ರಾಜ್ಯದ ಐದನೇ ಮತ್ತು ಎಂಟನೇ ತರಗತಿಗೆ ನಡೆಸಲು ಉದ್ದೇಶಿಸಿರುವ ಪಬ್ಲಿಕ್ ಪರೀಕ್ಷೆ ಎಂಬುದು ವಿವಾದದ ಗೂಡಾಗಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಇಷ್ಟು ಹೊತ್ತಿಗೆ ಪರೀಕ್ಷೆ ಒಂದೋ ಮುಗಿದಿರಬೇಕಾಗಿತ್ತು ಅಥವಾ ಈಗಾಗಲೇ ಶುರುವಾಗಿರಬೇಕಾಗಿತ್ತು. ಆದರೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಮತ್ತು ರಾಜ್ಯ ಸರಕಾರದ ನಡುವಿನ ಮುಸುಕಿನ ಗುದ್ದಾಟದಿಂದಾಗಿ ತಮ್ಮದಲ್ಲದ ತಪ್ಪಿಗೆ ಮಕ್ಕಳು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.
5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ತೀರ್ಮಾನ ಈಗಿನದ್ದೇನಲ್ಲ. ಈ ಶೈಕ್ಷಣಿಕ ವರ್ಷಾರಂಭದಿಂದಲೇ ಚರ್ಚೆ ನಡೆಯುತ್ತಲೇ ಇದೆ. ಹಾಗೆಯೇ ರಾಜ್ಯ ಸರಕಾರವೂ ಇದಕ್ಕೆ ಬೇಕಾದ ಸಿದ್ಧತೆಯನ್ನೂ ನಡೆಸುತ್ತಿತ್ತು. ಆಗಲೇ ಶಾಲಾ ಶಿಕ್ಷಣ ಮಂಡಳಿಗಳು ಮತ್ತು ರಾಜ್ಯ ಸರಕಾರ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು. ಇದನ್ನು ಬಿಟ್ಟು ಆಗಿನಿಂದಲೂ ಮುಸುಕಿನ ಗುದ್ದಾಟ ನಡೆಸಿಕೊಂಡು ಬಂದು ಇನ್ನೇನು ಪರೀಕ್ಷೆ ಸಮೀಪಿಸುತ್ತಿದೆ ಎಂದಿರುವಾಗ ಪರೀಕ್ಷೆ ನಡೆಯಲಿದೆ ಅಥವಾ ಇಲ್ಲ ಎಂಬ ಬಗ್ಗೆಯೇ ದೊಡ್ಡ ಗೊಂದಲಗಳು ಏರ್ಪಟ್ಟಿವೆ.
ವಯಸ್ಸಿನ ಲೆಕ್ಕಾಚಾರದಲ್ಲಿ ನೋಡಿದಾಗ ಐದನೇ ಮತ್ತು ಎಂಟನೇ ತರಗತಿ ಮಕ್ಕಳು ತೀರಾ ಚಿಕ್ಕವೇ ಆಗಿವೆ. ರಾಜ್ಯ ಸರಕಾರ ಇವರಿಗೆ ಪರೀಕ್ಷೆ ಬಗ್ಗೆ ಒಂದಷ್ಟಾದರೂ ಗಂಭೀರತೆ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ಪಬ್ಲಿಕ್ ಪರೀಕ್ಷೆಗೆ ಮುಂದಾಗಿದೆ. ಅಲ್ಲದೆ ಕೊರೊನಾ ವೇಳೆ ಮಕ್ಕಳ ಕಲಿಕಾ ಮಟ್ಟ ಹಾಳಾಗಿದ್ದು, ಇದನ್ನು ಚೇತರಿಸಿಕೊಳ್ಳುವಂತೆ ಮಾಡಲು ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಾಜ್ಯ ಸರಕಾರ ವಾದಿಸುತ್ತಿದೆ. ಆದರೆ ಈಗ ರಾಜ್ಯ ಸರಕಾರ ಮತ್ತು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಹಗ್ಗಜಗ್ಗಾಟ ಮಕ್ಕಳ ಮನಸ್ಸಿನ ಮೇಲೆ ಘಾಸಿಯಾಗುವಂತೆ ಮಾಡಿದೆ.
ಈ ವಿಚಾರದಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಮೊದಲಿಗೆ ಹೈಕೋರ್ಟ್‌ನ ಏಕ ಸದಸ್ಯ ಪೀಠ ವಿಚಾರಣೆ ನಡೆಸಿ ಪರೀಕ್ಷೆಯನ್ನೇ ರದ್ದು ಮಾಡಿತ್ತು. ಇದನ್ನು ರಾಜ್ಯ ಸರಕಾರ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು. ಅಲ್ಲಿ ಷರತ್ತುಗಳೊಂದಿಗೆ ಮತ್ತು ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ನಿಯಮದೊಂದಿಗೆ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ, ಶಿಕ್ಷಣ ಸಂಸ್ಥೆಗಳು ಸುಪ್ರೀಂ ಕೋರ್ಟ್ ಪ್ರವೇಶಿಸಿದ್ದು, ಅಲ್ಲಿ ತತ್‌ಕ್ಷಣದ ವಿಚಾರಣೆಗೆ ಒಪ್ಪಿಲ್ಲ. ಮಾ.27ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ವಿಶೇಷವೆಂದರೆ ಈಗಿನ ಕಾರ್ಯಸೂಚಿ ಪ್ರಕಾರ ಅಂದೇ ಈ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಆರಂಭವಾಗಲಿದೆ.
ಇದರ ನಡುವೆಯೇ ಸೋಮವಾರ ಮತ್ತೆ ಖಾಸಗಿ ಶಾಲೆಗಳು ಹೈಕೋರ್ಟ್ ಮುಂದೆ ಅರ್ಜಿ ಹಾಕಿ ಪಬ್ಲಿಕ್ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿವೆ. ಆದರೆ ವಿಚಾರಣೆಗೆ ಒಪ್ಪದ ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಬಾಕಿ ಇರುವಾಗ ಮತ್ತೆ ಏಕೆ ಇಲ್ಲಿಗೆ ಬಂದಿದ್ದೀರಿ ಎಂದು ಹೇಳಿ ಕಳುಹಿಸಿದೆ. ಈ ಬೆಳವಣಿಗೆಗಳನ್ನು ನೋಡಿದರೆ ಅನುದಾನರಹಿತ ಶಾಲೆಗಳು ಯಾವುದೇ ಕಾರಣಕ್ಕೂ ಪಬ್ಲಿಕ್ ಪರೀಕ್ಷೆ ನಡೆಸಲು ಬಿಡಬಾರದು ಎಂಬ ಮನಃಸ್ಥಿತಿಗೆ ಬಂದಂತೆ ಕಾಣಿಸುತ್ತಿದೆ. ಒಮ್ಮೆ ಸುಪ್ರೀಂ ಕೋರ್ಟ್, ಮಗದೊಮ್ಮೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆ ಮುಂದೂಡಿಕೆಗೆ ಅಥವಾ ರದ್ದತಿಗೆ ಪದೇ ಪದೆ ಮನವಿಸಲ್ಲಿಸುತ್ತಲೇ ಇವೆ.
ಇದರ ಮಧ್ಯೆಯೇ ರಾಜ್ಯ ಸರಕಾರ ಮಾ.27ರಿಂದ ಆರಂಭವಾಗಲಿರುವ ಪರೀಕ್ಷೆಯ ಮಾದರಿ ಬದಲಿಸಿದೆ. ಮೌಲ್ಯಾಂಕನ ಪರೀಕ್ಷೆ ಮೌಲ್ಯಮಾಪನವನ್ನು ಕ್ಲಸ್ಟರ್ ಮಟ್ಟದಲ್ಲಿಯೇ ನಡೆಸಲು ತೀರ್ಮಾನಿಸಿದೆ. ಈ ಪರೀಕ್ಷೆಗಳ ಜತೆಗೇ ಎಸೆಸೆಲ್ಸಿ ಪರೀಕ್ಷೆ ನಡೆಯುವುದರಿಂದ ಬದಲಾವಣೆ ಮಾಡಿದೆ. ಏನೇ ಆಗಲಿ ಒಟ್ಟಿನಲ್ಲಿ ಪರೀಕ್ಷೆ ಎಂಬುದು ಯಾರ ಪಾಲಿಗೂ ಭಯವಾಗಿ ಕಾಡಬಾರದು. ಇದನ್ನು ಗಮನಿಸಿದರೆ ಮಕ್ಕಳಿಗಿಂತ ಖಾಸಗಿ ಶಾಲೆಗಳಿಗೇ ಹೆಚ್ಚು ಸಮಸ್ಯೆಯಾಗುತ್ತಿರುವಂತೆ ಕಾಣಿಸುತ್ತಿದ್ದು, ಈ ಬಗ್ಗೆ ರಾಜ್ಯ ಸರಕಾರ ಪರಿಶೀಲನೆ ನಡೆಸಬೇಕಿದೆ. ಇಬ್ಬರ ಜಗಳದಲ್ಲಿ ಮಕ್ಕಳು ತಬ್ಬಲಿಯಾಗಬಾರದಷ್ಟೇ.