ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಾನಾ ರೀತಿಯಲ್ಲಿ ಹರಕೆಗಳನ್ನು ಕೊಡುವುದುಂಟು ಅದು ಚಿನ್ನ, ಬೆಳ್ಳಿ, ಹಣ, ಸೀರೆ ಹಾಗೂ ದವಸಧಾನ್ಯ ಹೀಗೆ ಹತ್ತು ಹಲವು ರೀತಿಯಲ್ಲಿ ಇರಬಹುದು…. ಆದರೆ ಇಲ್ಲಿರುವ ದೇವರಿಗೆ ಅದ್ಯಾವುದೂ ಬೇಡ ಕೇವಲ ಮಣ್ಣಿನಿಂದ ಮಾಡಿದ ಗೊಂಬೆಗಳೇ ಹರಕೆಯ ವಸ್ತುಗಳು.. ಅರೆ ಇದೇನಿದು ಎಂದು ಹೆಬ್ಬೇರಿಸಬೇಡಿ ನಾವೀಗ ಹೇಳ ಹೊರಟಿರುವುದು ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದಲ್ಲಿರುವ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಬಗ್ಗೆ…
ಅಂದಹಾಗೆ ಈ ಸದಾಶಿವ ರುದ್ರನ ಕ್ಷೇತ್ರವಿರುವುದು ಬೆಳ್ತಂಗಡಿ ತಾಲೂಕಿನ ಉಜಿರೆಯ ನಡ ಗ್ರಾಮದ ಸುರ್ಯ ಎಂಬಲ್ಲಿ. ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ಧವಾದ ಈ ದೇವಸ್ಥಾನವು ರಮಣೀಯವಾದ ಪ್ರಕೃತಿಯ ಮಡಿಲಲ್ಲಿದೆ. ಯಾವುದೇ ಬಯಕೆ ಈಡೇರುವಂತೆ ಕಟ್ಟಿಕೊಂಡ ಹರಕೆಯನ್ನು ಇಲ್ಲಿ ತೀರಿಸುವುದು ಬಲು ಸುಲಭ ಎಂಬ ಕಾರಣಕ್ಕೆ ಇಲ್ಲಿ ಭಕ್ತರ ದಂಡೇ ಬಂದಿಳಿಯುತ್ತದೆ.
ದಟ್ಟ ಅರಣ್ಯದ ಮಧ್ಯೆ ನೆಲೆನಿಂತ ಸದಾಶಿವ ರುದ್ರ ದೇವಸ್ಥಾನದ ಹಿಂದೆ ಯಾರಿಗೂ ಗೊತ್ತಿರದ ರೀತಿಯಲ್ಲಿ ಅಜ್ಞಾತವಾಗಿತ್ತು ಕಾಲಕ್ರಮೇಣ ಇಲ್ಲಿನ ದೇವರ ಶಕ್ತಿ ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಅರಿವಾಗತೊಡಗಿತು ಅದರಂತೆ ಇಂದು ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿದೆ.
ಮಕ್ಕಳಾಗದವರು, ವ್ಯವಹಾರದಲ್ಲಿ ಹಿನ್ನಡೆ, ಮನೆಕಟ್ಟುವ ಕನಸು ಕಾಣುವವರು, ಹೊಸ ವಾಹನ ಕೊಳ್ಳಲು ನಿರ್ಧರಿಸಿದವರು, ಅನಾರೋಗ್ಯದಿಂದ ಬಳಲುವವರು, ಹೊಸ ಕೆಲಸ ಹುಡುಕುವವರು ಈ ದೇವರನ್ನು ಮನಸ್ಸಿನಲ್ಲಿ ನೆನೆದರೆ ತಮ್ಮ ಇಷ್ಟಾರ್ಥಗಳೆಲ್ಲಾ ನೆರವೇರುತ್ತದೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ, ಭಕ್ತರು ತಾವು ಮನಸಿನಲ್ಲಿ ಎಣಿಸಿದ ಆಸೆಗಳು ಸಿದ್ಧಿಯಾದ ಬಳಿಕ ಈ ಕ್ಷೇತ್ರಕ್ಕೆ ಬಂದು ಮಣ್ಣಿನ ಮೂರ್ತಿಯ ಹರಕೆ ತೀರಿಸುವ ಮೂಲಕ ಹರಕೆ ಸಂದಾಯ ಮಾಡುತ್ತಾರೆ. ಅಂದಹಾಗೆ ನಿಮಗೆ ಬೇಕಾದ ಮಣ್ಣಿನ ಮೂರ್ತಿಗಳು ದೇವಸ್ಥಾನದಲ್ಲೇ ಸಿಗುತ್ತದೆ ಅದರ ಬೆಲೆ ಕೂಡಾ ತುಂಬಾ ಕಡಿಮೆಯಾಗಿದ್ದು ಸುಮಾರು 20 ರೂಗಳಿಂದ 200 ರೂಗಳ ವರೆಗೆ ಇರುತ್ತದೆ. ಅಷ್ಟು ಮಾತ್ರವಲ್ಲದೆ ಭಕ್ತರು ತಾವೇ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಹರಕೆ ರೂಪದಲ್ಲಿ ನೀಡಬಹುದು ಆದರೆ ಮೂರ್ತಿಗಳು ಯಾವುದೇ ಕಾರಣಕ್ಕೂ ಒಡೆದಿರಬಾರದು ಎನ್ನುತ್ತಾರೆ ದೇವಸ್ಥಾನದ ಆಡಳಿತ ಮಂಡಳಿ.
ತಾವು ಬೇಡಿಕೊಂಡ ಹರಕೆ ಈಡೇರಿದ ಬಳಿಕ ಹರಕೆ ತೀರಿಸುವವರು ದೇವಸ್ಥಾನಕ್ಕೆ ಮಹಾಪೂಜೆಯ ಮೊದಲು ಭೇಟಿ ನೀಡುವುದು ಉತ್ತಮ ಈ ವೇಳೆ ಅಕ್ಕಿ ತೆಂಗಿನಕಾಯಿ ಇಟ್ಟ ಹರಿವಾಣದಲ್ಲಿ ಮಣ್ಣಿನ ಗೊಂಬೆಯನ್ನು ದೇವರ ಎದುರು ಇಟ್ಟು ಅರ್ಪಿಸಬೇಕು. ಇಷ್ಟಾದ ಮೇಲೆ ಮಧ್ಯಾಹ್ನದ ಮಹಾಪೂಜೆಯ ಮೊದಲು ಇವುಗಳನ್ನು ಅಲ್ಲೇ ಸಮೀಪದಲ್ಲಿರುವ ‘ಹರಕೆ ಬನ’ ದೊಳಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಅರ್ಚಕರು ಪೂಜೆ ಮಾಡಿದ ಬಳಿಕ ಮೂರ್ತಿಗಳನ್ನು ಬನದಲ್ಲಿ ಜೋಡಿಸುತ್ತಾರೆ. ಇಲ್ಲಿ ಲಕ್ಷಾಂತರ ಮಂದಿ ತಮ್ಮ ಇಷ್ಟಾರ್ಥ ಸಿದ್ಧಿಯಾದ ಬಳಿಕ ಹರಕೆ ತೀರಿಸಿದ ಮಣ್ಣಿನ ಮೂರ್ತಿಗಳು ಕಾಣ ಸಿಗುತ್ತವೆ.
ಲಕ್ಷಾಂತರ ರೂಪಾಯಿ ದುಂದುವೆಚ್ಚ ಮಾಡಿ ಹರಕೆ ತೀರಿಸುವ ಬದಲು ಈ ರೀತಿಯಾಗಿ ಹರಕೆ ತೀರಿಸುವ ಈ ಕ್ಷೇತ್ರದ ಮಹಿಮೆ ನಿಜಕ್ಕೂ ಮೆಚ್ಚಲೇ ಬೇಕು.. ಅಲ್ಲದೆ ಭಕ್ತರು ತಾವು ತಮ್ಮ ಮನದಲ್ಲಿ ಎಣಿಸಿದ ಕಾರ್ಯ ಸಿದ್ಧಿಯಾಗಿರುವುದಕ್ಕೆ ಹರಕೆ ಬಣದಲ್ಲಿರುವ ಮಣ್ಣಿನ ಮೂರ್ತಿಗಳೇ ಸಾಕ್ಷಿ.
ಅಲ್ಲದೆ ಈ ಮೂರ್ತಿಗಳು ಪರಿಸರ ಸ್ನೇಹಿಯಾಗಿದ್ದು ಮಳೆಗಾಲದಲ್ಲಿ ಮಳೆನೀರಿನಲ್ಲಿ ಕರಗಿ ಹೋಗುತ್ತವೆ.
ಹರಕೆ ಮೂರ್ತಿಗಳನ್ನು ತಯಾರಿಸುವ ಕುಂಬಾರ ಕುಟುಂಬವೊಂದು ಇಲ್ಲಿದ್ದು. ಇವರು ಎಲ್ಲಾ ರೂಪದ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಹರಕೆಗೆ ಸಮರ್ಪಿಸುವ ಮೂರ್ತಿಗಳಲ್ಲಿ ಬಿರುಕು ಇರಬಾರದು ಎಂಬ ಕಾರಣಕ್ಕೆ ಆವೆಮಣ್ಣನ್ನು ಕುಲುಮೆಯಲ್ಲಿ ಚೆನ್ನಾಗಿ ಬೇಯಿಸಿ ರೂಪಕೊಡುತ್ತಾರೆ. ಹಿಂದೆಲ್ಲಾ ಇತರ ಮಣ್ಣಿನ ಪಾತ್ರೆಗಳನ್ನೂ ತಯಾರಿಸುತ್ತಿದ್ದ ಈ ಕುಟುಂಬ ಇಂದು ಭಕ್ತರ ಬೇಡಿಕೆಯ ಮೂರ್ತಿಗಳನ್ನು ಮಾತ್ರ ತಯಾರಿಸುತ್ತದೆ. ಒಂದು ವೇಳೆ ನಿಮ್ಮ ಹರಕೆಯ ಮೂರ್ತಿ ದೇವಸ್ಥಾನದ ಸಂಗ್ರಹದಲ್ಲಿ ಇಲ್ಲವೆಂದಾದರೆ ಒಂದು ವಾರದೊಳಗೆ ತಯಾರಿಸಿಕೊಡುವ ಜವಾಬ್ದಾರಿಯನ್ನೂ ಈ ಕುಟುಂಬ ವಹಿಸಿಕೊಳ್ಳುತ್ತದೆ.
ಪ್ರಸುತ್ತ ಆನುವಂಶಿಕವಾಗಿ ಸೂರ್ಯಗುತ್ತು ಮನೆತನದ ಆಡಳಿತಕ್ಕೆ ಒಳಪಟ್ಟಿದೆ. ಭಕ್ತರ ಸಂಖ್ಯೆ ಹೆಚ್ಚಿದಂತೆ ನಿತ್ಯ ಮಧ್ಯಾಹ್ನದ ಊಟವೂ ಆರಂಭವಾಗಿದೆ. ಅನ್ನಛತ್ರ ಹಾಗೂ ಅತಿಥಿಗೃಹಗಳ ನಿರ್ಮಾಣವೂ ಆಗಿದೆ. ‘ದೂರದಿಂದ ಬರುವ ಭಕ್ತರಿಗೆ ಮಣ್ಣಿನ ಮೂರ್ತಿ ಸಿಗುವಂತಾಗಬೇಕು ಎಂಬ ಕಾರಣಕ್ಕೆ ದೇವಸ್ಥಾನದ ಆವರಣದಲ್ಲೇ ಎಲ್ಲಾ ಮೂರ್ತಿಗಳು ಸಿಗುವಂಥ ವ್ಯವಸ್ಥೆ ಇಲ್ಲಿ ಮಾಡಲಾಗಿದೆ.
ಸುರ್ಯ ಹೆಸರಿನ ಹಿನ್ನೆಲೆ:
ಹಿಂದೆ ಮಹಿಳೆಯೊಬ್ಬಳು ತನ್ನ ಮಗ ಸುರೆಯ ಎಂಬಾತನೊಂದಿಗೆ ಸೊಪ್ಪು ತರಲು ಕಾಡಿಗೆ ಹೋಗಿದ್ದಳಂತೆ. ಕತ್ತಿಯಿಂದ ಸೊಪ್ಪು ಕತ್ತರಿಸುವಾಗ ಸೊಪ್ಪಿನೆಡೆಯಲ್ಲಿ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿತಾಗಿ ರಕ್ತ ಚಿಮ್ಮಿ ಹರಿಯಿತಂತೆ. ಆಗ ಗಾಬರಿಗೊಂಡ ಮಹಿಳೆ ತನ್ನ ಮಗನನ್ನು ‘ಸುರೆಯಾ’ ಎಂದೂ ಕೂಗಿದಳಂತೆ. ಆ ಘಟನೆಯ ಬಳಿಕ ಈ ಕ್ಷೇತ್ರಕ್ಕೆ ‘ಸುರಿಯ, ಸುರ್ಯ’ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಆ ಬಳಿಕ ಊರಿನ ಮುಖ್ಯಸ್ಥರು, ಗ್ರಾಮಸ್ಥರು ಒಟ್ಟಾಗಿ ಅಲ್ಲೇ ಸಮೀಪದಲ್ಲಿರುವ ದೇಗುಲ ನಿರ್ಮಾಣ ಮಾಡಿದರಂತೆ. ಕತ್ತಿಯೇಟಿಗೆ ಸಿಲುಕಿದ ಆ ಲಿಂಗರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಿಸಲಾಯಿತು ಎಂದು ನಂಬಲಾಗಿದೆ.
ಹರಕೆ ಬನದ ಮೂಲದ ಬಗ್ಗೆಯೂ ಒಂದು ಇತಿಹಾಸವಿದೆ. ಭೃಗು ಮಹರ್ಷಿಯ ಶಿಷ್ಯರೊಬ್ಬರು ಈ ಜಾಗದಲ್ಲಿ ತಪಸ್ಸು ಮಾಡುತ್ತಿದ್ದರಂತೆ. ಅವರ ತಪಸ್ಸಿಗೊಲಿದ ಶಿವಪಾರ್ವತಿಯರು ಪ್ರತ್ಯಕ್ಷವಾಗಿ ಇದೇ ಸ್ಥಳದಲ್ಲಿ ಲಿಂಗರೂಪದಲ್ಲಿ ನೆಲೆಯಾದರು ಎಂದು ನಂಬಲಾಗಿದೆ. ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆಗಳು ಹಾಗೂ ಶಿಲಾಪಾದಗಳಿವೆ.
ಮಾರ್ಗ ಹೇಗೆ :
ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ 13 ಕಿ.ಮೀ, ಜೊತೆಗೆ ಉಜಿರೆಯಿಂದ ಮೂರು ಕಿ.ಮೀ ದೂರ ಹಾಗೂ ಬೆಳ್ತಂಗಡಿ ಪೇಟೆಯಿಂದ ಕಿಲ್ಲೂರು ಮಾರ್ಗವಾಗಿ ಎಂಟು ಕಿ.ಮೀ. ದೂರವಿದ್ದು. ದೇವಸ್ಥಾನ ಬೆಳಗ್ಗೆ ಏಳರಿಂದ ಮಧ್ಯಾಹ್ನದ ಎರಡರವರೆಗೆ ಹಾಗೂ ಸಂಜೆ ನಾಲ್ಕರಿಂದ 6.30ರವರೆಗೆ ತೆರೆದಿರುತ್ತದೆ.