Advertisement

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

11:51 PM Dec 20, 2024 | Team Udayavani |

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಆರೋಪ ಪ್ರಕರಣವನ್ನು ಬೆಳಗಾವಿಯ 5ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯವು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಾದ-ಪ್ರತಿವಾದ ಆಲಿಸಿ ಮುಂದಿನ ವಿಚಾರಣೆಯನ್ನು ಇಂದಿಗೆ (ಶನಿವಾರಕ್ಕೆ) ಮುಂದೂಡಿದೆ.

Advertisement

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಿ.ಟಿ. ರವಿ ಪರ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ವಾದಿಸಿದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರ ಹಿರಿಯ ವಕೀಲ ಶ್ಯಾಮಸುಂದರ್‌ ಪ್ರತಿವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಜನಪ್ರತಿನಿಧಿಗ ಳ ವಿಶೇಷ ನ್ಯಾಯಾಲಯ ಶನಿವಾರಕ್ಕೆ ವಿಚಾರಣೆ ಮುಂದೂಡಿದೆ.

ರವಿ ಅವರ ವಕೀಲ ಅಶೋಕ್‌ ಹಾರನಹಳ್ಳಿ ವಾದವೇನು?
ಅಶೋಕ್‌ ಹಾರನಹಳ್ಳಿ ಜೆಎಂಎಫ್ಸಿ ಕೋರ್ಟ್‌ ಆದೇಶದ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದರು. ಇದನ್ನು ಕೋರ್ಟ್‌ ಪರಿಗಣಿಸಬಹುದು. ದೂರು ನೀಡಿದವರ ಸಹಿಯೇ ದೂರಿನಲ್ಲಿಲ್ಲ. ಅಶ್ಲೀಲ ಪದ ಬಳಕೆ ಮಾಡಿದ ಆರೋಪವನ್ನು ತಮ್ಮ ಕಕ್ಷಿದಾರರ ಮೇಲೆ ಮಾಡಿದ್ದಾರೆ. ತನಿಖೆ, ವಿಚಾರಣೆಗೆ ಹಾಜರಾಗದೇ ಪರಾರಿಯಾಗಬಹುದು ಎಂಬ ಕಾರಣ ಕೊಟ್ಟಿದ್ದಾರೆ. ದೂರುದಾರೆ ಸಚಿವೆ, ಅವರಿಗೆ ಬೆದರಿಕೆ ಹಾಕಲು ಸಾಧ್ಯವೇ? ಅರೆಸ್ಟ್‌ ನೋಟಿಸ್‌ ನೀಡಿದ ದಿನವೇ ರವಿ ಅವರನ್ನು ಬಂಧಿಸಲಾಗಿದೆ. ಸಾಕ್ಷಿದಾರರ ಸಹಿ ಅರೆಸ್ಟ್‌ ಮೆಮೋದಲ್ಲಿಲ್ಲ. ಸಾಕ್ಷಿ ನಾಶಮಾಡಬಹುದು ಎಂದು ಹೇಳಿದ್ದಾರೆ. ಎಫ್ಐಆರ್‌ನಲ್ಲೂ ಲಕ್ಷ್ಮೀ ಹೆಬ್ಬಾಳ್ಕರ್ ಸಹಿ ಇಲ್ಲ ಎಂದರು. ಮುಂದುವರಿದು ವಾದ ಮಂಡಿಸಿದ ಅಶೋಕ್‌ ಹಾರನಹಳ್ಳಿ,, ನಿಮ್ಮ ಲೀಡರ್‌ ಸಂವಿಧಾನದ ರೆಡ್‌ ಬುಕ್‌ ಇಟ್ಟುಕೊಂಡು ಓಡಾಡುತ್ತಾರೆ. ಆದರೆ, ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಹೀಗಾಗಿ ಈ ಕೇಸ್‌ನಲ್ಲಿ ಮಧ್ಯಾಂತರ ಜಾಮೀನು ನೀಡಬೇಕು. ಸೀತಾ ಸೊರೇನ್‌ ಕೇಸ್‌ನ ತೀರ್ಪು ಸಲ್ಲಿಕೆ ಮಾಡಿ ಕೋರ್ಟ್‌ಗೆ ಮಧ್ಯಾಂತರ ಜಾಮೀನು ನೀಡುವ ಅಧಿಕಾರ ಇದೆ ಎಂದು ವಾದಿಸಿದರು. ಸದನದ ವಸ್ತುಗಳನ್ನು ಹಾನಿಪಡಿಸಿದರೆ, ಅದನ್ನು ಪ್ರಶ್ನಿಸಬಹುದು. ಸದನದ ಮಾತುಗಳಿಗೆ ಕೇಸ್‌ ಹಾಕಲು ಅವಕಾಶ ಕೊಟ್ಟರೆ, ಸದನದಲ್ಲಿ ಸ್ವಾತಂತ್ರ್ಯವಾಗಿ ಮಾತನಾಡುವ ಹಕ್ಕು ಕಳೆದುಕೊಳ್ಳುತ್ತಾರೆ. ಒಂದು ದಿನ ಜೈಲು ವಾಸಕ್ಕೂ ಸೂಕ್ತ ಕಾರಣವಿಲ್ಲ ಎಂದು ವಾದಿಸಿದರು.

ವಕೀಲ ಶ್ಯಾಮ್‌ ಸುಂದರ್‌ ವಾದವೇನು?
ಜಾಮೀನು ಅರ್ಜಿ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಕೋರ್ಟ್‌ನ ಆದೇಶ ಪ್ರತಿ ಇನ್ನೂ ಲಭ್ಯವಾಗಿಲ್ಲ ಎಂದು ಶ್ಯಾಮ್‌ ಸುಂದರ್‌ ನ್ಯಾಯಾಲಯದ ಗಮನಕ್ಕೆ ತಂದರು. ಬಳಿಕ ಆರೋಪಿ ಅಸಾಂವಿಧಾನಿಕ ಪದ ಬಳಕೆ ಮಾಡಿದ್ದಾರೆ. ಶಾಸಕ ಮಹಿಳೆಯನ್ನು ಅವಾಚ್ಯ ಪದಗಳಿಂದ ಕರೆದಿದ್ದಾರೆ. ಪದೇಪದೆ ಹೀಗೆ ಕರೆದಿದ್ದಾರೆ. ಜೆಎಂಎಫ್ಸಿ ಕೋರ್ಟ್‌ನಲ್ಲಿ ಅರ್ಜಿ ಬಾಕಿಯಿದ್ದಾಗ ಈ ಅರ್ಜಿ ವಿಚಾರಣೆ ನಡೆಸಬಾರದು. ಜೆಎಂಎಫ್ಸಿ ಕೋರ್ಟ್‌ ಮುಂದೆ ಇರುವ ಜಾಮೀನು ಅರ್ಜಿ ಕಥೆ ಏನಾಗಬೇಕು ಎಂದು ವಾದಿಸಿದರು. ಸದನದ ಒಳಗೆ ಭಯಮುಕ್ತವಾಗಿ ಮಾತನಾಡಬೇಕಿದೆ. ಆದರೆ, ಹೀಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next