ಕೋಲ್ಕತಾ: ಪ್ರವಾಸಿ ಶ್ರೀಲಂಕಾ ಮತ್ತು ಮಂಡಳಿ ಅಧ್ಯಕ್ಷರ ಇಲೆವೆನ್ ತಂಡಗಳ ನಡುವಿನ 2 ದಿನಗಳ ಅಭ್ಯಾಸ ಪಂದ್ಯ ನಿರೀಕ್ಷೆಯಂತೆ ಡ್ರಾದಲ್ಲಿ ಕೊನೆಗೊಂಡಿದೆ. ಆಗ ಆತಿಥೇಯ ತಂಡ 5 ವಿಕೆಟಿಗೆ 287 ರನ್ ಗಳಿಸಿತ್ತು. ಮೊದಲ ದಿನ ಬ್ಯಾಟಿಂಗ್ ಆರ್ಭಟ ತೋರಿದ ಶ್ರೀಲಂಕಾ 9ಕ್ಕೆ 411 ರನ್ ಪೇರಿಸಿ ಡಿಕ್ಲೇರ್ ಮಾಡಿತ್ತು.
ನಾಯಕ ಹಾಗೂ ಕೀಪರ್ ಸಂಜು ಸ್ಯಾಮ್ಸನ್ ಅವರ ಅಮೋಘ ಶತಕ ಆತಿಥೇಯರ ಇನ್ನಿಂಗ್ಸಿನ ಆಕರ್ಷಣೆಯಾಗಿತ್ತು. 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಸ್ಯಾಮ್ಸನ್ ಲಂಕಾ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 143 ಎಸೆತಗಳಿಂದ 128 ರನ್ ಬಾರಿಸಿದರು. ಸಿಡಿಸಿದ್ದು 19 ಬೌಂಡರಿ ಹಾಗೂ ಒಂದು ಸಿಕ್ಸರ್. ಅವರಿಗೆ ಆರಂಭಕಾರ ಜೀವನ್‌ಜೋತ್ ಸಿಂಗ್ (35), ಕೆಳ ಸರದಿಯ ಆಟಗಾರರಾದ ರೋಹನ್ ಪ್ರೇಮ್ (39), ಬಿ.ಪಿ. ಸಂದೀಪ್ (ಔಟಾಗದೆ 33) ಮತ್ತು ಜಲಜ್ ಸಕ್ಸೇನಾ (ಔಟಾಗದೆ 20) ಉತ್ತಮ ಬೆಂಲವಿತ್ತರು.
ಮಂಡಳಿ ಇಲೆವೆನ್ ತಂಡ ಆರಂಭಿಕ ಆಘಾತಕ್ಕೆ ಸಿಲುಕಿ 31 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಓಪನರ್ ತನ್ಮಯ್ ಅಗರ್ವಾಲ್ (16) ಮತ್ತು ವನ್‌ಡೌನ್ ಬ್ಯಾಟ್ಸ್‌ಮನ್ ಆಕಾಶ್ ಭಂಡಾರಿ (3) ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. ಆದರೆ ಸಂಜು ಸ್ಯಾಮ್ಸನ್ ಕಪ್ತಾನನ ಆಟದ ಮೂಲಕ ತಂಡದ ರಕ್ಷಣೆಗೆ ನಿಂತರು. ಇದರಲ್ಲಿ ಭರ್ಜರಿ ಯಶಸ್ಸನ್ನೂ ಕಂಡರು.
ಅಭ್ಯಾಸ ಪಂದ್ಯವಾದ್ದರಿಂದ ಲಂಕಾ ಒಟ್ಟು 14 ಮಂದಿಯನ್ನು ಬೌಲಿಂಗ್ ದಾಳಿಗಿಳಿಸಿತ್ತು! ಇವರಲ್ಲಿ ಲಹಿರು ತಿರಿಮನ್ನೆ 22ಕ್ಕೆ 2 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಂಪಾದಿಸಿದರು.ಭಾರತ-ಶ್ರೀಲಂಕಾ ಇನ್ನು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಗುರುವಾರದಿಂದ “ಈಡನ್ ಗಾರ್ಡನ್ಸ್’ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-9 ವಿಕೆಟಿಗೆ ಡಿಕ್ಲೇರ್ 411. ಮಂಡಳಿ ಅಧ್ಯಕ್ಷರ ಇಲೆವೆನ್-5 ವಿಕೆಟಿಗೆ 287 (ಅಗರ್ವಾಲ್ 16, ಜೀವನ್‌ಜೋತ್ 35, ಭಂಡಾರಿ 3, ಸ್ಯಾಮ್ಸನ್ 128, ಪ್ರೇಮ್ 39, ಸಂದೀಪ್ ಔಟಾಗದೆ 33, ಸಕ್ಸೇನಾ ಔಟಾಗದೆ 20, ತಿರಿಮನ್ನೆ 22ಕ್ಕೆ 2).