Advertisement

ದಸರಾ ಪ್ರಾಧಿಕಾರ ರಚನೆಗೆ ಸಂಘ ಸಂಸ್ಥೆಗಳ ಆಗ್ರಹ

09:59 PM Sep 10, 2019 | Lakshmi GovindaRaju |

ಮೈಸೂರು: ದಸರಾ ಪ್ರಾಧಿಕಾರ ರಚಿಸುವ ಮೂಲಕ ಪ್ರತಿ ವರ್ಷ ಆಚರಿಸುವ ದಸರಾ ಮಹೋತ್ಸವವನ್ನು ಸಾಕಷ್ಟು ಪೂರ್ವ ತಯಾರಿಯೊಂದಿಗೆ ಆಯೋಜಿಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಮೈಸೂರಿನ ವಿವಿಧ ಸಂಘ-ಸಂಸ್ಥೆಯವರು ತಿಳಿಸಿದರು. ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಮಂಗಳವಾರ ವಿವಿಧ ಸಂಘ-ಸಂಸ್ಥೆಗಳವರೊಂದಿಗೆ ಸಭೆ ನಡೆಸಿದರು.

Advertisement

ತರಾತುರಿಯಲ್ಲಿ ಆಯೋಜನೆ: ಪ್ರತಿ ವರ್ಷ ಸರ್ಕಾರ ನಾಡಹಬ್ಬ ದಸರಾ ನಡೆಸಿದರೂ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೆ ತರಾತುರಿಯಲ್ಲಿ ದಸರಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದ ದೇಶ, ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ದಸರಾ ಕಾರ್ಯಕ್ರಮಗಳಿಗೆಂದು ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರೂ ಅದರಿಂದ ಪ್ರವಾಸೋದ್ಯಮಕ್ಕೆ ಯಾವುದೇ ಪ್ರಯೋಜವಾಗದಿರುವ ಬಗ್ಗೆ ಮೈಸೂರು ಹೋಟೆಲ್‌ ಮಾಲೀಕರ ಸಂಘ, ಟೂರ್ ಆ್ಯಂಡ್‌ ಟ್ರಾವಲ್ಸ್‌ ಅಸೋಸಿಯೆಷನ್‌, ಯೋಗ ಸಂಸ್ಥೆಗಳು, ಪ್ರವಾಸಿ ಗೈಡ್‌ಗಳು, ಚಾಲಕರ ಸಂಘಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳವರು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಟೂರ್ ಆ್ಯಂಡ್‌ ಟ್ರಾವಲ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಬಿ.ಎಸ್‌. ಪ್ರಶಾಂತ್‌ ಮಾತನಾಡಿ, ಪ್ರತಿ ಬಾರಿ ದಸರಾಗೆ ಕೆಲವೇ ದಿನಗಳಿರುವಾಗ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. 10-15 ದಿನಗಳಿರುವಾಗ ಪ್ರಚಾರ ಮಾಡುತ್ತಾರೆ. ಇದರಿಂದಾಗಿ ದೇಶ-ವಿದೇಶಗಳ ಪ್ರವಾಸಿಗರು ಮೈಸೂರಿಗೆ ಬರಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಪ್ರವಾಸೋದ್ಯಮಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ, ಹೀಗಾಗಿ ದಸರಾ ಕಾರ್ಯಕ್ರಮಗಳನ್ನು ಕನಿಷ್ಠ ಆರು ತಿಂಗಳ ಮುಂಚಿತವಾಗಿ ರೂಪಿಸಿ, ದೇಶ-ವಿದೇಶಗಳಲ್ಲಿ ವ್ಯಾಪಕ ಪ್ರಚಾರ ನೀಡಿದರೆ, ಪ್ರವಾಸಿಗರು ದಸರಾಗೆ ಬರುವುದಕ್ಕೆ ಯೋಜನೆ ರೂಪಿಸಿಕೊಳ್ಳುತ್ತಾರೆ. ಆದರೆ, ಸರ್ಕಾರ ಯೋಜನೆ ರೂಪಿಸುವಲ್ಲಿ ಹಿಂದೆ ಬೀಳುತ್ತಿರುವುದರಿಂದ ದಸರಾಗೆಂದು ಕೋಟ್ಯಂತರ ರೂ. ಖರ್ಚು ಮಾಡಿದರೂ ಅದರ ಉದ್ದೇಶವೇ ಈಡೇರುತ್ತಿಲ್ಲ ಎಂದರು.

ಮೈಸೂರು ಹೋಟೆಲ್‌ ಅಸೋಸಿಯೇಷನ್‌ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಮೈಸೂರಿನಲ್ಲಿರುವ ಹೋಟೆಲ್‌ಗ‌ಳಲ್ಲಿ ಒಟ್ಟು 6500 ರೂಮ್‌ ಗಳಿವೆ. ಆದರೆ, ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದ್ದರಿಂದ ಮೈಸೂರಿನಲ್ಲಿ ಪ್ರವಾಸಿಗರನ್ನು ಉಳಿಸಿಕೊಳ್ಳುವಂತಹ ಯಾವುದೇ ಕಾರ್ಯಕ್ರಮಗಳು ಸಂಜೆಯ ವೇಳೆ ನಡೆಯುತ್ತಿಲ್ಲ. ಹೀಗಾಗಿ ಮೈಸೂರಿಗೆ ಬರುವ ಯಾವ ಪ್ರವಾಸಿಗರು ಉಳಿದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತಾವನೆ: ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿ, ಚಾಮುಂಡಿಬೆಟ್ಟ, ವಸ್ತು ಪ್ರದರ್ಶನ, ದಸರಾ ಮಹೋತ್ಸವ ಸೇರಿದಂತೆ ಪ್ರಾಧಿಕಾರ ರಚನೆಗೆ ಈ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಈ ವಿಷಯ ಸಚಿವ ಸಂಪುಟ ಸಭೆಗೆ ಬರುತ್ತಲೇ ಇಲ್ಲ ಎಂದರು.

Advertisement

ಮೈಸೂರಿನಲ್ಲಿ 300ಕ್ಕೂ ಹೆಚ್ಚು ಯೋಗ ಕೇಂದ್ರ: ಮೈಸೂರಿನಲ್ಲಿ 300ಕ್ಕೂ ಹೆಚ್ಚು ಯೋಗ ಕೇಂದ್ರಗಳಿವೆ. ವಿಶ್ವದ 45 ದೇಶಗಳಿಂದ ಯೋಗ ಕಲಿಯಲೆಂದು ಜನರು ಬರುತ್ತಿದ್ದಾರೆ. ಆದರೆ, ಅವರಿಗೆ ನೀಡಲಾಗುವ ವೀಸಾ ಅವಧಿ ಬಹಳ ಕಡಿಮೆಯಿರುವ ಕಾರಣ, ಅವರು ಹೆಚ್ಚು ದಿನ ಮೈಸೂರಿನಲ್ಲಿ ಉಳಿಯುವುದಕ್ಕೆ ಸಾಧ್ಯವಾಗುತ್ತಿಲ್ಲ, ಹಾಗಾಗಿ ಯೋಗ ವಿಶ್ವವಿದ್ಯಾಲಯವನ್ನು ಮೈಸೂರಿನಲ್ಲಿ ಸ್ಥಾಪಿಸಿ, ಶೈಕ್ಷಣಿಕ ವೀಸಾವನ್ನು ಪ್ರವಾಸಿಗರಿಗೆ ನೀಡಿದರೆ, ಅವರು ಹೆಚ್ಚು ದಿನ ಮೈಸೂರಿನಲ್ಲಿ ಉಳಿಯುತ್ತಾರೆ. ಇದರಿಂದ ಪ್ರವಾಸೋದ್ಯಮಕ್ಕೆ ಬಹಳ ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರ ನೀತಿ ರೂಪಿಸಬೇಕಿದೆ ಎಂದು ಶಾಸಕ ರಾಮದಾಸ್‌ ತಿಳಿಸಿದರು.

ಕೇರಳ ನೋಡಿ ಕರ್ನಾಟಕ ಕಲಿಯಲಿ: ಕೇರಳ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಚಾರ ನೀಡುತ್ತಿದೆ. ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರವನ್ನು ವಿಶ್ವಮಟ್ಟದಲ್ಲಿ ನೀಡಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದಾರೆ. ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಅಥವಾ ದಸರಾ ಆಚರಣಾ ಸಮಿತಿಯಿಂದ ಇಂತಹ ಪ್ರಯತ್ನ ಆಗುತ್ತಿಲ್ಲ ಎಂದು ಮೈಸೂರು ಟೂರ್ ಆ್ಯಂಡ್‌ ಟ್ರಾವಲ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಬಿ.ಎಸ್‌. ಪ್ರಶಾಂತ್‌ ಅವರು ಸಚಿವರ ಗಮನಕ್ಕೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next