ಹೊಸದಿಲ್ಲಿ : ಐವರು ಹೊಸ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇಂದು ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ವರಿಷ್ಠ ನ್ಯಾಯಮೂರ್ತಿ ಸಹಿತ ಸುಪ್ರೀಂ ಕೋರ್ಟ್‌ನಲ್ಲಿನ ನ್ಯಾಯಮೂರ್ತಿಗಳ ಸಂಖ್ಯಾಬಲ ಈಗ 28ಕ್ಕೇರಿದೆ.
ಇಂದು ಬೆಳಗ್ಗೆ ವರಿಷ್ಠ ನ್ಯಾಯಮೂರ್ತಿ ಜೆ ಎಸ್ ಖೇಹರ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ಐವರು ಹೊಸ ನ್ಯಾಯಮೂರ್ತಿಗಳೆಂದರೆ ಸಂಜಯ್ ಕಿಷನ್ ಕೌಲ್, ನವೀನ್ ಸಿನ್ಹಾ, ಮೋಹನ್ ಎಂ ಶಂತನಗೌಡರ್, ದೀಪಕ್ ಗುಪ್ತಾ ಮತ್ತು ಎಸ್ ಅಬ್ದುಲ್ ನಝೀರ್.
ಜಸ್ಟಿಸ್ ಕೌಲ್ ಅವರು ಈ ವರೆಗೆ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದರು. ಜಸ್ಟಿಸ್ ಸಿನ್ಹಾ ಅವರು ರಾಜಸ್ಥಾನ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದರು.
ಜಸ್ಟಿಸ್ ಶಂತನಗೌಡರ್ ಮತ್ತು ಜಸ್ಟಿಸ್ ಗುಪ್ತಾ ಅವರು ಅನುಕ್ರಮವಾಗಿ ಕೇರಳ ಮತ್ತು ಛತ್ತೀಸ್‌ಗಢ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದರು. ಜಸ್ಟಿಸ್ ನಝೀರ್ ಅವರು ಕರ್ನಾಟಕ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದರು.
ಸುಪ್ರೀಂ ಕೋರ್ಟಿಗೆ ವರಿಷ್ಠ ನ್ಯಾಯಮೂರ್ತಿ ಸಹಿತ ಅನುಮೋದನೆ ಇರುವ ನ್ಯಾಯಮೂರ್ತಿಗಳ ಸಂಖ್ಯಾ ಬಲ 31.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈಚೆಗೆ ಐವರು ಹೊಸ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಆದೇಶಕ್ಕೆ ಸಹಿಹಾಕಿದ್ದರು.