ಪೋರ್ಟ್ ಬ್ಲೇರ್: “ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್ ಅವರ ದೇಶಭಕ್ತಿಯನ್ನು ಪ್ರಶ್ನಿಸಲಾಗದು. ಅವರ ದೇಶಭಕ್ತಿಯ ಬಗ್ಗೆ ಅನುಮಾನಿಸುವವರಿಗೆ ನಾಚಿಕೆಯಾಗಬೇಕು.
ಹೀಗೆಂದು ಹೇಳಿರುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್‌ನ ಸೆಲ್ಯುಲರ್ ಜೈಲಿನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆಸಲಾದ “ಆಜಾದಿ ಕಾ ಅಮೃತಮಹೋತ್ಸವ’ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಅವರು ಈ ಮಾತುಗಳನ್ನಾಡಿದ್ದಾರೆ.
“ಸಾವರ್ಕರ್‌ಗೆ ಆರಾಮದಾಯಕ ಜೀವನ ನಡೆಸಲು ಬೇಕಾದ ಎಲ್ಲ ಸೌಕರ್ಯಗಳೂ ಇದ್ದವು. ಆದರೂ ಅವರು ಈ ಕಠಿಣ ಪಥವನ್ನು ಆಯ್ದುಕೊಂಡರು. ಇದು ತಾಯ್ನಾಡಿನ ಕುರಿತ ಅವರ ಬದ್ಧತೆಗೆ ಸಾಕ್ಷಿ. ಈ ಜೈಲಿಗಿಂತ ಶ್ರೇಷ್ಠವಾದ ತೀರ್ಥಯಾತ್ರಾ ಸ್ಥಳ ಬೇರೊಂದಿರಲಿಕ್ಕಿಲ್ಲ. ಸಾವರ್ಕರ್ ಅವರು 10 ವರ್ಷಗಳ ಕಾಲ ಜೈಲಿನಲ್ಲಿದ್ದು ಹಿಂಸೆ ಅನುಭವಿಸಿದರೂ, ಧೈರ್ಯ ಕಳೆದುಕೊಳ್ಳದ ಸ್ಥಳವಿದು. ಇದೊಂದು ಮಹಾತೀರ್ಥ. ಸಾವರ್ಕರ್ ಅವರಿಗೆ “ವೀರ್’ ಎನ್ನುವ ಬಿರುದನ್ನು ಸರ್ಕಾರ ನೀಡಿದ್ದಲ್ಲ. ದೇಶದ ಜನರೇ ನೀಡಿದ್ದು. ಅದನ್ನು ನಾವು ತೆಗೆಯಲು ಸಾಧ್ಯವಿಲ್ಲ. ಅವರ ದೇಶಭಕ್ತಿಯನ್ನು ಅನುಮಾನಿಸುವವರಿಗೆ ನಾಚಿಕೆಯಾಗಬೇಕು’ ಎಂದು ಶಾ ಹೇಳಿದ್ದಾರೆ.
ಇದನ್ನೂ ಓದಿ:“ಸರ್ದಾರ್ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’
“ಗಾಂಧಿಯವರ ಸಲಹೆಯ ಮೇರೆಗೇ ಸಾವರ್ಕರ್ ಅವರು ಬ್ರಿಟಿಷರ ಕ್ಷಮೆ ಕೇಳಿದ್ದರು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ ಹೇಳಿಕೆಯು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅನೇಕರು ಸಾವರ್ಕರ್‌ನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಹೇಳಲಾರಂಭಿಸಿದ್ದರು. ಅದರ ಬೆನ್ನಲ್ಲೇ ಅಮಿತ್ ಶಾ ಅವರ ಈ ಹೇಳಿಕೆ ಮಹತ್ವ ಪಡೆದಿದೆ.