ಉಡುಪಿ: ಸಮಾಜ ಸುಧಾರಣೆಯ ಸಂತ ಬ್ರಹ್ಮಶ್ರೀ ನಾರಾಯಣಗುರುಗಳು ಸಾರಿದ ಸಂದೇಶವನ್ನು ಜನಸಾಮಾನ್ಯರಿಗೆ ತಿಳಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗುರುಗಳ 170ನೇ ಜನ್ಮದಿನದ ಪ್ರಯುಕ್ತ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ “ಗುರು ಸಂದೇಶದ ಸಾಮರಸ್ಯ ಜಾಥಾ’ಕ್ಕೆ ರವಿವಾರ ಬನ್ನಂಜೆ ಬಿಲ್ಲವ ಸೇವಾ ಸಂಘದಲ್ಲಿ ಚಾಲನೆ ನೀಡಲಾಯಿತು.
ಶಾಸಕ ಯಶ್‌ಪಾಲ್ ಎ.ಸುವರ್ಣ ಮಾತನಾಡಿ, ನಾರಾಯಣ ಗುರು ದೇಶ ಕಂಡ ಶ್ರೇಷ್ಠ ಸಂತರು. ಕರಾವಳಿಯ ಉದ್ದಗಲಕ್ಕೂ ಪ್ರವಾಸ ಕೈಗೊಂಡು ಧಾರ್ಮಿಕ ವಿಚಾರಗಳನ್ನು ಪಸರಿದ್ದರು. ಕೇರಳದಲ್ಲೂ ಹಿಂದೂ ಸಮಾಜವನ್ನು ಒಗ್ಗೂಡಿಸಿದ್ದರು. ಅವರ ವಿಚಾರ, ತ್ಯಾಗ, ಮನೋಭಾವವನ್ನು ಯುವಜನತೆಗೆ ತಿಳಿಸಬೇಕು. ವಿಧಾನಸೌಧದ ಎದುರು ನಾರಾಯಣ ಗುರು ಪುತ್ಥಳಿ ನಿರ್ಮಾಣ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದರು.
ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಸರಕಾರದಿಂದ ನಾರಾಯಣ ಗುರು ಜಯಂತಿ ಮಾಡಿದರೂ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಬೇಕು. ಮುಂದಿನ ಪೀಳಿಗೆಗೆ ನಾರಾಯಣ ಗುರುಗಳ ಸಂದೇಶಗಳು ತಿಳಿಯಬೇಕು. ಹಿಂದೂ ಸಮಾಜ ಉಳಿಯಲು ಗುರುಗಳ ಕೊಡುಗೆ ಅಪಾರವಾಗಿದೆ. ಬಿಲ್ಲವ ಸಮುದಾಯದ ವಿವಿಧ ಬೇಡಿಕೆಗಳು ಇನ್ನೂ ಈಡೇರಿಕೆಗೆ ಬಾಕಿ ಉಳಿದಿವೆ. ಸಮುದಾಯದವರು ಮತ್ತಷ್ಟು ಗಟ್ಟಿಯಾಗಿ ತಮ್ಮ ಬೇಡಿಕೆಗಳನ್ನು ಪ್ರತಿಪಾದಿಸಿದರೆ ತ್ವರಿತಗತಿಯಲ್ಲಿ ಈಡೇರಲು ಸಾಧ್ಯ. ಸಂತೆಕಟ್ಟೆಯಲ್ಲಿ ಕೋಟಿ ಚೆನ್ನಯ ಸರ್ಕಲ್ ಮಾಡಲು ಸಿದ್ಧತೆಯಾಗಿದ್ದು, ಇದಕ್ಕೆ ನಗರಸಭೆ ಸಹಕರಿಸಬೇಕು ಎಂದರು.
ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ನಾರಾಯಣ ಗುರುಗಳ ಸಂದೇಶವನ್ನು ಪ್ರಸಾರ ಮಾಡಲು ಮತ್ತಷ್ಟು ಒತ್ತು ನೀಡುವ ಅಗತ್ಯವಿದೆ. ಜಾತಿ ರಾಜಕಾರಣ ದೂರ ಮಾಡಲು ನಾರಾಯಣ ಗುರು ತತ್ತಾ$Ìದರ್ಶ ಅಗತ್ಯ ಎಂದರು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ನಾರಾಯಣ ಗುರುಗಳ ಸರ್ಕಲ್ ನಿರ್ಮಾಣಕ್ಕೆ ನಗರಸಭೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಿತ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು. ಜಾಥಾವು ಬನ್ನಂಜೆಯಿಂದ ಉಡುಪಿ ಸಿಟಿ ಬಸ್ ನಿಲ್ದಾಣ, ಕೋರ್ಟ್ ರೋಡ್, ಜೋಡುಕಟ್ಟೆ, ಬ್ರಹ್ಮಗಿರಿ, ಅಂಬಲಪಾಡಿ ಬೈಪಾಸ್, ಕರಾವಳಿ ಬೈಪಾಸ್, ಅಂಬಾಗಿಲು, ಗುಂಡಿಬೈಲು, ಕಲ್ಸಂಕ ಮಾರ್ಗವಾಗಿ ಬನ್ನಂಜೆ ತಲುಪಿತು.