ಬೆಂಗಳೂರು: ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ವಿಚಾರ ಈಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ರಾಜ್ಯ ಸರ್ಕಾರ ಈಗಾಗಲೇ ಕೈಗೊಂಡಿರುವ ನಿರ್ಧಾರದಂತೆ ಪರಿಶಿಷ್ಟ ಜಾತಿ- ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿಸಲು ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮಹತ್ವದ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ. ಇದನ್ನು ರಾಜಕೀಯವಾಗಿ ಬಿಜೆಪಿಯ ಜಾಣ್ಮೆ ಹೆಜ್ಜೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಮುನ್ನ ಇಂತಹದ್ದೊಂದು ತೀರ್ಮಾನ ಕೈಗೊಳ್ಳುವ ಮೂಲಕ ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸ ಪೂರ್ಣಗೊಳಿಸಿದೆ ಎಂಬ ಸಂದೇಶ ರವಾನಿಸಿದ್ದು, ಇದೀಗ ಮೀಸಲಾತಿ ಪ್ರಮಾಣ ಹೆಚ್ಚಳದ ಚೆಂಡು ಕೇಂದ್ರ ಸರ್ಕಾರದ ಆಂಗಳಕ್ಕೆ ಬಿದ್ದಂತಾಗಿದೆ.
ಈ ವಿಚಾರ ವಿಧಾನಸಭೆ ಚುನಾವಣೆ ಪ್ರಚಾರದಲ್ಲೂ ಪ್ರತಿಧ್ವನಿಸುವ ಸಾಧ್ಯತೆಯಿದ್ದು, ನಾವು ಬದ್ಧತೆ ಪ್ರದರ್ಶಿಸಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳಲು ಅವಕಾಶ ದೊರೆತಂತಾಗಿದೆ. ಜತೆಗೆ ಪ್ರತಿಪಕ್ಷಗಳು ಈಗ, ಡಬಲ್ ಎಂಜಿನ್ ಸರ್ಕಾರದಲ್ಲಿ ಮೀಸಲಾತಿ ಹೆಚ್ಚಳ ಚುನಾವಣೆಗೆ ಮುಂಚೆಯೇ ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸಲಿ ಎಂದು ಒತ್ತಾಯ ಮಾಡಬಹುದು. ಮತ್ತೆ ಇದು ಚುನಾವಣೆಯಲ್ಲಿ ವಾಕ್ಸಮರಕ್ಕೂ ಕಾರಣವಾಗಬಹುದು.
ಅಧಿವೇಶನದಲ್ಲಿ ಪ್ರತಿಪಕ್ಷಗಳು ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಮುಗಿಬೀಳಲು ಕಾರ್ಯತಂತ್ರ ರೂಪಿಸಿದ್ದವು. ಆದರೆ, ಇದರ ಸುಳಿವು ಅರಿತ ರಾಜ್ಯ ಸರ್ಕಾರ ಸಂಪುಟದಲ್ಲಿ ಚರ್ಚಿಸಿ, 9ನೇ ಶೆಡ್ಯೂಲ್‌ನಲ್ಲಿ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿದೆ. ರಾಜ್ಯದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ 17, ಪರಿಶಿಷ್ಟ ಪಂಗಡದ ಮೀಸಲಾತಿ ಶೇ.3ರಿಂದ 7ಕ್ಕೆ ಹೆಚ್ಚಳ ಮಾಡುವ ಐತಿಹಾಸಿಕ ತೀರ್ಮಾನ ಕೈಗೊಂಡು, ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ ನಂತರ ವಿಧಾನಸಭೆಯಲ್ಲಿ ಕಾಯ್ದೆಯ ಸ್ವರೂಪ ನೀಡಲಾಗಿತ್ತು. ಈ ಮೀಸಲಾತಿ ಹೆಚ್ಚಳದ ಲಾಭ ಸಿಗುವಂತಾಗಲು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರ್ಪಡೆಗೆ ಒತ್ತಡಗಳಿದ್ದವು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಸಚಿವ ಸಂಪುಟದಲ್ಲಿ ಕೈಗೊಂಡಿರುವ ತೀರ್ಮಾನ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲೂ ಮಂಡಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಂತಾಗಿದೆ.
“ಮೀಸಲು’ ಕಾರ್ಯತಂತ್ರ:
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ, ಪಂಚಮಸಾಲಿ ಹಾಗೂ ಒಕ್ಕಲಿಗರ ಮೀಸಲಾತಿ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ ಮುಂದಿಟ್ಟುಕೊಂಡು, ಆ ಸಮುದಾಯದ ಮತ ಸೆಳೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಇದಕ್ಕಾಗಿಯೇ ಎಸ್‌ಸಿ-ಎಸ್‌ಸಿ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತು ಕಾಯ್ದೆ ರೂಪಿಸಿ, ಈಗ ಶೆಡ್ಯೂಲ್ 9ಕ್ಕೆ ಸೇರಿಸಲು ಶಿಫಾರಸು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಜತೆಗೆ, ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ಮೀಸಲಾತಿ ಏರಿಕೆ ವಿಚಾರದಲ್ಲೂ ಪ್ರತ್ಯೇಕ ಕೆಟಗರಿ ಸೃಷ್ಟಿಸಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಪ್ರಚಾರ ಸಭೆಗಳಲ್ಲಿ ಪ್ರತಿಪಾದಿಸಲು ಬಿಜೆಪಿ ತೀರ್ಮಾನಿಸಿದೆ. ಜತೆಗೆ ಲಂಬಾಣಿ ತಾಂಡಾಗಳ ಒಂದು ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿರುವ ವಿಚಾರವೂ ರಾಜಕೀಯವಾಗಿ ಲಾಭ ತಂದುಕೊಡಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಮುಂದೇನು?:
ರಾಜ್ಯ ಸರ್ಕಾರದ ಶಿಫಾರಸಿಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತ ಬಳಿಕ ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರ್ಪಡೆ ಮಾಡಬಹುದಾಗಿದೆ. ತಮಿಳುನಾಡಿನ ಮೀಸಲಾತಿ ಪ್ರಕರಣವೊಂದರಲ್ಲಿ ಈ ಪ್ರಕ್ರಿಯೆ ಅನುಸರಿಸಲಾಗಿದೆ.