ಬೆಂಗಳೂರು : ಮಕ್ಕಳ ನಿರಂತರ ಕಲಿಕೆ ಮುಂದುವರಿಯಲು ಗ್ರಾಮ ಮಟ್ಟದ ಪರಿಸ್ಥಿತಿಗೆ ಅನುಗುಣವಾಗಿ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಆಗಸ್ಟ್ ಎರಡನೇ ವಾರದ ಅನಂತರ ತರಗತಿಗಳು ಪ್ರಾರಂಭವಾಗುವ ಸಾಧ್ಯತೆಯಿದೆ.
ರಾಜ್ಯಾದ್ಯಂತ ವಿದ್ಯಾರ್ಥಿಗಳ ದಾಖಲಾತಿ ನಡೆಯುತ್ತಿದೆ. ಸರಕಾರಿ ಶಾಲಾ ಮಕ್ಕಳಿಗೆ ದೂರದರ್ಶನದ ಸಂವೇದ ಪಾಠ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಯುತ್ತಿದೆ. ಈ ಮಧ್ಯೆ ಗ್ರಾಮ ಮಟ್ಟದ ಪರಿಸ್ಥಿತಿಗೆ ಅನುಗುಣವಾಗಿ ಯಾವ ರೀತಿ ಶಾಲೆ ಆರಂಭಿಸಲು ಸಾಧ್ಯ ಎಂಬುದರ ಮಾಹಿತಿ ಪಡೆಯುವ ಪ್ರಕ್ರಿಯೆ ಪ್ರಾರಂಭವಾಗಿದೆ.
ಭೌತಿಕ ತರಗತಿ ಆರಂಭಿಸಲು ಶಾಲಾ ಹಂತದಲ್ಲಿ ಆಗಬೇಕಿರುವ ಸಿದ್ಧತೆ ಮತ್ತು ವಿದ್ಯಾರ್ಥಿಗಳು, ಹೆತ್ತವರಲ್ಲಿ ಆತ್ಮವಿಶ್ವಾಸ ಮೂಡಿಸುವ ಜವಾಬ್ದಾರಿಯನ್ನು ಆಯಾ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ವಹಿಸುವ ಸಾಧ್ಯತೆಯಿದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಸರಕಾರಿ ಶಾಲೆಗಳಿಗೆ ಮಕ್ಕಳ ಹೆತ್ತವರನ್ನು ಕರೆಸಿ, ಸಾಮಾಜಿಕ ಅಂತರ ಸಹಿತ ಎಲ್ಲ ರೀತಿಯ ನಿಯಮ ಪಾಲಿಸಿ ದಾಖಲಾತಿ ಮತ್ತು ಶಾಲಾರಂಭದ ಬಗ್ಗೆ ಸಭೆ ನಡೆಸುತ್ತಿದ್ದಾರೆ. ಭೌತಿಕ ತರಗತಿ ಆರಂಭಕ್ಕೆ ಯಾವುದೇ ಸೂಚನೆ ಅಥವಾ ನಿರ್ದೇಶನ ಬಂದಿಲ್ಲ. ಆದರೆ ಎಲ್ಲ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತಜ್ಞರ ಸಮಿತಿ ನೀಡಿರುವ ವರದಿಯಂತೆ ತಾಲೂಕು, ಹೋಬಳಿ, ಗ್ರಾಮ ಮಟ್ಟದ ಪರಿಸ್ಥಿತಿಯ ಆಧಾರದಲ್ಲಿ ನಿರ್ಧಾರವನ್ನು ಜಿಲ್ಲಾಡಳಿತಕ್ಕೆ ತೆಗೆದುಕೊಳ್ಳಲು ಬಿಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಶಿಕ್ಷಕರು ಶಾಲೆಗೆ ತೆರಳಿ ದಾಖಲಾತಿ ಮತ್ತು ಮಾಹಿತಿ ಅಪ್‌ಡೇಟ್ ಮಾಡುತ್ತಿದ್ದಾರೆ. ಜತೆಗೆ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಆಗಸ್ಟ್ 2ನೇ ವಾರದ ಬಳಿಕ ತರಗತಿ ಆರಂಭ ಸಾಧ್ಯತೆಯನ್ನು ತಿಳಿಸುತ್ತಿದ್ದಾರೆ.
ಭೌತಿಕ ತರಗತಿ ಆರಂಭಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸರಕಾರ ಅಧಿಕೃತವಾಗಿ ದಿನಾಂಕ ಘೋಷಣೆ ಮಾಡಿದ ಬಳಿಕ ಭೌತಿಕ ತರಗತಿ ಆರಂಭಿಸಲಾಗುತ್ತದೆ.
– ವಿ. ಅನುºಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ