ಬೆಂಗಳೂರು: ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಕಾರು ಎದುರು ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಮೇಲು ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ಯಶವಂತಪುರ ಠಾಣೆ ಮುಂಭಾಗದ ಮೇಲು ಸೇತುವೆ ಬಳಿ ಮಂಗಳವಾರ ಮುಂಜಾನೆ ನಡೆದಿದೆ.
ತಮಿಳುನಾಡು ಮೂಲದ ಶಬರೀಶ್(29) ಮೃತ ಟೆಕಿ. ಘಟನೆಯಲ್ಲಿ ಕಾರು ಚಾಲಕ ಮಿಥುನ್ ಚಕ್ರ ವರ್ತಿ, ಶಂಕರ್‌ರಾವ್ ಮತ್ತು ಅನುಶ್ರೀ ಹಾಗೂ ಬೈಕ್ ಚಾಲಕ ಮಂಜುನಾಥ್ ಗಾಯಗೊಂಡಿ ದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಶಂಕರ್‌ರಾವ್ ಮತ್ತು ಮಿಥುನ್ ಚಕ್ರವರ್ತಿ ಸ್ಥಿತಿ ಗಂಭೀರವಾಗಿದೆ ಎಂದು ಉತ್ತರ ಸಂಚಾರ ವಿಭಾಗದ ಡಿಸಿಪಿ ಸಿರಿಗೌರಿ ಮಾಹಿತಿ ನೀಡಿದರು.
ತಮಿಳುನಾಡು ಮೂಲದ ಶಬರೀಶ್ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ವೀಸಾ ಪಡೆಯಲು ನಗರಕ್ಕೆ ಬಂದಿದ್ದರು. ಜತೆಗೆ ನಗರದಲ್ಲಿರುವ ತಮ್ಮ ಸ್ನೇಹಿತರಾದ ಮಿಥುನ್ ಚಕ್ರವರ್ತಿ, ಶಂಕರ್ ರಾವ್ ಹಾಗೂ ಅನುಶ್ರೀ ಜತೆ ಸೋಮವಾರ ರಾತ್ರಿ ಓರಾಯನ್ ಮಾಲ್‌ನಲ್ಲಿ ಶಾಪಿಂಗ್ ಮಾಡಿ, ಪಾರ್ಟಿ ಮಾಡಿದ್ದಾರೆ. ಬಳಿಕ ಮುಂಜಾನೆ 4 ಗಂಟೆ ಸುಮಾರಿಗೆ ಊಟಕ್ಕಾಗಿ ಮಲ್ಲೇಶ್ವರನಿಂದ ಸದಾಶಿವನಗರದವರೆಗೆ ಸುತ್ತಾಡಿದ್ದಾರೆ. ಎಲ್ಲಿಯೂ ಊಟ ಸಿಕ್ಕಿಲ್ಲ. ಬಳಿಕ ಸದಾಶಿವನಗರದಿಂದ ಯಶವಂತಪುರ ಮೇಲುಸೇತುವೆ ಮಾರ್ಗವಾಗಿ ತುಮಕೂರು ಕಡೆ ಹೊರಟ್ಟಿದ್ದರು. ಆದರೆ, ಮೇಲು ಸೇತುವೆಯಲ್ಲಿ ಚಾಲಕ ಮಿಥುನ್ ಚಕ್ರವರ್ತಿ ನಿಯಂತ್ರಣ ತಪ್ಪಿ ಎದುರು ಬರುತ್ತಿದ್ದ ಬೈಕ್‌ಗೆ ಹೊಡೆದಿದ್ದಾನೆ. ಪರಿಣಾಮ ಕಾರು ಮೇಲು ಸೇತುವೆಯಿಂದ ಕೆಳಗೆ ಬಿದ್ದಿದ್ದು, ಈ ವೇಳೆ ಅನುಶ್ರೀ ಕಾರಿನ ಡೋರ್ ಓಪನ್ ಆದಾಗ ಮೇಲು ಸೇತುವೆ ರಸ್ತೆಯಲ್ಲೇ ಬಿದ್ದಿದ್ದಾರೆ. ಇನ್ನು ಮೇಲು ಸೇತುವೆಯಿಂದ ಕೆಳಗೆ ಬಿದ್ದ ಮೂವರ ಪೈಕಿ ಶಬರೀಶ್‌ಗೆ ಗಂಭೀರ ಗಾಯವಾಗಿ, ತೀವ್ರ ರಕ್ತಸ್ರಾವ ಆಗಿತ್ತು. ಕೂಡಲೇ ಸ್ಥಳೀಯರು ಮೂವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಶಬರೀಶ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಉತ್ತರ ಸಂಚಾರ ವಿಭಾಗದ ಡಿಸಿಪಿ ಸಿರಿಗೌರಿ ತಿಳಿಸಿದ್ದಾರೆ.
ಮದ್ಯದ ಬಾಟಲಿಗಳು ಪತ್ತೆ : ಪೊಲೀಸರ ಪರಿಶೀಲನೆ ವೇಳೆ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಕುಡಿದು ಗಾಡಿ ಕಾರು ಚಾಲನೆ ಮಾಡಿರುವ ಸಾಧ್ಯತೆಯಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.