ಸಲ್ಮಾನ್‌ಖಾನ್ ಅಭಿನಯದ “ದಬಾಂಗ್ 3′ ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಹಿಂದಿ ಭಾಷೆಯ ಜೊತೆಯಲ್ಲಿ ಕನ್ನಡ, ತಮಿಳು, ತೆಲುಗು ಭಾಷೆಯಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ “ದಬಾಂಗ್ 3′ ಚಿತ್ರದ ಟ್ರೇಲರ್ ನಾಲ್ಕು ಭಾಷೆಯಲ್ಲೂ ಬಿಡುಗಡೆಯಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆಯಾದ ಟ್ರೇಲರ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.
ಹಾಗೆಯೇ, ಇದೇ ಸಂದರ್ಭದಲ್ಲಿ ಖುಷಿ ಹಂಚಿಕೊಂಡಿರುವ ನಟ ಸಲ್ಮಾನ್‌ಖಾನ್ ಅವರು, ಕನ್ನಡ ಭಾಷೆಯಲ್ಲಿ ತೆರೆ ಕಾಣುತ್ತಿರುವ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಚಿತ್ರದಲ್ಲಿ ನಟಿಸಿರುವ ಸುದೀಪ್ ಅವರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಚಿತ್ರದಲ್ಲಿ ಖಳನಟರಾಗಿ ನಟಿಸಿರುವ ಸುದೀಪ್ ಕುರಿತು ಕೇಳಿಬಂದ ಮಾತಿಗೆ, ಸಲ್ಮಾನ್ ಪ್ರತಿಕ್ರಿಯೆ ಹೀಗಿತ್ತು.
“ಕಿಚ್ಚ ಸುದೀಪ್ ಒಳ್ಳೆಯ ನಟ. ಹಾರ್ಡ್‌ವರ್ಕರ್. ಶ್ರದ್ಧೆ ಇರುವಂತಹ ವ್ಯಕ್ತಿ. ತುಂಬ ಚೆನ್ನಾಗಿ ನಟಿಸಿದ್ದಾರೆ. ಅವರು ಬ್ಯಾಂಕಾಕ್‌ಗೆ ಹೋಗಿರುವುದರಿಂದ ಇಲ್ಲಿಗೆ ಬಂದಿಲ್ಲ. ಅವರು ನನಗೆ ಇಷ್ಟದ ನಟರು. ಸಿಸಿಎಲ್ ವೇಳೆಯಿಂದಲೂ ಒಳ್ಳೆಯ ಫ್ರೆಂಡ್. ಅವರ ಅಭಿಮಾನಿಗಳಿಗೆ ಖಂಡಿತ “ದಬಾಂಗ್ 3′ ಖುಷಿ ಕೊಡುತ್ತದೆ. “ದಬಾಂಗ್’ ಸೀರಿಸ್‌ನಲ್ಲೇ “ದಬಾಂಗ್ 3′ ಭರ್ಜರಿಯಾಗಿದೆ. ಪ್ರಭುದೇವ ಜೊತೆ ಕೆಲಸ ಮಾಡುವುದೇ ಒಂದು ಖುಷಿ.
ಇನ್ನು, ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದು ಸುಲಭವಾಗಿರಲಿಲ್ಲ. ತುಂಬಾ ಕಷ್ಟವೆನಿಸಿತು. ಸುದೀಪ್ ಹೇಳಿ, ಧೈರ್ಯ ಕೊಟ್ಟಿದ್ದರಿಂದ ಸಾಧ್ಯವಾಯ್ತು’ ಎಂದು ಸುದೀಪ್ ಅವರ ಕುರಿತು ಹೇಳಿಕೊಂಡ ಸಲ್ಮಾನ್‌ಖಾನ್, “ನಮಸ್ಕಾರ ಬೆಂಗಳೂರು’ ಎನ್ನುವ ಮೂಲಕವೇ ಮಾತು ಶುರುಮಾಡಿ, ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿ’ ಎಂದು ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ನಿರ್ದೇಶಕ ಪ್ರಭುದೇವ ಅವರಿಗೆ “ಕನ್ನಡದಲ್ಲಿ ಸುದೀಪ್ ಜೊತೆ ಸಿನಿಮಾ ಮಾಡಲ್ಲವೇ? ಎಂಬ ಪ್ರಶ್ನೆ ಇಡಲಾಯಿತು.
ಅದಕ್ಕೆ ಉತ್ತರಿಸಿದ ಪ್ರಭುದೇವ, “ಖಂಡಿತ ಮಾಡ್ತೀನಿ. ಅಂಥದ್ದೊಂದು ಕಥೆ ಹುಟ್ಟುಕೊಳ್ಳಬೇಕು’ ಎಂದಷ್ಟೇ ಹೇಳಿದರು. ಅವರ ಮಾತಿಗೆ ಧ್ವನಿಗೂಡಿಸಿದ ಸಲ್ಮಾನ್‌ಖಾನ್, “ಈಗ “ದಬಾಂಗ್ 3′ ಚಿತ್ರದಲ್ಲಿ ಸುದೀಪ್ ಅವರನ್ನು ನಿರ್ದೇಶಿಸಿದ್ದಾರಲ್ಲವೇ’ ಎಂದು ಸ್ಮೈಲ್ ಕೊಟ್ಟರು. ಇವರೊಂದಿಗೆ ನಟಿಯರಾದ ಸೋನಾಕ್ಷಿ ಸಿನ್ಹಾ, ಸಾಯಿ ಮಂಜ್ರೆಕರ್ ಅವರು “ದಬಾಂಗ್ 3′ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡರು.
ಇನ್ನು, ಬಿಡುಗಡೆಯಾಗಿರುವ “ದಬಾಂಗ್ 3′ ಚಿತ್ರದ ಕನ್ನಡ ಟ್ರೇಲರ್‌ಗೆ ಸ್ವತಃ ಸಲ್ಮಾನ್ ಖಾನ್ ಅವರೇ ಧ್ವನಿ ನೀಡಿದ್ದಾರೆ. ನಿಧಾನವಾಗಿ ಹೇಳುವ ಸಂಭಾಷಣೆ ಕೇಳಿದ ಕನ್ನಡಿಗರು, ಸಲ್ಲುಭಾಯ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಬಿಡುಗಡೆಗೊಂಡಿರುವ “ದಬಾಂಗ್ 3′ ಟ್ರೇಲರ್ ನೋಡಿದವರಿಗೆ ಅದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಕನ್ನಡದ ನಟ ಸುದೀಪ್ ಅವರು ಸ್ಟೈಲಿಶ್ ವಿಲನ್ ಆಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಇನ್ನಷ್ಟು ಖುಷಿಯನ್ನು ಹೆಚ್ಚಿಸಿದೆ.
ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ “ದಬಾಂಗ್ 3′ ಚಿತ್ರಕ್ಕೆ ನಿರ್ದೇಶಕ ಗುರುದತ್ ಗಾಣಿಗ ಸಂಭಾಷಣೆ ಬರೆದರೆ, ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದಾರೆ. ಈ ಚಿತ್ರವನ್ನು ಜಾಕ್ ಮಂಜು ಅವರು ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಮತ್ತು ನಿಖಿಲ್ ದ್ವಿವೇದಿ ನಿರ್ಮಿಸಿದ್ದಾರೆ.