Advertisement

ಸಂತರು, ರಾಮಭಕ್ತರ ಸಮಾಗಮ

12:02 PM Dec 03, 2018 | |

ಬೆಂಗಳೂರು: ರಾಮ ಜನ್ಮಭೂಮಿಯಲ್ಲೇ ಭವ್ಯ ಮಂದಿರ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌ ಭಾನುವಾರ ಬಸವನನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನಾಗ್ರಹ ಸಭೆ ಸಂತರು ಮತ್ತು ರಾಮಭಕ್ತರ ಸಮಾಗಮದ ವೇದಿಕೆಯಾಗಿತ್ತು.

Advertisement

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಇತರೆ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ರಾಮಭಕ್ತರು ಬಂದಿದ್ದರು. ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು, ಜಬಲ್‌ಪುರದ ಅಖೀಲೇಶ್ವರಾನಂದಗಿರಿ ಸ್ವಾಮೀಜಿ, ಬಾಗೇಪಲ್ಲಿಯ ಸಿದ್ಧಾನಂದ ಅವಧೂತರು, ಮೈಸೂರು ತ್ರಿಪುರಭೈರವಿ ಮಠದ ಕೃಷ್ಣ ಮೋಹನಾನಂದಗಿರಿ ಗೋಸ್ವಾಮೀಜಿ,

ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಗುರೂಜಿ, ಆದಿಚುಂಚನಗಿರಿ ಮಠದ ವಿಜಯನಗರ ಶಾಖಾ ಮಠದ ಸೌಮ್ಯಾನಾಥ ಸ್ವಾಮೀಜಿ, ಮಲ್ಲೇಶ್ವರದ ರಾಮಕೃಷ್ಣ ಸೇವಾಶ್ರಮದ ಅಭಯ ಚೈತನ್ಯ ಮಹಾರಾಜ್‌, ಹೃಷಿಕೇಶದ ಶಿವಾನಂದ ಆಶ್ರಮದ ಸಚ್ಚಿದಾನಂದ ಸ್ವಾಮೀಜಿ,

ಹಿಮಾಚಲ ಪ್ರದೇಶದ ಮಾಧವಾನಂದ ಗಿರಿ ಸ್ವಾಮೀಜಿ, ಶ್ರೀರಂಗಪಟ್ಟಣ ಶಂಕರ ಮಠದ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ನೆಲಮಂಗಲ ಶಿವಾನಂದಾಶ್ರಮದ ರಮಣಾನಂದ ಸ್ವಾಮೀಜಿ, ಬೆಂಗಳೂರಿನ ದೇವಸಂದ್ರದ ಶ್ರೀ ರಾಮಕೃಷ್ಣ ಸೇವಾ ಟ್ರಸ್ಟ್‌ನ ಚಂದ್ರೇಶಾನಂದ ಜೀ ವೇದಿಕೆಯಲ್ಲಿದ್ದು ವಿಶೇಷವಾಗಿತ್ತು.

ಶ್ರೀರಾಮನ ಜನ್ಮ ಸ್ಥಳದಲ್ಲೇ ಭವ್ಯ ಮಂದಿರ ನಿರ್ಮಾಣವಾಗಬೇಕು. ಇದಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತರಲಿ ಅಥವಾ ಸುಪ್ರೀಂ ಕೋರ್ಟ್‌ ಅನುಮತಿ ನೀಡಲಿ ಎಂಬುದು ಸಭೆಯ ಒತ್ತಾಯವಾಗಿತ್ತು. ವಿಶ್ವ ಹಿಂದೂ ಪರಿಷತ್‌ನ ಪ್ರಮುಖರಾದ ಮಿಲಿಂದ್‌ ಪರಾಂಡೆ, ಡಾ.ವಿಜಯಲಕ್ಷ್ಮೀ ದೇಶಮಾನೆ, ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಸಿ.ಆರ್‌.ಮುಕುಂದ್‌ ವೇದಿಕೆಯಲ್ಲಿದ್ದು, ರಾಮಮಂದಿರದ ತುರ್ತು ಅವಶ್ಯಕತೆ ಹಾಗೂ ಅಗತ್ಯದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

Advertisement

ವೇದಿಕೆಯಲ್ಲಿ ಭಾಷಣ ಮಾಡಿದ ಪ್ರತಿಯೊಬ್ಬರೂ “ಜೈ ಶ್ರೀರಾಮ್‌’, “ಅಯೋಧ್ಯೆಯಲ್ಲೇ ರಾಮಮಂದಿರ ಕಟ್ಟುವೆವು’ ಎಂಬಿತ್ಯಾದಿ ಘೋಷಣೆಗಳೊಂದಿಗೆ ಮಾತು ಆರಂಭಿಸುತ್ತಿದ್ದರು. ಸಭೆಯಲ್ಲಿ ನೆರೆದಿದ್ದ ಸಭಿಕರು ರಾಮ, ಆಂಜನೇಯ ಮತ್ತು ಶಿವಾಜಿಯ ಭಾವಚಿತ್ರ ಇರುವ ಕೇಸರಿ ಬಾವುಟ ಹಾರಿಸುತ್ತಾ ಜೈ ಶ್ರೀರಾಮ್‌ ಘೋಷಣೆ ಕೂಗಿ ಹುರಿದುಂಬಿಸಿದರು.

ವೇದಿಕೆಯ ಮೇಲ್ಭಾಗದಲ್ಲಿ ಭಾರತ ಮಾತೆ ಮತ್ತು ಶ್ರೀರಾಮನ ಭಾವಚಿತ್ರ ಅಳವಡಿಸಲಾಗಿತ್ತು. ಹಾಗೆಯೇ ವೇದಿಕೆಯ ಮುಂಭಾಗದಲ್ಲಿ ಶ್ರೀರಾಮ ಮತ್ತು ಹನುಮಂತನ ಪ್ರತಿಕೃತಿ ನಿರ್ಮಿಸಲಾಗಿತ್ತು. ಇನ್ನೊಂದು ಭಾಗದ ರಾಮದರ್ಬಾರ್‌ ವೇದಿಕೆ ನಿರ್ಮಿಸಿ, ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ವೇಷಧಾರಿಗಳಿಗೆ ಇಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಬಹುತೇಕರು ಇಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next