ಮುಂಬಯಿ : ಕಳೆದ ಎರಡು ದಶಕಗಳಿಂದ ಮುಂಬಯಿ ಮಹಾ ನಗರ ಪಾಲಿಕೆ ಆಡಳಿತೆಯನ್ನು ತನ್ನ ಕೈಯಲ್ಲಿ ಹೊಂದಿರುವ ಶಿವಸೇನೆಗೆ, ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀ, ನಗರದಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದ ಜಲಾವೃತವಾಗಿರುವುದು ತೀವ್ರ ಮುಜುಗರ ಉಂಟುಮಾಡಿದೆ.
ನಿನ್ನೆ ರಾತ್ರಿಯಿಂದೀಚೆಗೆ ಸುರಿಯುತ್ತಿರುವ ಭಾರೀ ಮಳೆಗೆ ಮುಂಬಯಿ ಮಹಾ ನಗರಿ ಬಹುತೇಕ ಕೃತಕ ನೆರೆಯಲ್ಲಿ ಮುಳುಗಿದ್ದು ‘ರಾಜ್ಯದಲ್ಲಿನ ಆಳುವ ಬಿಜೆಪಿ ಮತ್ತು ಶಿವಸೇನೆಯ ಮೈತ್ರಿ ಸರಕಾರದ ಭ್ರಷ್ಟಾಚಾರದ ಫಲವೇ ಇದಾಗಿದೆ’ ಎಂದು ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪಕ್ಷ, ಆರೋಪಿಸಿವೆ.
ಮುಂಬಯಿ ಹೊರ ವಲಯದ ಬಾಂದ್ರಾದ ಕಾಲಾನಗರ ಕಾಲನಿಯಲ್ಲಿರುವ ಉದ್ಧವ್ ಠಾಕ್ರೆ ಅವರ ಮಾತೋಶ್ರೀ ನಿವಾಸದ ಹೊರ ಭಾಗ ಸಂಪೂರ್ಣವಾಗಿ ಜಲಾವೃತವಾಗಿದೆ. ಇಲ್ಲಿ ಮೊಣಕಾಲು ಮಟ್ಟದ ವರೆಗೂ ನೀರು ತುಂಬಿರುವುದು ಜನ ಮತ್ತು ವಾಹನಗಳಿಗೆ ಭಾರೀ ತೊಂದರೆಯಾಗಿದೆ.
ಮುಂಬಯಿ ಪೂರ್ವ ಮಲಾಡ್ ನಲ್ಲಿ ಮಳೆ ಸಂಬಂಧಿ ದುರಂತಗಳಲ್ಲಿ ಈ ವರೆಗೆ 19 ಮಂದಿ ಮೃತಪಟ್ಟಿದ್ದು ಅನೇಕರು ಗಾಯಗೊಂಡಿದ್ದಾರೆ. ನೆರೆಯ ಪುಣೆಯಲ್ಲಿ ಕೂಡ ಹಲವರು ಅಸುನೀಗಿದ್ದಾರೆ.
ಬೃಹನ್ ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ (ಬಿಎಂಸಿ) ಆಡಲಿತೆಯು ಕಳೆದ ಎರಡು ದಶಕಗಳಿಂದ ಶಿವಸೇನೆಯ ಕೈಯಲ್ಲಿದ್ದು ಇದು ದೇಶದಲ್ಲೇ ಅತ್ಯಂತ ಸಿರಿವಂತ ನಗರಾಡಳಿತೆಯಾಗಿದೆ.
ಠಾಕ್ರೆ ನಿವಾಸಕ್ಕೆ ಸಮೀಪದ ಕುರ್ಲಾ ಪ್ರದೇಶದಲ್ಲಿನ ತನ್ನ ನಿವಾಸ ಕೂಡ ಮಳೆಯಲ್ಲಿ ಮುಳುಗಿರುವ ಕಾರಣ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ಸೇನೆಯನ್ನು “ಮಳೆ-ಭ್ರಷ್ಟಾಚಾರ’ಕ್ಕಾಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.