Advertisement

Sadananda Suvarna; ಭೂತಕ್ಕಷ್ಟೇ ಅಲ್ಲ; ಭವಿಷ್ಯತ್ತಿಗೂ ಸದಾನಂದರು ಸುವರ್ಣ ನೆನಪು

11:52 PM Jul 16, 2024 | Team Udayavani |

ರಂಗಭೂಮಿ-ಚಲನಚಿತ್ರ ರಂಗದ ಬೆರಳೆಣಿಕೆಯ ಸೃಜನಶೀಲ ಪ್ರತಿಭೆಗಳಲ್ಲಿ ಸದಾನಂದ ಸುವರ್ಣ ಅದ್ವಿತೀಯರು. ನಟ, ನಿರ್ದೇಶಕ, ರಂಗತಜ್ಞ, ಲೇಖಕ, ಪ್ರಕಾಶಕ, ಸಂಘಟಕ… ಹೀಗೆ ನಾನಾ ಕೋನಗಳಿಂದ ವ್ಯಕ್ತಿತ್ವ ರೂಪಿಸಿದ ಸುವರ್ಣರು ಸದಾಕಾಲ ನೆನಪಿನಲ್ಲಿ ಉಳಿಯುವ ಪ್ರಯೋಗಶೀಲ ಮನಸ್ಸಿನವರು.

Advertisement

ಮುಂಬಯಿ ಕನ್ನಡ ರಂಗಭೂಮಿಗೆ ಚಲನಶೀಲತೆ ತಂದುಕೊಟ್ಟ, ಕರಾವಳಿ ಭಾಗದಲ್ಲಿಯೂ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಸುವರ್ಣ ಅವರ ಒಂದೊಂದು ಹೆಜ್ಜೆಗಳು ಬರಹಕ್ಕೆ ನಿಟುಕದು. ರಂಗಭೂಮಿಯ ಜತೆಗೆ ಸಿನೆಮಾ, ಧಾರಾವಾಹಿ, ಸಾಹಿತ್ಯ ಹೀಗೆ ಎಲ್ಲ ಕಡೆಯೂ ದೃಷ್ಟಿ ಬೀರಿದ ಅವರು ಚಿಕಿತ್ಸಕ ದೃಷ್ಟಿಯಿಂದ ಹೊಸ ಮನ್ವಂತರವನ್ನು ರೂಪಿಸಿದವರು. ಅಧ್ಯಯನ, ಚಿಂತನೆ, ಬದ್ಧತೆ, ಪ್ರಯೋಗಶೀಲತೆ, ಕಲಾತ್ಮಕತೆ ಹಾಗೂ ಮಾನವೀಯತೆಗಳ ಸುಂದರ ರೂಪಕವಾಗಿ ಅವರು ಪಡಿಮೂಡಿದ್ದರು.

ಚಲನಚಿತ್ರದಲ್ಲಿಯೂ ತೊಡಗಿಸಿದ ಅವರು ತಬರನ ಕತೆ, ಮನೆ, ಕ್ರೌರ್ಯ ಮುಂತಾದ ಚಿತ್ರದ ನಿರ್ವಾಹಕ ನಿರ್ಮಾಪಕರು. ಕುಬಿ ಹಾಗೂ ಇಯಾಲ ಸಿನೆಮಾವನ್ನು ನಿರ್ದೇಶಿಸಿದ್ದರು. ಅದಕ್ಕೆ ರಾಜ್ಯ ಪ್ರಶಸ್ತಿಯೂ ಬಂದಿತ್ತು.

ನಾವು ರಂಗಭೂಮಿಯನ್ನು ಹೊಸ ದೃಷ್ಟಿಕೋನದಿಂದ ನೋಡಲು ಮೊದಲು ಪ್ರೇರಣೆಯಾದದ್ದು ಸದಾನಂದ ಸುವರ್ಣ ಅವರಿಂದ. ಆ ಕಾಲಕ್ಕೆ ದೂರದರ್ಶನದಲ್ಲಿ ಬರುತ್ತಿದ್ದ “ಗುಡ್ಡೆದ ಬೂತ’ ಅನ್ನುವ ಧಾರಾವಾಹಿ ತನ್ನ ವಿಶಿಷ್ಟ ಧಾಟಿಯ ಹಾಡಿನಿಂದಲೇ ಬಹಳ ಪ್ರಸಿದ್ಧಿ ಪಡೆದಿತ್ತು. ಅದರಲ್ಲಿ ಬರುವ “ಕಮರೊಟ್ಟು’ ಗ್ರಾಮ ಮತ್ತು ಪಾಡªನ ಶೈಲಿ ನಮಗೆಲ್ಲ ಬಾಯಿಪಾಠ ಆಗಿತ್ತು.ಮುಂಬಯಿಯಲ್ಲಿದ್ದ ಸದಾನಂದ ಸುವರ್ಣ ಅವರು ಧುತ್ತನೆ ಮಂಗಳೂರಿಗೆ ಬಂದು ಇಲ್ಲಿನ ಪ್ರಬುದ್ಧ ಕಲಾವಿದರಿಗೆ “ಉರುಳು’ ಎನ್ನುವ ನಾಟಕ ಕೈಗೆತ್ತಿಕೊಂಡು ನಿರ್ದೇಶಿಸಿದರು.

ರಂಗಮಿತ್ರ ಜಗನ್‌ ಪವಾರ್‌ ಬೇಕಲ್‌ ಅವರ ಒತ್ತಾಸೆಯ ಮೇರೆಗೆ ಮಂಗಳೂರಿನಲ್ಲಿ ರಂಗ ಚಟುವಟಿಕೆ ಆರಂಭಿಸಿದ ಸದಾನಂದ ಸುವರ್ಣರ ಉರುಳು ನಾಟಕ ನಮಗೆಲ್ಲ ಹೊಸ ಚೈತನ್ಯ ಮತ್ತು ಪ್ರೇರಣೆ ಕೊಟ್ಟಿದ್ದು ಮಾತ್ರವಲ್ಲ. ಆಧುನಿಕ ರಂಗಭೂಮಿಯ ಬಗ್ಗೆ ಹೊಸ ಹೊಳಹನ್ನೂ ತೋರಿಸಿಬಿಟ್ಟಿತ್ತು.

Advertisement

ಆ ಮೇಲೆ ಸದಾನಂದ ಸುವರ್ಣರ ನಿರ್ದೇಶನದಲ್ಲಿ ಹೊಸ ನಾಟಕ “ಕೋರ್ಟ್‌ ಮಾರ್ಶಲ್‌’ ಬಂತು. ಅದರಲ್ಲಿ “ಕ್ಯಾಪ್ಟನ್‌ ಬಿಕಾಶ್‌ ರಾಯ್‌’ ಪಾತ್ರಕ್ಕೆ ನನ್ನನ್ನು ಆರಿಸಿದ ಸದಾನಂದ ಸುವರ್ಣರು ನಮಗೆ ನೀಡಿದ ತರಬೇತಿ, ಪಾತ್ರ ಕಟ್ಟುವ ಬಗೆ, ಸಂಭಾಷಣೆಯ ಶೈಲಿ, ಮಾತಿನ ಏರಿಳಿತಗಳ ಅರಿವು ಮಾಡಿಕೊಟ್ಟದ್ದು ನನ್ನ ರಂಗಭೂಮಿಯ ಪಯಣಕ್ಕೆ ಬಹಳ ದೊಡ್ಡ ಕೊಡುಗೆ. ಅವರ ನಿರ್ದೇಶನ ಮತ್ತು ಅನನ್ಯ ಪ್ರತಿಭೆ ಕಂಡು ಬೆರಗಾಗಿ ಹೋಗಿದ್ದೆ. ನಾವು ಅವರೊಂದಿಗೆ ರಾಜ್ಯ, ಹೊರರಾಜ್ಯದಲ್ಲಿ ಕೋರ್ಟ್‌ ಮಾರ್ಶಲ್‌ ನಾಟಕದ ನೂರಾರು ಪ್ರದರ್ಶನ ನೀಡಿದ್ದು ಮರೆಯಲಾಗದ ಒಳ್ಳೆಯ ಅನುಭವ. ಅನಂತರ ನಮಗಾಗಿ ಅವರು “ಮಳೆ ನಿಲ್ಲುವವರೆಗೆ’ ಎನ್ನುವ ಕನ್ನಡ ಮತ್ತು “ಕಳಂಕ್‌ ನೀರ್‌’ ಅನ್ನುವ ತುಳು ನಾಟಕವನ್ನೂ ನಿರ್ದೇಶಿಸಿದ್ದರು.

ಸದಾನಂದ ಸುವರ್ಣರು ಬಹಳಷ್ಟು ಸ್ನೇಹಮಯಿಯಾಗಿದ್ದರೂ ನಾಟಕದ ತಾಲೀಮಿಗೆ ಬಂದರೆ ಮಿಲಿಟ್ರಿ ಶಿಸ್ತಿನ ಅಧಿಕಾರಿಯಾಗಿ ಬದಲಾಗುತ್ತಿದ್ದರು. ಪ್ರತಿಯೊಂದು ಪಾತ್ರವನ್ನೂ ಅವರೇ ಅಭಿನಯಿಸಿ ತೋರಿಸಿ ಆ ಪಾತ್ರದ ಆಳ ಅಗಲಗಳನ್ನು ವಿವರಿಸಿ ಹೇಳುತ್ತಿದ್ದರು. ಪ್ರತೀ ಸಂಭಾಷಣೆಯನ್ನೂ ಅವರೇ ಅಳೆದು ತೂಗಿ ಹೇಗೆ ಹೇಳಬೇಕೆಂದು ಹೇಳಿಕೊಡುತ್ತಿದ್ದರು.
ನಾನು ಬಿಡುವಾದಾಗಲೆಲ್ಲ ಸುವರ್ಣರ ಮನೆಗೆ ಹೋಗುತ್ತಿದ್ದೆ. ಅಲ್ಲಿ ಬಹಳ ಹೊತ್ತು ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಅವರ ಅಗಾಧ ಜ್ಞಾನವನ್ನು ನಮಗೂ ಹಂಚುತ್ತಿದ್ದ ಸುವರ್ಣರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಅನಾರೋಗ್ಯವಿದ್ದರೂ ಇತ್ತೀಚೆಗೆ ನಮ್ಮ ರಂಗಸಂಗಾತಿ ಆಯೋಜಿಸಿದ ನಾಟಕೋತ್ಸವದಲ್ಲಿ ಗಾಲಿಕುರ್ಚಿಯಲ್ಲಿ ಬಂದು ಕುಳಿತು ಪೂರ್ತಿ ನಾಟಕ ನೋಡಿ ಸಂತೋಷಪಟ್ಟಿದ್ದರು. ವೈಯಕ್ತಿಕವಾಗಿ ನನ್ನ ಮೇಲೆ ಅವರಿಗೆ ವಿಶೇಷ ಪ್ರೀತಿ ಮತ್ತು ಮಮತೆ. ಓರ್ವ ಸರಳ ಸಜ್ಜನ ವ್ಯಕ್ತಿಯಾಗಿ ಮತ್ತು ಮಿತಭಾಷಿಯಾಗಿ ಸದಾನಂದ ಸುವರ್ಣರು ನಮಗೆಲ್ಲ ಸ್ಪೂರ್ತಿಯ ಸೆಲೆ.

ಒಂದು ಪೀಳಿಗೆಗೆ ಆಧುನಿಕ ನಾಟಕದ ಗೀಳು ಹುಟ್ಟಿಸಿ ರಂಗಭೂಮಿಯತ್ತ ಹೊರಳಲು ಪ್ರೇರಕ ಶಕ್ತಿಯಾಗಿದ್ದ ಸದಾನಂದ ಸುವರ್ಣರು ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ ಅವರು ರಂಗಭೂಮಿಗೆ ಕೊಟ್ಟ ಕೊಡುಗೆ ಮತ್ತು ನಿರ್ದೇಶಿಸಿದ ನಾಟಕಗಳು, ಅವರ ಪಾತ್ರ ಪೋಷಣೆಯ ಪರಿ ಇವೆಲ್ಲವೂ ಮುಂದಿನ ಪೀಳಿಗೆಗೆ ಮಾದರಿ. ಅವರ ಅಗಲುವಿಕೆ ಕನ್ನಡ ಆಧುನಿಕ ರಂಗಭೂಮಿಗೆ ಬಹಳ ದೊಡ್ಡ ನಷ್ಟ. ಅವರ ಒಂದೊಂದು ಹೆಜ್ಜೆಗಳು ಯಾವತ್ತಿಗೂ ಶಾಶ್ವತ.

-ಗೋಪಿನಾಥ್‌ ಭಟ್‌
ರಂಗಭೂಮಿ ಕಲಾವಿದರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next