ಹೀಗಾಗಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸುವ ಮುನ್ನ ಹಲವು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು. 

ಬೆಂಗಳೂರಿನ ರಾಜಕಾಲುವೆಗಳಲ್ಲಿ ಹರಿಯುತ್ತಿರುವ ನೀರಿನಲ್ಲಿ ಹೈಡ್ರೋಜನ್‌ ಪ್ರಮಾಣ ಎಷ್ಟಿದೆ ಎಂಬ ಅಧ್ಯಯನ ನಡೆಯಬೇಕು. ರಾಜಕಾಲುವೆಗೆ ಹರಿದು ಬರುವ ತ್ಯಾಜ್ಯ ನೀರು ಹಾಗೂ ಕಾರ್ಖಾನೆಗಳಿಂದ ಬರುವ ವಿಷಯುಕ್ತ ನೀರನ್ನು ಹಲವು ಬಗೆಯಲ್ಲಿ ಸಂಸ್ಕರಿಸಬೇಕು.

ಆದರೆ, ತ್ಯಾಜ್ಯ ನೀರು ಮಾತ್ರ ಸಂಸ್ಕರಣಗೊಳ್ಳುತ್ತಿದೆ. ಇನ್ನು ರಾಜಕಾಲುವೆ ನೀರಿನಲ್ಲಿರುವ ಕಾರ್ಖಾನೆಯ ಕೆಮಿಕಲ್‌ ಅಂಶವನ್ನು ಸಂಸ್ಕರಿಸಲು ರೋಬೋಟಿಕ್‌, ರನ್ನಿಂಗ್‌ ಯಂತ್ರಗಳನ್ನು ಬಳಸಬೇಕು ಹೇಳಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಸಾಯನ ಶಾಸ್ತ್ರಜ್ಞೆ ಡಾ.ಶಶಿರೇಖಾ, ಪರಿಸರ ವಿಜ್ಞಾನಿ ಡಾ.ರಾಜ್‌ಮೋಹನ್‌, ನಿರ್ಮಲಾ ಗೌಡ ಭಾಗವಹಿಸಿದ್ದರು.

ನೀರು ಕಾಯ್ದೆ ಜಾರಿಯಾಗಲಿ: ರಾಜ್ಯದಲ್ಲಿ ಕೆರೆ ನೀರು, ನದಿ ನೀರು, ಅಂತರ್ಜಲವನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ನಿರ್ದಿಷ್ಟ ನೀತಿಯಿಲ್ಲ. ಇದರಿಂದ ನೀರಿನ ವಿಷಯದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತು ಕಾನೂನು ತಜ್ಞರಿಂದ ಅಗತ್ಯ ಮಾಹಿತಿ ಪಡೆದು ನೀರಿನ ಬಳಕೆ ಹಾಗೂ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ನೀರು ಕಾಯ್ದೆ ಜಾರಿಯಾಗಬೇಕಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಕರಡು ಪ್ರತಿ ಸಿದ್ಧಪಡಿಸಿ ಸಾರ್ವಜನಿಕ ಚರ್ಚೆಗೆ ಬಿಡಲಾಗುವುದು ಎಂದು ಪರಿಸರವಾದಿ ಡಾ.ಯಲ್ಲಪ್ಪ ರೆಡ್ಡಿ ಮಾಹಿತಿ ನೀಡಿದರು.

ಎಸ್‌ಟಿಪಿಗಳಲ್ಲಿ ವಿಜ್ಞಾನಿಗಳ ಅಗತ್ಯವಿಲ್ಲ: ಜಲಮಂಡಳಿಯ ತ್ಯಾಜ್ಯನೀರು ಸಂಸ್ಕರಣೆ ಘಟಕಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆಯನ್ನು ಕೆಲ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಅಲ್ಲಿ ರಾಸಾಯನಿಕ ತಜ್ಞರು (ಕೆಮಿಸ್ಟ್‌) ಕೆಲಸ ಮಾಡುತ್ತಿದ್ದಾರೆ. ಅವರು ಸಂಸ್ಕರಿಸಿದ ನೀರನ್ನು ಪರೀಕ್ಷೆ ಮಾಡುತ್ತಾರೆ.

ಜತೆಗೆ ಜಲಮಂಡಳಿಯ ಪರಿಸರ ಇಂಜಿನಿಯರ್‌ಗಳು, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ. ಇನ್ನು ಎಸ್‌ಟಿಪಿಗಳಲ್ಲಿ ಸಿದ್ಧ ಹಾಗೂ ಪ್ರಮಾಣಿಕರಿಸಿದ ತಂತ್ರಜ್ಞಾನ ಬಳಸಲಾಗುತ್ತದೆ. ಹೀಗಾಗಿ, ಇಲ್ಲಿ ವಿಜ್ಞಾನಿಗಳ ಅಗತ್ಯವಿಲ್ಲ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next