ದಾವಣಗೆರೆ: ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳ ಬಳಿಕ ರಾಜ್ಯದ ಎಲ್ಲ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ವಿದ್ಯಾವಿಕಾಸ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರ ಬಟ್ಟೆ ಸರಬರಾಜು ಮಾಡಲಾಗುತ್ತಿದ್ದು ಅ.2ರೊಳಗೆ ಮಕ್ಕಳಿಗೆ ಬಟ್ಟೆ ವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ವರ್ಷ ಬಾರಿ ವಿಳಂಬವಾಗಿ ಅಂದರೆ ಶೈಕ್ಷಣಿಕ ವರ್ಷದ ಮಧ್ಯಾಂತರದಲ್ಲಿ 1ರಿಂದ 10ನೇ ತರಗತಿ ಮಕ್ಕಳಿಗೆ ಸಮವಸ್ತ್ರ ಬಟ್ಟೆ ವಿತರಿಸಲಾಗುತ್ತಿದೆ. ಬಟ್ಟೆ ಪಡೆದ ವಿದ್ಯಾರ್ಥಿಗಳಿಗೆ ಪೋಷಕರು ತಮ್ಮ ಸ್ವಂತ ವೆಚ್ಚದಲ್ಲಿಯೇ ಸಮವಸ್ತ್ರ ಹೊಲಿಸಿಕೊಳ್ಳಬೇಕಾಗಿದೆ.
ದಸರಾ ರಜೆಯ ಮೊದಲೇ ಮಕ್ಕಳಿಗೆ ಸಮವಸ್ತ್ರ ಬಟ್ಟೆ ನೀಡಿದರೆ ಅವರಿಗೆ ಹೊಲಿಸಿಕೊಳ್ಳಲು ಅನುಕೂಲವಾಗುವ ಜತೆಗೆ ಮಧ್ಯಾಂತರ ರಜೆ ಬಳಿಕ ಎಲ್ಲ ಮಕ್ಕಳು ಹೊಸ ಸಮವಸ್ತ್ರದೊಂದಿಗೆ ಶಾಲೆಗೆ ಬರಲು ಸಾಧ್ಯವಾಗುತ್ತದೆ ಎಂಬ ಯೋಚನೆಯೊಂದಿಗೆ ರಾಜ್ಯದ ಎಲ್ಲ ತಾಲೂಕುಗಳಿಗೆ ಬಟ್ಟೆ ಸರಬರಾಜು ಪ್ರಕ್ರಿಯೆ ಭರದಿಂದ ಸಾಗಿದೆ.
ಪ್ರಸಕ್ತ 2022-23ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾವಿಕಾಸ ಯೋಜನೆಯಡಿ ಸಮವಸ್ತ್ರ ಬಟ್ಟೆ ಸರಬರಾಜು ಮಾಡಲು ಸರಕಾರದ ಆದೇಶ ಅನುಸರಿಸಿ ಬೆಂಗಳೂರಿನ ಮೆ| ಕೆಎಚ್‌ಡಿಸಿ, ಮೆ| ಕೆಎಸ್‌ಟಿಐಡಿಸಿ ಹಾಗೂ ಇ-ಟೆಂಡರ್ ಅನ್ವಯಿಸಿ ಮಹಾರಾಷ್ಟ್ರ ಇಚಲಕರಂಜಿಯ ಮೆ| ಪದಂಚಂದ್ ಮಿಲಾಪ್‌ಚಂದ್ ಜೈನ್ ಸಂಸ್ಥೆಗಳಿಗೆ ಸಮ ವಸ್ತ್ರ ಬಟ್ಟೆ ಸರಬರಾಜು ಮಾಡಲು ಕಾರ್ಯಾದೇಶ ನೀಡಲಾಗಿತ್ತು. ಬಟ್ಟೆ ಸರಬರಾಜು ಹೊಣೆ ಹೊತ್ತ ಸಂಸ್ಥೆಗಳು ರಾಜ್ಯದ ವಿವಿಧ ಶೈಕ್ಷಣಿಕ ವಿಭಾಗಗಳಿಗೆ ಹಂತ ಹಂತವಾಗಿ ಬಟ್ಟೆ ಸರಬರಾಜು ಮಾಡುತ್ತ ಬಂದಿದ್ದು, ಈಗ ಎಲ್ಲ ಸಂಸ್ಥೆಗಳಿಂದ ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರ ಬಟ್ಟೆ ಸರಬರಾಜು ಕಾರ್ಯ ನಡೆದಿದೆ.
ಬಟ್ಟೆ ಸರಬರಾಜು ಸಂಸ್ಥೆಗಳಿಂದ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಿಗೆ ಬರುತ್ತಿದೆ. ಅದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸ್ವೀಕೃತಿವಾದ ಕೂಡಲೇ ತಾಲೂಕು ಕೇಂದ್ರಗಳಿಂದ ಸಂಬಂಧಿಸಿದ ಶಾಲಾ ಮಕ್ಕಳಿಗೆ ತಲುಪಿಸುವ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಲಾಗಿದೆ. ತಾಲೂಕು ಕೇಂದ್ರ ದಿಂದ ಶಾಲೆಗಳಿಗೆ ಸಮವಸ್ತ್ರ ಸಾಗಿಸಲು ಎಲ್ಲ 34 ಶೈಕ್ಷಣಿಕ ಜಿಲ್ಲೆಯ 204 ಶಿಕ್ಷಣಾಧಿಕಾರಿಗಳಿಗೆ ಪ್ರತಿ ತಾಲೂಕಿಗೆ 20 ಸಾವಿರ ರೂ.ಗಳನ್ನು ಇಲಾಖೆ ಬಿಡುಗಡೆ ಮಾಡಿದೆ.