ಕೆಲವು ಸಿನಿಮಾಗಳ ಬಗ್ಗೆ ಚಿತ್ರೀಕರಣ ಆರಂಭವಾಗುವ ಮುನ್ನವೇ ಕುತೂಹಲ ಹುಟ್ಟುತ್ತವೆ. ಅದು ಟ್ರೇಲರ್, ಟೀಸರ್ ಯಾವುದೂ ರಿಲೀಸ್ ಆಗದೇ ಇದ್ದರೂ ಜನ ಮಾತ್ರ ಆ ಸಿನಿಮಾಗಳ ಬಗ್ಗೆ ಎದುರು ನೋಡುತ್ತಿರುತ್ತಾರೆ. ಈಗ ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೂಡಾ ಇಂತಹ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಜಾಹೀರಾತೊಂದು ಆರಂಭದಲ್ಲೇ ಕುತೂಹಲ ಹುಟ್ಟಿಸಿದೆ.
ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿಯವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಚಿತ್ರತಂಡ ಬಿಡುಗಡೆ ಮಾಡಿದ ಪೋಸ್ಟರ್ ಚಿತ್ರದ ಕುರಿತಾದ ಹಲವು ಅಂಶಗಳನ್ನು ಬಿಚ್ಚಿಡುತ್ತಿದೆ. ಮುಖ್ಯವಾಗಿ ಇದೊಂದು ಕ್ರೈಮ್ ಚಿತ್ರ ಎಂದು ಬಿಂಬಿತವಾಗುತ್ತಿದೆ. ಜೊತೆಗೆ ವೃತ್ತಿ, ಹೆಸರು, ಕುಟುಂಬ ಸೇರಿದಂತೆ ಹಲವು ವಿಚಾರಗಳನ್ನು ಇಲ್ಲಿ ನೀಡಲಾಗಿದೆ. ಚಿತ್ರದಲ್ಲಿ ರಕ್ಷಿತ್ ಮನು ಅಲಿಯಾಸ್ ರಾಜೇಂದ್ರ ಎಂಬ ಪಾತ್ರ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಡ್ಡಬಿಟ್ಟುಕೊಂಡಿರುವ ರಕ್ಷಿತ್ ಈ ಚಿತ್ರದಲ್ಲಿ ಮತ್ತೆ ತಮ್ಮ ಆರಂಭದ ದಿನಗಳ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೊಲೀಸ್ ಸ್ಟೇಷನ್‌ನಲ್ಲಿರುವ ಕೈದಿಗಳ ಲೆಡ್ಜರ್ ಪುಸ್ತಕದಲ್ಲಿ ರಕ್ಷಿತ್ ಶೆಟ್ಟಿಯವರ ವಿವರನ್ನು ನೀಡಿರುವ ಜಾಹೀರಾತು ಗಮನ ಸೆಳೆಯುವ ಜೊತೆಗೆ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ನಾಯಕನಿಗೆ ಅಣ್ಣ , ತಾಯಿ ಕೂಡಾ ಇರಲಿದ್ದು, ನಾಯಕ ವೃತ್ತಿಯಲ್ಲಿ ಚಾಲಕನಾಗಿರುತ್ತಾನೆ.
ಈ ಹಿಂದೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಿರ್ದೇಶನ ಮಾಡಿರುವ ಹೇಮಂತ್ ರಾವ್ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ನಿರ್ದೇ ಶಿಸುತ್ತಿದ್ದಾರೆ. ಪುಷ್ಕರ್ ಫಿಲಂಸ್‌ನಡಿ ಈ ಚಿತ್ರ ನಿರ್ಮಾಣ ವಾಗುತ್ತಿದೆ. ಸದ್ಯ ರಕ್ಷಿತ್ ಚಾರ್ಲಿ ಸಿನಿಮಾದ ಕನಸಿನಲ್ಲಿದ್ದಾರೆ. ಈ ಹಿಂದಿನ ಅವರ ಸಿನಿಮಾಗಳಿಗಿಂತ ಈ ಚಿತ್ರ ಭಿನ್ನವಾಗಿ ದೆಯಂತೆ. ಚಿತ್ರದ ಬಗ್ಗೆ ಮಾತನಾಡುವ ರಕ್ಷಿತ್, “ಚಾರ್ಲಿ’ ಸಂಪೂರ್ಣ ಭಿನ್ನ. “ಅವನೇ …’ಯಲ್ಲಿ ತುಂಬಾ ಕಾಮಿಡಿ ಮಾಡುವ, ಭಿನ್ನ ಬಾಡಿಲಾಂಗ್ವೇಜ್ ಇದ್ದರೆ “ಚಾರ್ಲಿ’ಯಲ್ಲಿ ಸೆಟಲ್ಡ್ ಆ್ಯಕ್ಟಿಂಗ್ ಇದೆ.
ಇನ್ನು ಚಿತ್ರದಲ್ಲಿ ಶ್ವಾನವೊಂದು ಪ್ರಮುಖ ಪಾತ್ರ ಮಾಡಿದೆ. ಅದರ ಮೂಡ್‌ಗೆ ತಕ್ಕಂತೆ ನಾವು ನಟಿಸಬೇಕು. ನಾವು ಎಷ್ಟೇ ಚೆನ್ನಾಗಿ ನಟಿಸಿ, ನಾಯಿಯೇನಾ ದರೂ ಸರಿಯಾಗಿ ನಟಿಸದೇ ಹೋದರೆ ಮತ್ತೆ ಶೂಟ್ ಮಾಡಬೇಕು. ಅದೇ ನಾಯಿ ಚೆನ್ನಾಗಿ ನಟಿಸಿ, ನಾವು ಇನ್ನೂ ಚೆನ್ನಾಗಿ ಮಾಡುತ್ತೇವೆ ಎಂದರೆ ಅವಕಾಶವಿರುವುದಿಲ್ಲ’ ಎನ್ನುವುದವರ ಮಾತು.