ಬೆಂಗಳೂರು: ಅಮೃತ ಮಹೋತ್ಸವದ ಜಾಹೀರಾತಿನಲ್ಲಿ ನೆಹರೂ ಅವರ ಭಾವಚಿತ್ರ ಕೈಬಿಟ್ಟಿರುವುದು ಸಣ್ಣತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಅವರ ಕೊಡುಗೆ ಸಾಕಷ್ಟಿದೆ. ಅವರು ಮೊದಲ ಪ್ರಧಾನಮಂತ್ರಿ. ಆದರೆ ಅವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣನೆ ಮಾಡಿರುವಂತಿದೆ. ನೆಹರು ಅವರು ಯಾವುದೇ ಪಕ್ಷಕ್ಕೇ ಸೇರಿರಲಿ, ಆದರೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕುಟುಂಬದ ಕೊಡುಗೆ ದೊಡ್ಡದಿದೆ. ಅಂತವರ ಭಾವಚಿತ್ರವನ್ನು ಜಾಹೀರಾತಿನಲ್ಲಿ ಕೈಬಿಟ್ಟಿರುವುದು ಸಣ್ಣತನದ ರಾಜಕಾರಣ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಕ್ಲಿಷ್ಟಕರ ಪರಿಸ್ಥಿತಿ ಇತ್ತು. ಆದರೂ ದೇಶ ಮುಂದಕ್ಕೆ ತೆಗೆದುಕೊಂಡು ಹೋದರು ನೆಹರು ಅವರು. ಅವರ ಚಿತ್ರಕ್ಕೆ ಕೊಕ್ಕೆ ಹಾಕಿದ ಇವರು ದೇಶಪ್ರೇಮಿಗಳಲ್ಲ. ದೇಶಪ್ರೇಮದ ಹೆಸರಿನಲ್ಲಿ ದೇಶವನ್ನು ಛಿದ್ರ ಛಿದ್ರ ಮಾಡುತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟ ಈ ದೇಶ. ಎಲ್ಲಾ ಕುಟುಂಬಗಳು ಹೀಗೆ ಬದುಕಬೇಕಿದೆ. ಆದರೆ ಈಗ ಏನಾಗಿದೆ ಎಂದು ಪ್ರಶ್ನಿಸಿದರು.
ನೆಹರು ಅವರಿಂದ ದೇಶ ವಿಭಜನೆ ಆಯಿತು, ಹಾಗಾಗಿ ಬಿಜೆಪಿ ಇಂದು ಕರಾಳ ದಿನ ಆಚರಣೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೆಹರು ತಪ್ಪು ಮಾಡಿದ್ದರೆ ಆಗ ವೀರ ಸಾವರ್ಕರ್ ಟೀಂ ಇತ್ತಲ್ಲಾ, ಅವರ ವಿರುದ್ಧ ಆಂದೋಲನ ಮಾಡಬೇಕಿತ್ತು. ಏನು ಮಾಡುತ್ತಿದ್ದರು ಅವರು? ವಿಭಜನೆ ಆದಾಗ ಲಕ್ಷಾಂತರ ಕುಟುಂಬಗಳು ಅಂದು ಸಾವು ನೋವು ಕಂಡಿವೆ. ಅನೇಕ ಕುಟುಂಬದ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಮತ್ತೊಮ್ಮೆ ಇಂಥ ಕೃತ್ಯಗಳಿಗೆ ಅವಕಾಶ ಕೊಡಬೇಕು ಅನ್ನೋದು ಇವರ ಉದ್ದೇಶವೇ? ಎಂದು ಬಿಜೆಪಿಯವರನ್ನು ಪ್ರಶ್ನಿಸಿದರು.
ಇದನ್ನೂ ಓದಿ: ಮಂಗಳೂರು: ಕುದ್ರೋಳಿಯಲ್ಲಿ 900 ಕೆ.ಜಿ ಧವಸ ಧಾನ್ಯದಿಂದ ತಿರಂಗಾ ಕಲಾಕೃತಿ ರಚನೆ |
ಸಾವರ್ಕರ್ ಮತ್ತು ಟಿಪ್ಪು ಫ್ಲೆಕ್ಸ್ ಹರಿದ ತಕ್ಷಣ ದೇಶದ ಸಮಸ್ಯೆಗಳು ಬಗೆಹರಿಯಲ್ಲ. ಇರುವ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತವೆ. ಸರ್ವ ಜನಾಂಗದ ಶಾಂತಿಯ ತೋಟವಾದ ರಾಜ್ಯವನ್ನು ಹಾಳು ಮಾಡುವ ದುರುದ್ದೇಶ ಅಷ್ಟೇ ಇದರ ಹಿಂದೆ ಅಡಗಿದೆ ಎಂದು ಅವರು ಹೇಳಿದರು.