Advertisement

Bengaluru: ನಕಲಿ ದಾಖಲೆ ಸೃಷ್ಟಿಸಿ ರೇಂಜ್‌ ರೋವರ್‌, ಜಾಗ್ವಾರ್‌ ಸೇರಿ 17 ಕಾರುಗಳ ಮಾರಾಟ

10:49 AM Jul 17, 2024 | Team Udayavani |

ಬೆಂಗಳೂರು: ಲೋನ್‌ ಕಟ್ಟದೇ ಬಾಕಿ ಉಳಿಸಿಕೊಂಡ ಕಾರುಗಳನ್ನು ಅಡಮಾನ ಇಟ್ಟುಕೊಂಡು, ಅವುಗಳಿಗೆ ನಕಲಿ ಎನ್‌ಒಸಿ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗೋವಾ ಮೂಲದ ವ್ಯಕ್ತಿ ಸೇರಿ ಇಬ್ಬರು ಕೇಂದ್ರ ಅಪ ರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಗೋವಾದ ಆಸ್ಟಿನ್‌ ಕಾರಾಡೋಸ್‌ ಅಲಿಯಾಸ್‌ ಚಿಂಟು (37) ಮತ್ತು ಫ್ರೆಜರ್‌ಟೌನ್‌ ನಿವಾಸಿ ಸೈಯದ್‌ ರಿಯಾಜ್‌(35) ಬಂಧಿತರು. ಆರೋಪಿಗಳಿಂದ 2.56 ಕೋಟಿ ರೂ. ಮೌಲ್ಯದ ರೇಂಜ್‌ ರೋವರ್‌, ಜಾಗ್ವಾರ್‌ ಸೇರಿ ವಿವಿಧ ಕಂಪನಿಯ 17 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇಬ್ಬರು ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಕಲಿ ಎನ್‌ಒಸಿ ಪಡೆದು ಮಾರಾಟ: ಆರೋಪಿಗಳ ಪೈಕಿ ಸೈಯದ್‌ ರಿಯಾಜ್‌, ಕಳ್ಳತನ ಮಾಡಿರುವ ಕಾರುಗಳು, ವಿಮೆ ಪಾವತಿಸದ, ಲೋನ್‌ ಬಾಕಿ ಇರುವ ವಾಹನಗಳನ್ನು ಕಡಿಮೆ ಮೊತ್ತಕ್ಕೆ ಖರೀದಿ ಅಥವಾ ಅಡಮಾನ ಇಟ್ಟುಕೊಳ್ಳುತ್ತಿದ್ದ. ಬಳಿಕ ಲೋನ್‌, ವಿಮೆ ಬಾಕಿ ಇರುವ ಕಾರುಗಳ ಮೇಲೆ ಯಾವುದೇ ಲೋನ್‌ ಅಥವಾ ವಿಮೆ ಇಲ್ಲ ಎಂಬಂತೆ ಬಿಂಬಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್‌ಗಳು ಹಾಗೂ ಫೈನಾನ್ಸ್‌ಗಳಿಂದ ಎನ್‌ಒಸಿ ಪಡೆದು ಬೇರೆ ರಾಜ್ಯಗಳ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಇನ್ನು ಕಳ್ಳತನ ಕಾರುಗಳಿಗೆ ಗುಜರಿ ವಾಹನಗಳ ಎಂಜಿನ್‌ ಮತ್ತು ಚಾರ್ಸಿ ನಂಬರ್‌ ಹಾಗೂ ನಂಬರ್‌ ಪ್ಲೇಟ್‌ಗಳನ್ನು ಅಂಟಿಸಿ ಮಾರಾಟ ಮಾಡುತ್ತಿದ್ದ. ಇದೇ ರೀತಿ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಮಾರಾಟ ಮಾಡಿದ್ದಾನೆ ಎಂದು ಆಯುಕ್ತರು ಹೇಳಿದರು.

ಐಷಾರಾಮಿ ಕಾರುಗಳೇ ಟಾರ್ಗೆಟ್‌: ಮತ್ತೂಂದು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಗೋವಾ ಮೂಲದ ಆಸ್ಟಿನ್‌, ಕೆಲ ತಿಂಗಳ ಹಿಂದೆ ಮೈಸೂರಿನ ಉದ್ಯಮಿಯೊಬ್ಬರಿಂದ ರೇಂಜ್‌ ರೋವರ್‌ ಕಾರು ಖರೀದಿಸಿದ್ದ. ಈ ಕಾರಿಗೆ ಹರಿಯಾಣದ ನೋಂದಣಿಯ ಕಾರಿನ ನಂಬರ್‌ ಪ್ಲೇಟ್‌ ಅಳವಡಿಸಿ, ನಕಲಿ ದಾಖಲೆ ಸೃಷ್ಟಿಸಿ ಹಣಕಾಸು ಸಂಸ್ಥೆಗಳಿಂದ ಎನ್‌ಒಸಿ ಪಡೆದು, ದೆಹಲಿಯ ಗ್ರಾಹಕನಿಗೆ ಮಾರಿದ್ದಾನೆ. ರಾಜ್ಯದ ವ್ಯಕ್ತಿಯೊ ಬ್ಬರಿಂದ ಖರೀದಿಸಿದ್ದ ಜಾಗ್ವಾರ್‌ ಕಾರಿಗೂ ಅದೇ ರೀತಿ ನಕಲಿ ನಂಬರ್‌ ಪ್ಲೇಟ್‌ ಹಾಕಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಯುಕ್ತರು ಹೇಳಿದರು.

ಸಿಸಿಬಿಯ ಸಂಘಟಿತ ಅಪರಾಧ ವಿಭಾಗ (ಪಶ್ಚಿಮ)ದ ಎಸಿಪಿ ವಿ.ಗೋವಿಂದರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next