ರಾಯಚೂರು: ಕೆಎಸ್ಆರ್ಟಿಸಿ ಲೋಗೋ ಹಾಗೂ ಹೆಸರು ಬದಲಾವಣೆ ವಿಷಯದ ಕುರಿತು ಪರಿಶೀಲಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳ ಹಾಗೂ ಕರ್ನಾಟಕ ಎರಡೂ ‘ಕ’ ಅಕ್ಷರದಿಂದಲೇ ಆರಂಭವಾಗುತ್ತದೆ. ಹೀಗಾಗಿ ಕೇರಳದವರು ವ್ಯಾಜ್ಯ ಹೂಡಿದ್ದರು. ಸೆಂಟ್ರಲ್ ಟ್ರೇಡ್ ಮಾರ್ಕ್ ಟ್ರಿಬುನಲ್ ನಲ್ಲಿ ಅವರ ಪರವಾಗಿದೆ ಎಂದು ತಿಳಿದು ಬಂದಿದೆ. ಒಂದು ಹೆಸರಿನ ಸಂಸ್ಥೆ ಎರಡು ಇರಬಾರದು. ವ್ಯಾವಹಾರಿಕವಾಗಿ ಹಾಗೂ ಔದ್ಯೋಗಿಕವಾಗಿ ಇರುವ ಸಂಸ್ಥೆಗಳು ಒಂದೇ ಹೆಸರಿನಲ್ಲಿ ಇದ್ದರೆ ಸಮಸ್ಯೆಯಾಗಲಿದೆ. ಎರಡೂ ಸಾರ್ವಜನಿಕರಿಗೆ ಸೇವೆ ಕೊಡುವ ಸಂಸ್ಥೆಗಳು. ಇಲ್ಲಿ ಯಾರ ಹೆಸರಿನ ಮೇಲೆ ಯಾರೂ ಲಾಭ ಪಡೆಯಲಾಗದು. ಇದು ಅನಾವಶ್ಯಕ ಗೊಂದಲ ಸೃಷ್ಟಿಸುವ ಕೆಲಸ ಆಗಿದೆ. ಅಧಿಕಾರಿಗಳಿಗೆ ಸೂಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂದು ಅಥವಾ ನಾಳೆ ತಜ್ಞರ ಅಭಿಪ್ರಾಯ ಪಡೆದು ಸಿಎಂ ನೇತೃತ್ವದಲ್ಲಿ ಸಭೆ ಆದ ಮೇಲೆ ಲಾಕ್ ಡೌನ್ ಬಗ್ಗೆ ತೀರ್ಮಾನ ಮಾಡಲಾಗುವುದು. ಎಲ್ಲರ ಅಭಿಪ್ರಾಯ ಇನ್ನಷ್ಟು ದಿನ ಮುಂದುವರಿಸುವುದಾಗಿದೆ. ಪಾಸಿಟಿವ್ ಪ್ರಮಾಣ 7 ಸಾವಿರದವರೆಗೆ ಬರುವವರೆಗೂ ತಜ್ಞರು ಲಾಕ್ ಡೌನ್ ಮುಂದಿವರೆಸಲು ಸಲಹೆ ನೀಡಿದ್ದಾರೆ. ಮೂರನೇ ಅಲೆಗೆ ಸರ್ಕಾರ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಎಂದರು.
ರೀಮ್ಸ್ ನಲ್ಲಿ 20 kl ಆಕ್ಸಿಜನ್ ಘಟಕ ಇಂದಿನಿಂದ ಪ್ರಾರಂಭಿಸಲಾಗಿದೆ. 30 ಆಕ್ಸಿಜನ್ ಕಾನ್ಸಟ್ರೇಟರ್ ಬಂದಿವೆ. ಗುಜರಿಗೆ ಹಾಕುವ ಬಸ್ಸುಗಳನ್ನೇ ಆಕ್ಸಿಜನ್ ಹಾಗೂ ಐಸಿಯು ಬಸ್ ಗಳನ್ನಾಗಿ ಮಾಡಿದ್ದೇವೆ. ಸಂಸದರು ಹಾಗೂ ಶಾಸಕರು ತಮ್ಮ ನಿಧಿಯನ್ನು ಕೊಟ್ಟು ಸಹಕರಿಸುತ್ತಿದ್ದಾರೆ. ಐಸಿಯು ಬಸ್ ಮಾಡಲು 8 ರಿಂದ 10 ಲಕ್ಷ ಖರ್ಚಾಗಿದೆ ಎಂದರು.
ರಾಯಚೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಆಗಿದೆ. ಜಿಲ್ಲಾಡಳಿತ ಹಳ್ಳಿಗಳಿಗೆ ಹೋಗಿ, ಸೋಂಕಿತರನ್ನು ಪತ್ತೆ ಹಚ್ಚಿ ಸ್ಥಳಾಂತರ ಮಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗಿದೆ. ಹೀಗಾಗಿ ಕೋವಿಡ್ ಜಿಲ್ಲೆಯಲ್ಲಿ ಹತೋಟಿಗೆ ಬಂದಿದೆ. ರೀಮ್ಸ್ ಹಾಗೂ ಓಪೆಕ್ ನಲ್ಲಿ ಸುಧಾರಣೆ ಕಂಡಿದೆ. ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಈಗ ಬ್ಲಾಕ್ ಫಂಗಸ್ ನಮಗೆ ಸವಾಲಾಗಿದೆ. ಜಿಲ್ಲೆಯಲ್ಲಿ 41 ಜನರಿಗೆ ಬ್ಲಾಕ್ ಫಂಗಸ್ ಬಂದಿದೆ. ಅವರಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸವದಿ ಹೇಳಿದರು.