Advertisement

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

12:23 PM Sep 07, 2024 | Team Udayavani |

ಬೆಂಗಳೂರು: ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ದರ ಏರಿಕೆಯ ಮೇಲೆ ಸಾರಿಗೆ ಇಲಾಖೆ ಹದ್ದಿನ ಕಣ್ಣಿರಿಸಿದ್ದು, ಆದರೂ ಗ್ರಾಹಕರ ಜೇಬಿಗೆ ದರ ಏರಿಕೆ ಹೊರೆ ತಪ್ಪಿರಲಿಲ್ಲ. ಹಬ್ಬದ ಅಂಗವಾಗಿ ಟಿಕೆಟ್‌ ದರ ಏರಿಕೆ ನಡುವೆಯೂ ಶುಕ್ರವಾರ ರಾಜಧಾನಿ ಬೆಂಗಳೂರಿನಿಂದ ರಾಜ್ಯದ ನಾನಾ ಜಿಲ್ಲೆಗಳತ್ತ ಹಲವು ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದರು.

Advertisement

ಮಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಶಿರಸಿ, ಚಿಕ್ಕಮಗಳೂರು, ಉಡುಪಿ, ಕಾರವಾರ, ವಿಜಾಪುರ ಸೇರಿದಂತೆ ಹಲವು ಕಡೆಗಳಿಗೆ ಹಬ್ಬಕ್ಕೆಂದು ತೆರಳಬೇಕಾದವರು ಹೆಚ್ಚಿನ ದರ ನೀಡಿ ಬಸ್‌ ಹತ್ತುವ ಪರಿಸ್ಥಿತಿ ಉಂಟಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಖಾಸಗಿ ಬಸ್‌ ಟಿಕೆಟ್‌ ದರವು ಏರಿಕೆಯಾಗುತ್ತಿದ್ದು, ಪ್ರಯಾಣಿಕರು ಹಿಡಿ ಶಾಪಹಾಕುತ್ತಾ ಬಸ್‌ ಏರಿದ ಸನ್ನಿವೇಶ ಕೂಡ ಕಂಡುಬಂತು.

ಈ ಮಧ್ಯೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮತ್ತು ಇಲಾಖೆ ಆಯುಕ್ತ ಎ.ಎಂ.ಯೋಗೀಶ್‌ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಅಪರ ಆಯುಕ್ತ ಮಲ್ಲಿಕಾರ್ಜುನ ನೇತೃತ್ವದಲ್ಲಿ ತಂಡ ಇದೀಗ ಕಾರ್ಯಾಚರಣೆಗೆ ಇಳಿದಿದೆ. ಖಾಸಗಿ ಬಸ್‌ ನಿರ್ವಾಹಕರ ಸುಲಿಗೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶುಕ್ರವಾರ ತಪಾಸಣೆ ಕೈಗೊಂಡಿತು.

ಕೆಂಪೇಗೌಡ ಬಸ್‌ ನಿಲ್ದಾಣ, ಆನಂದರಾವ್‌ ಸರ್ಕಲ್‌, ಗೊರಗುಂಟೆಪಾಳ್ಯ, ಹೆಬ್ಟಾಳ, ಕೆ.ಆರ್‌. ಪುರಂ, ಕೆಂಗೇರಿ, ಹೂಸೂರು ರೋಡ್‌, ಮಡಿವಾಳ ಸೇರಿ ರಾಜ್ಯಾದ್ಯಂತ ಕಾರ್ಯಾಚರಣೆಗೆ ಆರ್‌ಟಿಓ ಮುಂದಾಗಿದ್ದು, ವಿಶೇಷ ತಂಡದಿಂದ ರಾತ್ರಿಪೂರ್ತಿ ಖಾಸಗಿ ಬಸ್‌ಗಳ ತಪಾಸಣೆ ನಡೆಸಲಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚು ಟಿಕೆಟ್‌ ದರ ವಸೂಲಿ ಮಾಡಿದರೆ ಬ್ಲಾಕ್‌ಲಿಸ್ಟ್‌, ಪರ್ಮಿಟ್‌ ರದ್ದಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಹೊರ ಜಿಲ್ಲೆಗಳಿಗೆ ಬಿಎಂಟಿಸಿ ಬಸ್‌ ಕಾರ್ಯಾಚರಣೆ: 

Advertisement

ಕೆಎಸ್‌ಆರ್‌ಟಿಸಿಯಲ್ಲಿ ಬಸ್‌ಗಳ ಕೊರತೆ ಹಿನ್ನಲೆಯಲ್ಲಿ ಹೊರ ಜಿಲ್ಲೆಯಲ್ಲೂ ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿ 200 ಬಿಎಂಟಿಸಿ ಬಸ್‌ಗಳನ್ನ ಕೆಎಸ್‌ಆರ್‌ಟಿಸಿ ಬಳಸಿಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಬಿಎಂಟಿಸಿ ಬಸ್‌ಗಳು ಶಿವಮೊಗ್ಗ, ಧಾರವಾಡ, ತುಮಕೂರು, ಕೋಲಾರ, ಮೈಸೂರಿ ಭಾಗದಲ್ಲಿ ಕಾರ್ಯಾಚರಣೆ ನಡೆಸಿದವು. ಹಬ್ಬಕ್ಕೆ 1500 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಚರಣೆ ಮಾಡುತ್ತಿದ್ದರೂ ಹೆಚ್ಚುವರಿ ಬಸ್‌ಗಳ ಅವಶ್ಯಕತೆಯಿದೆ. ಇನ್ನು ಬೇಡಿಕೆ ಬಂದರೆ ಮತ್ತಷ್ಟು ಬಸ್‌ಗಳನ್ನ ನೀಡುವುದಾಗಿ ಬಿಎಂಟಿಸಿ ಸಂಚಾರಿ ವಿಭಾಗದ ಮುಖ್ಯಸ್ಥ ಪ್ರಭಾಕರ ರೆಡ್ಡಿ ಮಾಹಿತಿ ನೀಡಿದ್ದಾರೆ.

ಖಾಸಗಿ ಬಸ್‌ನಲ್ಲಿಎಲ್ಲಿ ಗೆ ಎಷ್ಟು ದರ?

ಬೆಂಗಳೂರು-ಉಡುಪಿ                 1500 ರೂ.-1700 ರೂ.

ಬೆಂಗಳೂರು -ಬಳ್ಳಾರಿ 1100 ರೂ.-1200 ರೂ.

ಬೆಂಗಳೂರು ಬಿಜಾಪುರ              1100 ರೂ.-1900 ರೂ.

ಬೆಂಗಳೂರು ಶಿರಸಿ        1600 ರೂ.-1700ರೂ.

ಬೆಂಗಳೂರು ಹುಬ್ಬಳ್ಳಿ 1600 ರೂ.-1900 ರೂ.

ಬೆಂಗಳೂರು ಮಂಗಳೂರು       1500 ರೂ .-1700 ರೂ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪ್ರಯಾಣಿಕರ ಸಂಖ್ಯೆ ತುಸು ಕಡಿಮೆಯೇ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸಾಲು ಸಾಲು ರಜೆ ಬಂದದ್ದು,ಇದಕ್ಕೆ ಕಾರಣವಿರಬಹುದು.-ವಿಕ್ರಮ್‌,  ಸರಿತಾ ಟ್ರಾವೆಲ್ಸ್‌

Advertisement

Udayavani is now on Telegram. Click here to join our channel and stay updated with the latest news.