ಪುನೀತ್ ಅಭಿನಯದ “ನಟಸಾರ್ವಭೌಮ’ ಚಿತ್ರದ ಮುಹೂರ್ತವಾಗಿದ್ದು, ಪುನೀತ್ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆಯಾಗಿದ್ದು ಎಲ್ಲವೂ ಗೊತ್ತೇ ಇದೆ. ಈಗ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಬಿರುಸಿನಿಂದ ಸಾಗಿದೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಹಿರಿಯ ನಟಿ ಬಿ. ಸರೋಜ ದೇವಿ ಅವರು ಒಂದು ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ಸರೋಜ ದೇವಿ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸಿ ಹತ್ತು ವರ್ಷಗಳೇ ಆಗಿವೆ. “ತಿಮ್ಮ’ ಎಂಬ ಚಿತ್ರದಲ್ಲಿ ನಟಿಸಿದ್ದ ಅವರು, ಆ ನಂತರ “ಪ್ರಾರಂಭ’ ಎಂಬ ಕಿರುಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಬಿ. ಸರೋಜ ದೇವಿ ಅವರು ಯಾವೊಂದು ಚಿತ್ರದಲ್ಲಿ ನಟಿಸಿರಲಿಲ್ಲ.
ಈಗ ಬಹಳ ವರ್ಷಗಳ ನಂತರ “ನಟಸಾರ್ವಭೌಮ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪುನೀತ್ ಮತ್ತು ಸರೋಜ ದೇವಿ ಅವರು ಒಟ್ಟಿಗೆ ನಟಿಸುತ್ತಿರುವುದು ಇದು ಮೊದಲೇನಲ್ಲ. ಪುನೀತ್ ಬಾಲನಟರಾಗಿದ್ದಾಗ ಅವರ ಜೊತೆಗೆ “ಯಾರಿವನು’ ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರ 1984ರಲ್ಲಿ ಬಿಡುಗಡೆಯಾಗಿತ್ತು. ಈಗ 34 ವಷಗಳ ನಂತರ ಬಿ. ಸರೋಜ ದೇವಿ ಹಾಗೂ ಪುನೀತ್ ಒಟ್ಟಿಗೆ ನಟಿಸುತ್ತಿದ್ದಾರೆ.
ರಾಕ್‌ಲೈನ್ ವೆಂಕಟೇಶ ನಿರ್ಮಾಣದ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ. “ರಣವಿಕ್ರಮ’ ನಂತರ ಪುನೀತ್-ಪವನ್ ಜೋಡಿಯ ಎರಡನೇ ಸಿನಿಮಾವಿದು. ಈಗಾಗಲೇ “ನಟ ಸಾರ್ವಭೌಮ’ ಚಿತ್ರೀಕರಣ ಕೂಡಾ ಆರಂಭವಾಗಿದೆ.
ಈ ಚಿತ್ರಕ್ಕಾಗಿ ಪುನೀತ್ ಹೇರ್‌ಸ್ಟೈಲ್ ಕೂಡಾ ಬದಲಾಗಿದ್ದು, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಆರಂಭದಲ್ಲಿ ಈ ಚಿತ್ರಕ್ಕೆ ಪ್ರಿಯಾಂಕಾ ಜ್ವಾಲಕರ್ ನಾಯಕಿಯಾಗಿದ್ದರು. ಈಗ ಅವರು ಬದಲಾಗಿದ್ದು, ರಚಿತಾ ರಾಮ್‌ಗೆ ಪುನೀತ್ ಸಿನಿಮಾದಲ್ಲಿ ಮತ್ತೂಮ್ಮೆ ಅವಕಾಶ ಸಿಕ್ಕಿದೆ. ಚಿತ್ರಕ್ಕೆ ವೈದಿ ಛಾಯಾಗ್ರಹಣ, ಇಮಾನ್ ಡಿ ಸಂಗೀತವಿದೆ.