ಬೆಂಗಳೂರು: ನಗರದಲ್ಲಿ ಮತ್ತೆ ಟೋಯಿಂಗ್ ಕಾರ್ಯಾಚರಣೆ ಆರಂಭವಾಗಿದೆ. ಮೆಜೆಸ್ಟಿಕ್ ಸುತ್ತ-ಮುತ್ತ ಭಾರೀ ಸಂಚಾರ ದಟ್ಟಣೆ ಹಾಗೂ ಎಲ್ಲೆಂದರಲ್ಲಿ ವಾಹನ ನಿಲುಗಡೆ ನಿಯಂತ್ರಿಸಲು ವಿಶೇಷ ಆದ್ಯತೆ ಮೇರೆಗೆ ಉಪ್ಪಾರಪೇಟೆ ಸಂಚಾರ ಠಾಣೆಗೆ ಮಾತ್ರ ಟೋಯಿಂಗ್ ಮಾಡಲು ಅವಕಾಶ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಹಿಂದಿನಂತೆ ಟೋಯಿಂಗ್ ವಾಹನದಲ್ಲಿ ಒಬ್ಬರು ಎಎಸ್ಐ ಹಾಗೂ ಟೋಯಿಂಗ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ರಸ್ತೆಯಲ್ಲಿ ಸಂಚರಿಸುವಾಗ ಧ್ವನಿವರ್ಧಕಗಳ ಮೂಲಕ ಎಎಸ್ಐ ನಿಷಿಧ ಸ್ಥಳದಲ್ಲಿ ನಿಲುಗಡೆ ಮಾಡಿದ್ದ ವಾಹನಗಳ ತೆರವಿಗೆ ಕೋರಲಾಗುತ್ತದೆ. ಆದರೂ ವಾಹನ ತೆರವು ಗೊಳಿಸದಿದ್ದರೆ ವಾಹನ ಟೋಯಿಂಗ್ ಮಾಡಲಾಗು ತ್ತದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ರಾಂಗ್ ಪಾರ್ಕಿಂಗ್ ಮಾತ್ರ ದಂಡ!: ಈ ಹಿಂದೆ ರಾಂಗ್ ಪಾರ್ಕಿಂಗ್ ಹಾಗೂ ಟೋಯಿಂಗ್ ಶುಲ್ಕ ಸೇರಿ ವಾಹನ ಸವಾರರ ವಿರುದ್ಧ ದಂಡ ಹಾಕಲಾಗು ತ್ತಿತ್ತು. ಆದರೆ, ಇದೀಗ ಕೇವಲ ರಾಂಗ್ ಪಾರ್ಕಿಂಗ್ಗೆ ಮಾತ್ರ ವಿಧಿಸಲಾಗುತ್ತಿದೆ. ಬಿಬಿಎಂಪಿಯಿಂದ ಟೋಯಿಂಗ್ ವಾಹನ ಮತ್ತು ಸಿಬ್ಬಂದಿ ನೀಡಿದ್ದು, ಅದರ ಶುಲ್ಕವನ್ನು ಸಂಚಾರ ಪೊಲೀಸರು ಹಾಕುವು ದಿಲ್ಲ. ಅಲ್ಲದೆ, ಟೋಯಿಂಗ್ ಶುಲ್ಕ ವಿಧಿಸುವುದು, ಬಿಡುವುದು ಟೋಯಿಂಗ್ ವಾಹನ ಸಿಬ್ಬಂದಿಗೆ ಬಿಟ್ಟ ವಿಚಾರ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ನಗರದ ಹೃದಯಭಾಗವಾದ ಮೆಜೆಸ್ಟಿಕ್ನ ಸುತ್ತಮುತ್ತ ಅನಗತ್ಯವಾಗಿ ವಾಹನಗಳ ನಿಲುಗಡೆಗೆ ಮುಕ್ತಿ ಕಲ್ಪಿಸುವ ಉದ್ದೇಶದಿಂದ ಫ್ರೀಡ್ಂ ಪಾರ್ಕ್ ಪಕ್ಕದಲ್ಲಿ ಅತ್ಯಾಧುನಿಕ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ಲೋಕಾರ್ಪಣೆಗೊಳಿಸಿದ್ದು, ಎರಡೂವರೆ ತಿಂಗಳುಗಳು ಕಳೆದಿದೆ. ಆದರೂ ಸಹ ಸಮೀಪದ ರಸ್ತೆಗಳ ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಮಾಡುತ್ತಿದ್ದಾರೆ. ಅದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಹೀಗಾಗಿ ಬಿಬಿಎಂಪಿ ಹಾಗೂ ಸಂಚಾರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯ ಗಾಂಧಿನಗರ, ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುತ್ತಿರುವ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತಿದೆ. ಫ್ರೀಡ್ಂ ಪಾರ್ಕ್ ಬಳಿ ನಿರ್ಮಾಣವಾದ ಬಹುಮಹಡಿ ಪಾರ್ಕಿಂಗ್ ಸಂಕೀರ್ಣವನ್ನು ಜೂನ್ 20 ರಂದು ಸಾರ್ವಜನಿಕ ಬಳಕೆಗೆ ಮುಕ್ತಿಗೊಳಿಸಲಾಗಿತ್ತು. ಆದರೂ ಸಹ ನೂತನ ವ್ಯವಸ್ಥೆಯ ಕಡೆ ಆಸಕ್ತಿ ತೋರದ ವಾಹನ ಸವಾರರು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಟೋಯಿಂಗ್ ಮಾಡಿ ದಂಡ ವಿಧಿಸುವ ಕೆಲಸ ಆರಂಭಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.