Advertisement
ಮಾನವ ಕಳ್ಳಸಾಗಣೆ ಜಾಲದಲ್ಲಿ ತೊಡಗಿಸಿಕೊಂಡಿದ್ದ ನೇಪಾಳ ಮೂಲದ ಕಿಶನ್ ಗಾಲೆ, ರಾಕೇಶ್ ಶರ್ಮಾ, ಲಕ್ಷ್ಮಣ್ ಗಾಲೆ ತಾಗ್ ಬಹೂದ್ದೂರ್ ಎಂಬುವವರನ್ನು ಬಂಧಿಸಲಾಗಿದೆ. ಜಾಲದ ಪ್ರಮುಖ ಕಿಂಗ್ ಪಿನ್‌ಗಳಾದ ಆಂಧ್ರ ಮೂಲದ ವೆಂಕಟೇಶ್ವರ ರಾವ್, ನೇಪಾಳದ ನವರಾಜ್ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಂದ ಕೇಂದ್ರ ವಲಸೆ ವಿಭಾಗ (ಇಮಿಗ್ರೇಶನ್) ಹಾಗೂ ಪೊಲೀಸ್ ಇಲಾಖೆ ಹೆಸರಿನ ಆರು ನಕಲಿ ಸೀಲುಗಳು, 2 ಲ್ಯಾಪ್‌ಟಾಪ್, 1 ಪ್ರಿಂಟರ್, 6 ಫೋನ್ ಜಪ್ತಿ ಮಾಡಿಕೊಂಡಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಷ್ಟದಲ್ಲಿರುವ ಹೆಣ್ಣುಮಕ್ಕಳು ಟಾರ್ಗೆಟ್: ಕಿಂಗ್ ಪಿನ್‌ಗಳಾದ ವೆಂಕಟೇಶ್ವರ ರಾವ್ ಹಾಗೂ ನವಿರಾಜ್ ಹಲವು ವರ್ಷಗಳಿಂದ ಮಾನವ ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗಿದ್ದು, ಉಳಿದ ಆರೋಪಿಗಳು ಅವರಿಗೆ ಸಹಕಾರ ನೀಡುತ್ತಿದ್ದರು. ನೇಪಾಳದ ಬಡ ಹೆಣ್ಣುಮಕ್ಕಳು, ಗಂಡನಿಂದ
ಪರಿತ್ಯಕ್ತ ಮಹಿಳೆಯರನ್ನು ಗುರುತಿಸಿ ಆರೋಪಿಗಳು, ಬಂಧಿತರಿಗೆ ಮಾಹಿತಿ ನೀಡುತ್ತಿದ್ದರು. ಬಳಿಕ ಹೆಣ್ಣುಮಕ್ಕಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ದುಬೈ, ಕುವೈತ್ ಹಾಗೂ ಸೌದಿ ಅರೆಬಿಯಾ ರಾಷ್ಟ್ರಗಳಲ್ಲಿ ಹೆಚ್ಚು ವೇತನ ನೀಡುವ ಕೆಲಸಕ್ಕೆ ಕಳುಹಿಸಿಕೊಡುತ್ತೇವೆ ಎಂದು ನಂಬಿಸಿ ಅವರನ್ನು ಬೆಂಗಳೂರಿಗೆ ಕರೆತರುತ್ತಿದ್ದರು. ಕಾಟನ್ ಪೇಟೆ ಮುಖ್ಯ ರಸ್ತೆಯ ಸಮೀಪ ಕಟ್ಟಡವೊಂದನ್ನು ಬಾಡಿಗೆಗೆ ಪಡೆದುಕೊಂಡು ಮೂರು ನಾಲ್ಕು ದಿನಗಳ ಕಾಲ ಕೂಡಿ ಹಾಕಿ, ಅವರು ವಿದೇಶಗಳಿಗೆ ತೆರಳಲು ಬೇಕಾದ ವ್ಯವಸ್ಥೆ ಮಾಡುತ್ತಿದ್ದರು.