ಪುಂಜಾಲಕಟ್ಟೆ: ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಸರಪಾಡಿ ಬಳಿಯ ಬೀಯಪಾದೆ ಎಂಬಲ್ಲಿ ಪೊಲೀಸರು ಶನಿವಾರ ರಾತ್ರಿ ಪತ್ತೆ ಹಚ್ಚಿದ್ದು ವಾಹನ ಸಹಿತ ಜಾನುವಾರುಗಳನ್ನು ವಶ ಪಡಿಸಿಕೊಂಡಿದ್ದು, ಓರ್ವ ನನ್ನು ಬಂಧಿಸಿದ್ದಾರೆ.
ಆರೋಪಿ, ಚಾಲಕ ಮುಡಿಪು ನಿವಾಸಿ ಮಹಮ್ಮದ್ ಹನೀಫ್ ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಸಾಗಾಟಕ್ಕೆ ಬಳಸಿದ್ದ ಪಿಕಪ್ ವಾಹನ ಮತ್ತು ದನ, ಹೋರಿ ಹಾಗೂ ಎರಡು ಕರುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಾನುವಾರುಗಳನ್ನು ಅಮಾನುಷ ವಾಗಿ ತುಂಬಿಸಲಾಗಿದ್ದು, ಎಸ್ ಐ ಪ್ರಸನ್ನ ನೇತೃತ್ವದಲ್ಲಿ ಪೊಲೀಸರು ರಕ್ಷಿಸಿದ್ದಾರೆ.
ಕಣ್ಣೂರು ಬಿರ್ಪುಗುಡ್ಡೆ ಇಬ್ರಾಹಿಂ ಎಂಬಾತ ಕೊಟ್ಟುಂಜ ಬಾಲಕೃಷ್ಣ ಪೂಜಾರಿಯಿಂದ ಖರೀದಿ ಮಾಡಿದ ಜಾನುವಾರುಗಳನ್ನು ಪರವಾನಿಗೆ ರಹಿತವಾಗಿ ಪಿಕಪ್ ವಾಹನ ಚಾಲಕ ಮಹಮ್ಮದ್ ಹನೀಫ್ ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ. ಇಬ್ರಾಹಿಂ ಮತ್ತು ಬಾಲಕೃಷ್ಣ ಪೂಜಾರಿ ಅವರ ಮೇಲೆ ಗೋವಧೆ ಪ್ರತಿಬಂಧಕ ಕಾಯಿದೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ಯಲ್ಲಿ ಎಸ್.ಐ.ಗಳಾದ ರಾಧಾಕೃಷ್ಣ, ಸುಂದರ್ ಸಿಬಂದಿಗಳಾದ ಕಿರಣ್ ಹಾಗೂ ಚಿರಿರಾನ್ ಭಾಗವಹಿಸಿದ್ದರು.