Advertisement

“ಸಾಯ್‌’ಕೋಚ್‌ ಆಗಲಿದ್ದಾರೆ ಆ್ಯತ್ಲೀಟ್‌ ಅಶ್ವಿ‌ನಿ ಅಕ್ಕುಂಜೆ

12:30 AM Feb 23, 2019 | |

ಬೆಂಗಳೂರು: ಕಾಮನ್ವೆಲ್ತ್‌, ಏಶ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಆ್ಯತ್ಲೀಟ್‌ ಅಶ್ವಿ‌ನಿ ಅಕ್ಕುಂಜೆ ಈಗ ಕೋಚಿಂಗ್‌ನತ್ತ ಮುಖ ಮಾಡಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ದ ಕೋಚ್‌ ಆಗಿ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಸಾಯ್‌ ಪ್ರಕಟಿಸಿದ 14 ಮಂದಿ ತರಬೇತುದಾರರ ಯಾದಿ ಯಲ್ಲಿ ಅಶ್ವಿ‌ನಿ ಕೂಡ ಒಬ್ಬರು. ಈ ವಿಷಯವನ್ನು “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

Advertisement

31 ವರ್ಷದ ಅಶ್ವಿ‌ನಿ ಓರ್ವ ಸಮರ್ಥ ಆ್ಯತ್ಲೀಟ್‌. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ಹಲವು ವರ್ಷ ಟ್ರ್ಯಾಕ್‌ನಲ್ಲಿ ಮಿಂಚಿ ಚಿನ್ನದ ಪದಕಗಳನ್ನು ಬೇಟೆಯಾಡಿದ ಸಾಧಕಿ. ಸಾಧನೆಯ ಜತೆಗೆ ಅವಮಾನ, ಅಪನಿಂದನೆ ಕೂಡ. ಉದ್ದೀಪನ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದ ಅಶ್ವಿ‌ನಿ ನಿಷೇಧಕ್ಕೂ ತುತ್ತಾಗಿದ್ದರು. ನಿಷೇಧದಿಂದ ಹೊರಬಂದ ಅವರು ಪಟಿಯಾಲದಲ್ಲಿ ಆ್ಯತ್ಲೀಟ್‌ ಆಗಿ ಮುಂದುವರಿದರು. ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿದ್ದರೂ ಮುಂದಿನ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಕೊನೇ ಪ್ರಯತ್ನ ನಡೆಸುವ ಗುರಿ ಹೊಂದಿದ್ದಾರೆ. ಇದಕ್ಕೂ ಮೊದಲು ಕೋಚ್‌ ಆಗಿ ಕೆಲಸಕ್ಕೆ ಸೇರಿಕೊಳ್ಳುವ ಸುಳಿವನ್ನೂ ನೀಡಿದ್ದಾರೆ.

ಬೆಂಗಳೂರಲ್ಲೇ ಕೆಲಸ ನಿರ್ವಹಿಸುವ ಕನಸು
“ಹಲವಾರು ವರ್ಷಗಳಿಂದ ನನ್ನ ಊರು, ರಾಜ್ಯ ತೊರೆದು ಪಟಿಯಾಲದಲ್ಲೇ ಇದ್ದೆ. ಇಷ್ಟು ವರ್ಷ ದೇಶಕ್ಕಾಗಿ ಕುಟುಂಬ, ಮನೆ, ಬಂಧು, ಬಳಗ ಎಲ್ಲದರಿಂದಲೂ ದೂರವಿದ್ದೆ. ಇನ್ನು ಮುಂದಾದರೂ ಸ್ವಲ್ಪ ಸಮಯ ಕುಟುಂಬಕ್ಕೆ ಮೀಸಲಿಡ ಬೇಕು ಅಂದುಕೊಂಡಿದ್ದೇನೆ. ಜತೆಗೆ ರಾಜ್ಯದ ಕ್ರೀಡಾಪಟುಗಳನ್ನು ಬೆಳೆಸಲು ನಿರ್ಧರಿಸಿದ್ದೇನೆ. ಹೀಗಾಗಿ ಬೆಂಗಳೂರಿನ ಸಾಯ್‌ನಲ್ಲಿ ಕೆಲಸ ಸಿಗಲಿ ಎನ್ನುವುದು ನನ್ನ ಆಸೆ’ ಎಂದು ಅಶ್ವಿ‌ನಿ ಹೇಳಿದರು.

ಒಲಿಂಪಿಕ್ಸ್‌ ಕೊನೆಯ ಕನಸು
“ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕನಸು ಕಂಡಿದ್ದೇನೆ. ಗಾಯದಿಂದಾಗಿ ಇದು ಸಾಧ್ಯ ವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಕೊನೆಯ ದಾಗಿ ನನ್ನ ಪ್ರಯತ್ನ ನಡೆಸುತ್ತೇನೆ. ಇದರಲ್ಲಿ ವಿಫ‌ಲ ಳಾದರೆ ಬೇಸರವಾಗುವುದಿಲ್ಲ. ಪ್ರಯತ್ನಿಸಿದ ಸಂತೋಷ ನನಗಿರುತ್ತದೆ’ ಎನ್ನುತ್ತಾರೆ ಅಶ್ವಿ‌ನಿ. 

ಹೊಸ ಇನ್ನಿಂಗ್ಸ್‌, ಹೊಸ ಸವಾಲು
“ಬ್ಯಾಂಕ್‌ ಮ್ಯಾನೇಜರ್‌ ಹುದ್ದೆ ತೊರೆದು ಕೋಚ್‌ ಆಗಬೇಕೆಂದುಕೊಂಡಿರುವೆ. ಭವಿಷ್ಯದ ಆ್ಯತ್ಲೀಟ್‌ಗಳನ್ನು ರೂಪಿಸುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡುವುದು ನನ್ನ ಜೀವನದ ಬಹುದೊಡ್ಡ ಕನಸು. ಕೆಲವರು ನನಗೆ ಅಕಾಡೆಮಿ ಆರಂಭಿಸಿದರೆ ಒಳ್ಳೆಯದು ಎನ್ನುವ ಸಲಹೆ ನೀಡಿದರು. ಆದರೆ ನಾನು ಅಕಾಡೆಮಿ ತೆರೆದು ಹಣ ಸಂಪಾದಿಸಲು ಇಷ್ಟಪಡುವುದಿಲ್ಲ. ಮುಂದಿನೆರಡು ತಿಂಗಳ ಒಳಗಾಗಿ ಸಾಯ್‌ ಕೋಚ್‌ ಆಗಿ ಕೆಲಸಕ್ಕೆ ಸೇರುವುದು ಬಹುತೇಕ ಖಚಿತಗೊಂಡಿದೆ. ಅದಕ್ಕೂ ಮೊದಲು ನಾನು ಕೆಲಸ ನಿರ್ವಹಿಸುತ್ತಿರುವ ಬ್ಯಾಂಕ್‌ನಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಸಿಗಬೇಕಿದೆ’                           
ಅಶ್ವಿ‌ನಿ ಅಕ್ಕುಂಜೆ

Advertisement

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next