Advertisement

ಶಾಲಾರಂಭ: ಸ್ಪಷ್ಟ ನಿರ್ಧಾರ ಶೀಘ್ರ ಪ್ರಕಟಿಸಿ

02:23 AM Apr 07, 2021 | Team Udayavani |

ರಾಜ್ಯ ಸರಕಾರ 6ರಿಂದ 9ನೇ ತರಗತಿ ಸ್ಥಗಿತಗೊಳಿಸಿರುವ ಬೆನ್ನಲ್ಲೇ ಹಲವು ಖಾಸಗಿ ಶಾಲೆಗಳು 10ನೇ ತರಗತಿ ಮಕ್ಕಳಿಗೂ ಭೌತಿಕ ತರಗತಿ ಸ್ಥಗಿತಗೊಳಿಸಿ, ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿವೆ. 1ರಿಂದ 9ನೇ ತರಗತಿ ಮಕ್ಕಳ ಅಂತಿಮ ಪರೀಕ್ಷೆ ಅಥವಾ ಮೌಲ್ಯಾಂಕನದ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಆದರೂ ಬಹುತೇಕ ಖಾಸಗಿ ಶಾಲೆಗಳು 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸುತ್ತಿವೆ. ಇನ್ನು ಕೆಲವು ಖಾಸಗಿ ಶಾಲೆಗಳು ಆನ್‌ಲೈನ್‌ ಪರೀಕ್ಷೆಯ ವೇಳಾಪಟ್ಟಿಯನ್ನು ಪಾಲಕರಿಗೆ ಮತ್ತು ಮಕ್ಕಳಿಗೆ ಕಳುಹಿಸಿವೆ. 6ರಿಂದ 9ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಪರೀಕ್ಷೆ ನಡೆಸಲು ಸರಕಾರದ ನಿರ್ಧಾರಕ್ಕಾಗಿ ಕಾದು ಕುಳಿತಿವೆ. ಸರಕಾರ ಮೌಲ್ಯಾಂಕನ ಪರೀಕ್ಷೆಗೆ ಅನುಮತಿ ನೀಡದೇ ಇದ್ದರೂ ಆನ್‌ಲೈನ್‌ ಮೂಲಕವೇ ನಡೆಸಲಿವೆ. ಸರಕಾರಿ ಶಾಲಾ ಮಕ್ಕಳಿಗೆ ಇದ್ಯಾವುದು ನಡೆಯುತ್ತಿಲ್ಲ. ಸರಕಾರಿ ಶಾಲಾ ಮಕ್ಕಳ ಹಿತದೃಷ್ಟಿ, ಶೈಕ್ಷಣಿಕ ಭವಿಷ್ಯದ ಹಿನ್ನೆಲೆಯ ಲ್ಲಾದರೂ ಸರಕಾರ ಕೂಡಲೇ ಮೌಲ್ಯಾಂಕನ ಪರೀಕ್ಷೆಯ ನಿರ್ಧಾರ ಪ್ರಕಟಿಸಬೇಕು.

Advertisement

2019-20ನೇ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಕೊರೊನಾ ಕಾಣಿಕೊಂಡ ಹಿನ್ನೆಲೆಯಲ್ಲಿ 1ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಮೌಲ್ಯಾಂಕನ ಪರೀಕ್ಷೆ ಇಲ್ಲದೇ ತೇರ್ಗಡೆ ಮಾಡಲಾಗಿತ್ತು. 2020-21ನೇ ಶೈಕ್ಷಣಿಕ ವರ್ಷವೂ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಜ.1ರಿಂದ ಎಸೆಸೆಲ್ಸಿ ತರಗತಿಗಳು ಆರಂಭವಾದ ಅನಂತರ ಹಂತಹಂತ ವಾಗಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿತ್ತು. ಆದರೆ ಖಾಸಗಿ ಶಾಲೆಗಳು ಲಾಕ್‌ಡೌನ್‌ ಅವಧಿ ಸಹಿತವಾಗಿ ಇಂದಿನವರೆಗೂ ಆನ್‌ಲೈನ್‌ ಶಿಕ್ಷಣವನ್ನು ವ್ಯವಸ್ಥಿತವಾಗಿ ನೀಡುತ್ತಿವೆ. ಸರಕಾರಿ ವ್ಯವಸ್ಥೆಯಲ್ಲಿ ಓದುತ್ತಿರುವ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಸಿಗುತ್ತಿಲ್ಲ. ಭೌತಿಕ ತರಗತಿಯೇ ಅವರ ಕಲಿಕೆಯ ಕೀಲಿ ಕೈ. ಹೀಗಾಗಿ ಸರಕಾರ ಮೌಲ್ಯಾಂಕನ ಪರೀಕ್ಷೆಯ ಬಗ್ಗೆ ಯಾವುದೇ ಗೊಂದಲ ಅಥವಾ ವಿಳಂಬ ನೀತಿಯನ್ನು ಅನುಸರಿಸದೇ ಕೂಡಲೇ ತನ್ನ ನಿರ್ಧಾರ ಪ್ರಕಟಿಸಬೇಕು.

ಕಡ್ಡಾಯ ಶಿಕ್ಷಣ ಹಕ್ಕು ಆಯ್ದೆಯ ಅನ್ವಯ 1ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸಿ, ಅನುತ್ತೀರ್ಣ ಮಾಡುವಂತಿಲ್ಲ. ಆದರೆ ಮೌಲ್ಯಾಂಕನಕ್ಕೆ ಅವಕಾಶವಿದೆ. ಮೌಲ್ಯಾಂಕನದ ಆಧಾರದಲ್ಲಿ ಕಲಿಕೆಯಲ್ಲಿ ವಿದ್ಯಾರ್ಥಿ ಯಾವ ವಿಷಯದಲ್ಲಿ ಹಿಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಮುಂದಿನ ತರಗತಿಯಲ್ಲಿ ಆ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಲು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಹೀಗಾಗಿ ಕನಿಷ್ಠ ಮೌಲ್ಯಮಾಪನಕ್ಕೆ ಅವಕಾಶ ನೀಡುವ ದೃಷ್ಟಿಯಿಂದ ಸರಕಾರ ಮೌಲ್ಯಾಂಕನ ಪರೀಕ್ಷೆ ನಡೆಸಬೇಕು. ಕೊರೊನಾ ವ್ಯಾಪಕತೆ ಹಿನ್ನೆಲೆಯಲ್ಲಿ ಮೌಲ್ಯಾಂಕನ ಪರೀಕ್ಷೆಯನ್ನು ನಡೆಸುವುದೇ ಇಲ್ಲವಾದರೂ ತತ್‌ಕ್ಷಣ ಪ್ರಕಟಿಸಬೇಕು. ಗೊಂದಲ ಹೀಗೆ ಮುಂದುವರಿದರೆ ವಿದ್ಯಾರ್ಥಿಗಳಲ್ಲಿ, ಪಾಲಕ, ಪೋಷಕರಲ್ಲಿ ಆತಂಕ ದಿನೇ ದಿನೆ ಹೆಚ್ಚಲಿದೆ.

ಇದರ ಜತೆಗೆ ಶಿಕ್ಷಕರು ಮತ್ತೆ ಮನೆ ಮನೆಗೆ ಹೋಗಬೇಕಾಗುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಈ ಸಂಬಂಧ ಆದೇಶವನ್ನು ಹೊರಡಿಸುತ್ತಿದ್ದಾರೆ. ಮಕ್ಕಳಿದ್ದಲ್ಲಿಗೆ ಹೋಗಿ ಕಲಿಕೆಯ ಅವಲೋಕನಕ್ಕೆ ಸೂಚನೆ ನೀಡುತ್ತಿದ್ದಾರೆ. ಇದರಿಂದ ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ. ಶಾಲಾ ತರಗತಿ, ಮೌಲ್ಯಾಂಕನ ಪರೀಕ್ಷೆ ಕುರಿತು ಸರಕಾರ ತನ್ನ ಸ್ಪಷ್ಟ ಆದೇಶದ ಮೂಲಕ ಎಲ್ಲ ಗೊಂದಲ ನಿವಾರಣೆ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next