Advertisement

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

12:50 PM Dec 19, 2024 | Team Udayavani |

ಬೆಳ್ತಂಗಡಿ: ಕುತ್ಲೂರು ಗ್ರಾಮಕ್ಕೆ ಅಂಟಿದ್ದ ನಕ್ಸಲ್‌ ನಂಟೇನೋ ಕಳಚಿದರೂ ಅಲ್ಲಿನ ಜನರಿಗೆ ಸಂಕಷ್ಟದ ಮೇಲೆ ಸಂಕಷ್ಟ ಕಾಡುತ್ತಲೇ ಇದೆ.

Advertisement

ಮೂಲ ಸೌಕರ್ಯದ ಕೊರತೆ ನಡುವೆ ಕಾಡು ಪ್ರಾಣಿ ಹಾವಳಿ, ಅಭಿವೃದ್ಧಿ ಹೊಂದದ ರಸ್ತೆಗಳು, ಮುರಿದ ಸೇತುವೆ, ಅಸಮರ್ಪಕ ವಿದ್ಯುತ್‌ ಸಂಪರ್ಕ, ಕೈಕೊಡುವ ಸೋಲಾರ್‌ ಹೀಗೆ… ಪಟ್ಟಿ ಬೆಳೆಯುತ್ತಾ ಸಾಗುತ್ತದೆ.

ಕುತ್ಲೂರು ಪೇಟೆಯಿಂದ ಕಾಡಬಾಗಿಲು ಅಲಂಬ-ಕುರಿಯಾಡಿಯಾಗಿ ಪಂಜಾಲ್‌ ಸೇರುವ 8 ಕಿ.ಮೀ. ರಸ್ತೆಯಲ್ಲಿ ಕಾಡಬಾಗಿಲು-ಮುರುವಾಜೆ ಎಂಬಲ್ಲಿ ಒಂದೂವರೆ ವರ್ಷದ ಹಿಂದೆ ಕುಸಿದ ಸೇತುವೆವೆ ಇನ್ನೂ ಪರ್ಯಾಯ ವ್ಯವಸ್ಥೆ ಆಗಿಲ್ಲ. ಈ ವಿಚಾರವಾಗಿ ಸಲ್ಲಿಕೆಯಾದ ಮನವಿಗಳು ಕಡತ ಸೇರಿದ್ದು ಬಿಟ್ಟರೆ ಆದಿವಾಸಿಗಳ ನೆರವಿಗೆ ಬಂದಿಲ್ಲ.

35 ವರ್ಷದ ಹಳೆ ಸೇತುವೆ
ಕುತ್ಲೂರು ಮುರುವಾಜೆ ಬಳಿ ಸುಮಾರು 35 ವರ್ಷದ ಹಿಂದೆ 80 ಮೀಟರ್‌ ಉದ್ದದ ಸೇತುವೆ ಜಿ.ಪಂ. ವಿಭಾಗದ ಅಡಿಯಲ್ಲಿ ನಿರ್ಮಿಸಲಾಗಿತ್ತು. ಕಳೆದೆರಡು ವರ್ಷಗಳ ಹಿಂದೆಯೇ ಅಪಾಯದಲ್ಲಿದ್ದ ಸೇತುವೆ ದುರಸ್ತಿಗೆ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ ನಿರ್ಲಕ್ಷ್ಯದ ಪರಿಣಾಮ ಸೇತುವೆ ಕುಸಿದು ಬಿದ್ದಿದೆ. ಆಗ ಸದ್ಯಕ್ಕೆಂದು ಸೇತುವೆಯ ಕೆಳಭಾಗದಲ್ಲಿ ಪರ್ಯಾಯ ರಸ್ತೆ ನಿರ್ಮಿಸಲಾಗಿದೆ. ಈಗ ಇದೇ ಗತಿ ಎಂಬಂತಾಗಿದೆ.

ತುರ್ತು ಪರಿಸ್ಥಿತಿಯದ್ದೇ ಚಿಂತೆ
ತುರ್ತು ಆಸ್ಪತ್ರೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಅಕ್ಕಿ ಪಡಿತರ ತರಲು ಇದೇ ರಸ್ತೆ ಯನ್ನು ಜನ ಅವಲಂಬಿಸಿದ್ದಾರೆ. ಆದರೆ ಈ ರಸ್ತೆ, ಸೇತುವೆ ಎರಡೂ ಸುಸ್ಥಿತಿಯಲ್ಲಿಲ್ಲ. ಈ ಭಾಗದಲ್ಲಿ 150ಕ್ಕೂ ಅಧಿಕ ಕುಟುಂಬಗಳಿದ್ದು, 600ಕ್ಕೂ ಅಧಿಕ ಜನಸಂಖ್ಯೆಯಿದೆ.

Advertisement

ಕುತ್ಲೂರು ಪೇಟೆಯಿಂದ ಸಾಗಿದರೆ 8 ಕಿ.ಮೀ. ರಸ್ತೆಯು ಪಂಜಾಲ್‌ ಎಂಬಲ್ಲಿಗೆ ತಲುಪುತ್ತದೆ. ಈ ಪ್ರದೇಶದಲ್ಲಿ 32 ಮಲೆಕುಡಿಯ ಕುಟುಂಬಗಳಿದ್ದು 200ಕ್ಕೂ ಅಧಿಕ ಜನಸಂಖ್ಯೆಯಿದೆ. ಆದರೆ ಕುತ್ಲೂರಿಂದ ಅಲಂಬವರೆಗೆ ಡಾಮರು ರಸ್ತೆಯಿದ್ದು ಬಳಿಕ 4 ಕಿ.ಮೀ. ತೀರ ಹದಗೆಟ್ಟ ಮಣ್ಣಿನ ರಸ್ತೆಯಲ್ಲೇ ಸಾಗಬೇಕು. ಸ್ವಾತಂತ್ರ್ಯ ಸಿಕ್ಕಿ ಅದೆಷ್ಟೋ ಚುನಾವಣೆಗಳು ಆಮಿಷದಲ್ಲೇ ಕಳೆದು ಹೋಗಿದೆ ಹೊರತು ಬದುಕುವ ಹಕ್ಕಿದ್ದರೂ ಮೂಲ ಸೌಕರ್ಯ ದೊರೆತಿಲ್ಲ.

ಕುತ್ಲೂರಿಗೆ ಬೇಕಿರುವುದು
– ನಾರಾವಿ ಗ್ರಾಮದಲ್ಲಿರುವ ಪಶು ಆಸ್ಪತ್ರೆಗೆ ವೈದ್ಯರ ನೇಮಕ
– ನೂಜೋಡಿ ಎಂಬಲ್ಲಿ 25 ಮಲೆಕುಡಿಯ ಕುಟುಂಬಕ್ಕೆ ಅಕ್ರಮ ಸಕ್ರಮ ಮಂಜೂರಾತಿ
– ನಿರಂತರ ವಿದ್ಯುತ್‌, ಸಾಧ್ಯವಾಗದ ಜಾಗಕ್ಕೆ ಸೋಲಾರ್‌ ವ್ಯವಸ್ಥೆ
– ಎಫ್‌.ಸಿ.ಆ್ಯಕ್ಟ್‌ನಲ್ಲಿ ಅನುಮತಿ ಪಡೆದು ವಿದ್ಯುತ್‌ ಸಂಪರ್ಕ
– ಬಂತ್ರುಗುಡ್ಡೆ ಬಳಿ 110 ಕಿ.ವಿ. ಸಬ್‌ಸ್ಟೇಷನ್‌ ನಿರ್ಮಾಣಕ್ಕೆ 4 ಎಕ್ರೆ ಜಾಗ ಮೀಸಲಿಟ್ಟಿದೆ.
– ನಾರಾವಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿ ವೈದ್ಯರ ನೇಮಕ

ಅಭಿವೃದ್ಧಿಗೆ ಅರಣ್ಯ ಇಲಾಖೆ ತಕರಾರು
ಶತಮಾನಗಳಿಂದ ವಾಸವಾಗಿದ್ದ ಕುಟುಂಬಕ್ಕೆ ಅರಣ್ಯ ಇಲಾಖೆಯದ್ದೇ ಚಿಂತೆ. ಅರಣ್ಯ ಇಲಾಖೆ ಬರುವುದಕ್ಕಿಂತ ಮೊದಲೇ ಇಲ್ಲಿ ಜನ ವಾಸವಾಗಿದ್ದರು. ಆದರೆ ಮುರುವಾಜೆ ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಕರಾರಿದೆ ಎಂಬುದು ಊರವರ ಮಾತು. ಇದಕ್ಕೆ ಪರ್ಯಾಯವಾಗಿ ಕುತ್ಲೂರು ಕೊಡಮಣಿತ್ತಾಯ ದೇವಸ್ಥಾನವಾಗಿ ಮರ್ದೊಟ್ಟು ಸಾಗಿ ಉದುಂಬರಟ್ಟ ಎಂಬಲ್ಲಿ ಸೇತುವೆ ನಿರ್ಮಾಣಕ್ಕೂ ಅವಕಾಶವಿದೆ. ಹಾಗಾದಲ್ಲಿ ಸುಮಾರು 150 ಕುಟುಂಬಕ್ಕೆ ಅನುಕೂಲವಾಗಲಿದೆ. ಇದನ್ನಾದರೂ ಮಾಡಲಿ ಎಂದು ಕುತ್ಲೂರು ಗ್ರಾ.ಪಂ. ಸದಸ್ಯ ಸಂತೋಷ್‌ ಮರ್ದೊಟ್ಟು ಆಗ್ರಹಿಸಿದ್ದಾರೆ.

ಹಿಂದೆ ನಕ್ಸಲರ ಭಯ; ಈಗ ಕಾಡುಪ್ರಾಣಿಗಳ ಆತಂಕ
ಕುತ್ಲೂರು ಭಾಗದಲ್ಲಿ ಹದಿನೈದು ವರ್ಷಗಳ ಹಿಂದೆ ನಕ್ಸಲರ ಆತಂಕವಿತ್ತು. ಮನೆಗೆ ಬಂದು ದಿನಸಿ ವಸ್ತು ಪಡೆಯುತ್ತಿದ್ದರಂತೆ. ಆದರೆ ಈಗ ಅವರ ಭಯವಿಲ್ಲ, ಆದರೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಕಡವೆ, ಕಾಡುಹಂದಿ, ಆನೆ, ಚಿರತೆ ಮನೆಬಾಗಿಲಿಗೆ ಬರುತ್ತವೆ. ಇದರಿಂದ ಮುಕ್ತಿ ಇಲ್ಲದಂತಾಗಿದೆ. ಅದಕ್ಕೇ ಕುತ್ಲೂರು ಒಂದು ಸಂಕಷ್ಟದ ಊರೇ ಸರಿ.

ಕಾಡಬಾಗಿಲು-ಮುರುವಾಜೆ ಸೇತುವೆ ಹಾನಿಯಾಗಿದ್ದ ಸಂದರ್ಭ ಮಳೆಹಾನಿ ಪ್ಯಾಕೇಜ್‌ನಡಿ ಅನುದಾನ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಸೇತುವೆ ಕುಸಿದು ಬಿದ್ದ ಬಳಿಕ ನೂತನ ಸೇತುವೆ ನಿರ್ಮಾಣಕ್ಕೆ 2 ಕೋ.ರೂ. ಅಂದಾಜು ಪಟ್ಟಿ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗಿದೆ.
-ನಿತಿನ್‌, ಎಇಇ, ಜಿ.ಪಂ. ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ.

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next