Advertisement

South India Film Industry: ಸಿನೆಮಾ ರಂಗ ಕಳಂಕ ಮುಕ್ತವಾಗಲಿ

01:53 AM Sep 02, 2024 | Team Udayavani |

ದೇಶದ ಚಿತ್ರರಂಗದಲ್ಲಿ ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ಬಹುತೇಕ ಭಾಷೆಗಳ ಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಸಾರ್ವತ್ರಿಕವಾಗಿ ಕೇಳಿಬರತೊಡಗಿವೆ.

Advertisement

ಎರಡು ವಾರಗಳ ಹಿಂದೆಯಷ್ಟೇ ಮಲಯಾಳ ಚಿತ್ರರಂಗದಲ್ಲಿ ನಟನೋರ್ವನ ವಿರುದ್ಧ ಮಹಿಳಾ ನಟಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ವರದಿಯ ಬೆನ್ನಲ್ಲೇ ಈಗ ಪ್ರತಿನಿತ್ಯ ಎಂಬಂತೆ ನೆರೆ ರಾಜ್ಯಗಳಲ್ಲಿನ ಸಿನೆಮಾ ಕ್ಷೇತ್ರದಲ್ಲೂ ಇಂತಹುದೇ ಆರೋಪಗಳು ಸರಣಿಯೋಪಾದಿಯಲ್ಲಿ ಕೇಳಿ ಬರತೊಡಗಿವೆ. ಈ ಆರೋಪಗಳು ಕೇವಲ ಆಯಾಯ ರಾಜ್ಯಗಳ ಚಿತ್ರೋದ್ಯಮ ದಲ್ಲಿ ತಲ್ಲಣಕ್ಕೆ ಕಾರಣವಾಗಿರುವುದಷ್ಟೇ ಅಲ್ಲದೆ ಇಡೀ ಚಿತ್ರರಂಗದ ಬಗೆಗೆ ದೇಶದ ಜನತೆಯಲ್ಲಿ ಒಂದಿಷ್ಟು ತಾತ್ಸಾರದ ಮನೋಭಾವ ಮೂಡುವಂತೆ ಮಾಡಿದೆ.

ಮಲಯಾಳ ಚಿತ್ರರಂಗದ ಬೆಳವಣಿಗೆಯ ಬಳಿಕ ಇಡೀ ಚಿತ್ರರಂಗದ ಒಂದೊಂದೇ ಹುಳುಕುಗಳು ಹೊರಬರತೊಡಗಿವೆ. 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರಕಾರ ತನಿಖೆಗಾಗಿ ರಚಿಸಿದ್ದ ಸಮಿತಿಯ ವರದಿ ಮಲಯಾಳ ಚಿತ್ರರಂಗವನ್ನು ಬೆತ್ತಲಾಗಿಸಿದೆ. ಅತ್ಯುತ್ತಮ ಕಥೆ, ಅಭಿನಯ, ತಂತ್ರಜ್ಞಾನದ ಸದ್ಬಳಕೆ, ನಟ-ನಟಿಯರ ಮನೋಜ್ಞ ಅಭಿನಯದ ಮೂಲಕ ಕೇವಲ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ವಿಶ್ವದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿರುವ ಮಲಯಾಳ ಚಿತ್ರರಂಗಕ್ಕೆ ಈಗ ಅಂಟಿರುವ ಲೈಂಗಿಕ ಕಿರುಕುಳ, ನಟ-ನಟಿಯರ ಅಸಹ್ಯ ನಡವಳಿಕೆ, ವರ್ತನೆಗಳು ಮಸಿ ಬಳಿದಿವೆ. ತಮಿಳು ಮತ್ತು ತೆಲುಗು ಚಿತ್ರರಂಗದ ಹಿರಿಯ ನಟಿಯರು ತಾವು ಕೂಡ ಇಂತ ಹುದೇ ಕಿರುಕುಳಕ್ಕೆ ಒಳಗಾಗಿದ್ದೆವು ಎಂದು ತಮ್ಮ ಅಳಲು ತೋಡಿಕೊಳ್ಳಲಾ ರಂಭಿಸಿದ್ದಾರೆ. ಅತ್ತ ಬಂಗಾಲಿ ಚಿತ್ರರಂಗದಲ್ಲೂ ಮೀ ಟೂ ಸದ್ದು ಮಾಡಿದೆ.

ಚಿತ್ರರಂಗದಲ್ಲಿ ಇಂತಹ ಆರೋಪ, ನಟ-ನಟಿಯರ ದುರ್ವರ್ತನೆಗಳು ಹೊಸದಲ್ಲವೇನಾದರೂ ಈ ಬಾರಿ ಅದು ಹೆದ್ದೆರೆಯಾಗಿ ಸಿನೆಮಾ ರಂಗವನ್ನು ಕಾಡಿದೆ. ಹಲವು ರಾಜ್ಯಗಳಲ್ಲಿ ಈ ಲೈಂಗಿಕ ಕಿರುಕುಳ, ನಿರ್ಮಾಪಕ, ನಿರ್ದೇಶಕರ ದುರ್ವ ರ್ತನೆ, ನಟಿ-ನಟಿಯರ ನಡುವಣ ಸಂಬಂಧ, ಸಂಭಾವನೆಯಲ್ಲಿ ತಾರ ತಮ್ಯ, ಚಿತ್ರೀಕರಣ ಆದಿಯಾಗಿ ಸಿನೆಮಾ ನಿರ್ಮಾಣದ ಸಂದರ್ಭದಲ್ಲಿ ನಟಿ ಯರಿಗೆ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸದಿರುವುದು, ಅಪ್ರಾಪ್ತ ವಯ ಸ್ಕರಿಗೆ ನೀಡಲಾಗುತ್ತಿರುವ ಕಿರುಕುಳ, ಕಾನೂನುಬಾಹಿರವಾಗಿ ಅಪ್ರಾಪ್ತ ವಯ ಸ್ಕರನ್ನು ದುಡಿಸಿಕೊಳ್ಳುವುದು ಸಹಿತ ಸಿನೆಮಾ ಕ್ಷೇತ್ರದಲ್ಲಿನ ಹತ್ತು ಹಲವು ಸಮಸ್ಯೆಗಳು ಮುನ್ನೆಲೆಗೆ ಬಂದಿವೆ.

ಕೇರಳ ಸಹಿತ ವಿವಿಧ ರಾಜ್ಯಗಳಲ್ಲಿ ಕಾಲಕಾಲಕ್ಕೆ ಈ ಎಲ್ಲ ವಿಷಯಗಳ ಕುರಿತಂತೆ ಅಧ್ಯಯನ ನಡೆಸಲು ರಚಿಸಲಾಗಿದ್ದ ವಿವಿಧ ಸಮಿತಿಯ ವರದಿಗಳನ್ನು ಆಯಾಯ ಸರಕಾರಗಳು ಬಿಡುಗಡೆ ಮಾಡಿ ಅವುಗಳಲ್ಲಿ ಉಲ್ಲೇಖೀಸಲಾಗಿರುವ ವಿಷಯಗಳತ್ತ ಗಮನ ಹರಿಸಬೇಕು.

Advertisement

ಇಂದು ಸಿನೆಮಾ ಕೇವಲ ಮನೋರಂಜನೆಗಷ್ಟೇ ಸೀಮಿತವಾಗಿರದೆ ಸಮಾಜ ದಲ್ಲಿ ಜಾಗೃತಿ ಉಂಟುಮಾಡುವ ಕಾರ್ಯವನ್ನು ಮಾಡುತ್ತಿದೆ. ಇಂದಿನ ಯುವ ಪೀಳಿಗೆ ಸಿನೆಮಾ ನಟ-ನಟಿಯರ ಮೇಲೆ ಅತಿಯಾದ ಅಭಿಮಾನವಿರಿಸಿ ಕೊಂಡಿದ್ದು, ಇಂತಹ ವರ್ತನೆಗಳು ಯುವಪೀಳಿಗೆಯ ಹಾದಿ ತಪ್ಪಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಇಡೀ ಚಿತ್ರೋದ್ಯಮದ ಆಗು-ಹೋಗುಗಳ ಮೇಲೆ ನಿಗಾ ಇರಿಸ ಬೇಕು. ಕಾನೂನಿಗೆ ವಿರುದ್ಧವಾಗಿ ನಡೆಯುವ ಕಾರ್ಯಚಟುವಟಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.

ಅಗತ್ಯ ಬಿದ್ದಲ್ಲಿ ಸೂಕ್ತ ಕಾನೂನು ತಿದ್ದುಪಡಿ ತಂದು ಚಿತ್ರೋದ್ಯಮವನ್ನು ಒಪ್ಪ ಓರಣವಾಗಿಸುವ ಕಾರ್ಯ ಮಾಡಬೇಕು. ಇದರ ಜತೆ ಇಡೀ ಚಿತ್ರರಂಗ ಆಮೂಲಾಗ್ರ ಚಿಂತನೆ ನಡೆಸಿ, ತನ್ನ ಮೇಲೆ ಅಂಟಿರುವ ಕಳಂಕವನ್ನು ತೊಡೆದುಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕು. ಚಿತ್ರೋದ್ಯಮದಲ್ಲಿನ ಯಾವುದೇ ಬೆಳವಣಿಗೆ ಕೇವಲ ಒಂದು ಮನೆ, ಕುಟುಂಬಕ್ಕೆ ಸೀಮಿತವಾಗಿರದೆ ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಚಿತ್ರರಂಗ ಮತ್ತು ಸರಕಾರ ಮರೆಯಬಾರದು.

Advertisement

Udayavani is now on Telegram. Click here to join our channel and stay updated with the latest news.

Next