ಪಂಚಕುಲ: ಸಂಝೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣ ಸೋಮವಾರ ಹೊಸ ತಿರುವು ಪಡೆದಿದೆ. ಹರ್ಯಾಣದ ಪಂಚಕುಲದಲ್ಲಿರುವ ವಿಶೇಷ ನ್ಯಾಯಾಲಯ 2007ರಲ್ಲಿ ನಡೆದ ಸಂಝೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದ ತೀರ್ಪನ್ನು ಸೋಮವಾರ ಪ್ರಕಟಿಸಬೇಕಾಗಿತ್ತಾದರೂ, ಕೊನೇ ಕ್ಷಣದಲ್ಲಿ ನಡೆದ ಬೆಳವಣಿಗೆಯಿಂದಾಗಿ ತೀರ್ಪನ್ನು ಮುಂದೂಡಿದೆ. ಪಾಕಿಸ್ಥಾನದ ಮಹಿಳೆಯೊಬ್ಬರು ಏಕಾಏಕಿ ಕೋರ್ಟ್‌ಗೆ ಹೊಸ ಅರ್ಜಿಯೊಂದನ್ನು ಸಲ್ಲಿಸಿದ್ದು, ಪ್ರಕರಣ ಸಂಬಂಧ ತನ್ನ ದೇಶದ ಪ್ರತ್ಯಕ್ಷದರ್ಶಿ ಗಳಿಂದಲೂ ಹೇಳಿಕೆ ಪಡೆಯಬೇಕು ಎಂದು ಕೋರಿದ್ದಾರೆ. ಹೀಗಾಗಿ, ನ್ಯಾಯಾಲಯವು ಮಾ.14ರಂದು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿ ಕೊಳ್ಳುವುದಾಗಿ ತಿಳಿಸಿದೆ. ಅಲ್ಲದೆ, ತೀರ್ಪನ್ನು ಮುಂದೂಡಿರುವ ನ್ಯಾಯಾಧೀಶ ಜೈದೀಪ್ ಸಿಂಗ್, 14ರಂದು ತೀರ್ಪು ಪ್ರಕಟಿಸಲು ನಿರ್ಧರಿಸಿದ್ದಾರೆ. 12 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.6ರಂದು ಅಂತಿಮ ವಾದ ಮಂಡನೆ ಮುಕ್ತಾಯವಾಗಿತ್ತು. ಮಾ.11ಕ್ಕೆ ತೀರ್ಪು ಕಾಯ್ದಿರಿಸಲಾಗಿತ್ತು.