ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಶನಿವಾರ(ಡಿ28) ಬೆಳಗ್ಗೆ 11:45 ಕ್ಕೆ ಇಲ್ಲಿನ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಸರಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.ಸಿಂಗ್ ಅವರು 92 ನೇ ವಯಸ್ಸಿನಲ್ಲಿ ಏಮ್ಸ್ನಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದ್ದರು.
“ಡಾ. ಮನಮೋಹನ್ ಸಿಂಗ್ ಅವರಿಗೆ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ (MHA) ಶುಕ್ರವಾರ ಸಂವಹನದಲ್ಲಿ ತಿಳಿಸಿದೆ.
ಪೂರ್ಣ ಸೇನಾ ಗೌರವಗಳೊಂದಿಗೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲು ರಕ್ಷಣ ಸಚಿವಾಲಯವನ್ನು ಕೋರಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.
ಸಿಖ್ಖರು ಸಾಮಾನ್ಯವಾಗಿ ಅಗ್ನಿಯಲ್ಲಿ ಸಂಸ್ಕಾರ ಮಾಡಿ ಶವಸಂಸ್ಕಾರಕ್ಕೆ ಆದ್ಯತೆ ನೀಡುತ್ತಾರೆ, ದೇಹವು ಆತ್ಮದ ಪಾತ್ರೆ ಎಂದು ನಂಬುತ್ತಾರೆ. ಚಿತಾಭಸ್ಮವನ್ನು ಸಾಮಾನ್ಯವಾಗಿ ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸುವ ಕ್ರಮವಿದೆ.
ಸಿಖ್ ಅಂತ್ಯಕ್ರಿಯೆಯ ವ್ಯವಸ್ಥೆಗಳು ಸಾಮಾನ್ಯವಾಗಿ ಸಾವಿನ ತತ್ ಕ್ಷಣವೇ ಪ್ರಾರಂಭವಾಗುತ್ತವೆ, ಮೂರು ದಿನಗಳ ಅಂತ್ಯಕ್ರಿಯೆ ನಡೆಸಬೇಕಾಗುತ್ತದೆ. ವಿಧಿಗಳು ಸಾಮಾನ್ಯವಾಗಿ ಎರಡು ಗಂಟೆಗಳಿರುತ್ತದೆ.