Advertisement

ಸಚ್ಚಿದಾನಂದಮೂರ್ತಿ ರಾಜೀನಾಮೆಗೆ ಒತ್ತಾಯ

03:20 PM Nov 20, 2021 | Team Udayavani |

ಅರಸೀಕೆರೆ: ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪರ ಪ್ರಚಾರಕ್ಕೆ ಸರ್ಕಾರಿ ವಾಹನವನ್ನು ಬಳಸಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಸಿದ್ದಾರೆ. ಹೀಗಾಗಿ ಅವರು, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಸರ್ಕಾರ ಇವರನ್ನು ವಜಾ ಮಾಡಬೇಕು ಎಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ರಮೇಶ್‌ ಆಗ್ರಹಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಮಾಜಿ ಅಡ್ವೊಕೇಟ್‌ ಜನರಲ್‌ ಅಶೋಕ್‌ ಹಾರನಹಳ್ಳಿ ಸ್ಪರ್ದಿಸಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ ಅವರದೇ ಆದ ಕೊಡುಗೆ ಇದೆ. ಹಾಸನದಲ್ಲಿ ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜು, ಲಾ ಕಾಲೇಜು ಅರಸೀಕೆರೆಯಲ್ಲಿ ಶ್ರೀಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆ ಅಲ್ಲದೆ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರ, ಆದ್ದರಿಂದ ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘ ಅಶೋಕ್‌ ಹಾರನಹಳ್ಳಿ ಅವರ ಪರವಾಗಿ ಹಾಸನ ಜಿಲ್ಲೆಯು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಾವುಗಳು ಸಂಚರಿಸಿ ಅಶೋಕ್‌ ಹಾರನಹಳ್ಳಿ ಅವರನ್ನು ಬೆಂಬಲಿಸುವಂತೆ ಮತಯಾಚನೆ ಮಾಡಲಿದ್ದೇವೆ ಎಂದು ತಿಳಿಸಿದರು.

ಹಂಸಲೇಖ ಹೇಳಿಕೆಗೆ ಖಂಡನೆ: ಕ್ಷಮೆಗೆ ಆಗ್ರಹ

ನಾದ ಬ್ರಹ್ಮ ಖ್ಯಾತಿಯ ಹಂಸಲೇಖ ಪೇಜಾವರ ಶ್ರೀಗಳ ಕುರಿತು ನೀಡುವ ಹೇಳಿಕ ಖಂಡನೀಯ. ಚಲನಚಿತ್ರಗಳ ಗೀತೆ ರಚನೆಕಾರ ಹಾಗೂ ಸಂಗೀತ ನಿರ್ದೇಶಕ ಅವರು ಯಾವ ಜಾತಿ ಎಂಬುದು ನಮಗೆ ತಿಳಿದಿಲ್ಲ, ಅವರ ಪ್ರತಿಭೆಯಿಂದ ರಾಜ್ಯದ ಜನಮನ ಗೆದ್ದಿದ್ದಾರೆ. ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರ ಕುರಿತು ಹಗುರವಾಗಿ ಮಾತನಾಡಿ ಜನತೆ ನೀಡಿದ್ದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಸಾಮಾಜಿಕ ಸಮಾನತೆಗಾಗಿ ಪರಿಶಿಷ್ಠ ಸಮುದಾಯಗಳ ಕಾಲೋನಿಗೆ ಹೋಗುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ. ಸಮಾಜದಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಂಬ ಆತ್ಮಸ್ಥೈರ್ಯವನ್ನು ತುಂಬಿದ ಶ್ರೀಗಳು ಐಕ್ಯರಾದ ನಂತರ ಹಂಸಲೇಖ ಅವರು ಮಾತನಾಡಿದ್ದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದರು.

ಉಡುಪಿ ಶ್ರೀಗಳು ಇಡೀ ಭಾರತವನ್ನು ಸಂಚರಿಸಿ ಹಿಂದೂ ಸಂಘಟನೆಗಾಗಿ ದುಡಿದವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ರಾಜ್ಯವನ್ನು ಪ್ರತಿನಿಧಿಸಿದವರು. 70ರ ದಶಕದಲ್ಲಿ ಮಾಧ್ವ ಸಂಪ್ರದಾಯವನ್ನೂ ಮೀರಿ ಅಸ್ಪ್ರಶ್ಯತೆ ನಿವಾರಣೆಗಾಗಿ ಸಂಚಾರ ಮಾಡಿದ್ದಾರೆ. ಪರಿಶಿಷ್ಟರ ಮನೆಗಳಿಗೆ ತೆರಳಿ ಆತ್ಮಸ್ಥೈರ್ಯ ತುಂಬಿದ್ದರು. ಅಂತಹವರ ಬಗ್ಗೆ ಹಂಸಲೇಖ ಅವರು ಅಸ್ಪೃಶ್ಯರ ಮನೆಯಲ್ಲಿ ಮಾಂಸ ತಿಂದರೆ ಎಂದು ಪ್ರಶ್ನಿಸಿದ್ದಾರೆ, ಅವರ ಈ ಮಾತನ್ನು ತಮ್ಮ ಪತ್ನಿಯೇ ವಿರೋಧಿಸಿದ್ದಾರೆ. ಹಂಸಲೇಖ ಅವರ ಹೆಸರು ಗಂಗರಾಜ್‌ ಎಂದು ಗೊತ್ತಾದದ್ದೇ ಈಗ. ಜಾತ್ಯತೀತವಾಗಿ ಅವರ ಕಲೆಯನ್ನು ನಾಡಿನ ಜನತೆ ಮೆಚ್ಚುತ್ತಿದ್ದರು. ಈ ಹೇಳಿಕೆಯಿಂದ ಇಡೀ ಹಿಂದೂ ಸಮುದಾಯವೇ ಬೇಸರವಾಗಿದೆ. ನಾಲ್ಕುಗೋಡೆ ಮಧ್ಯೆ ತಪ್ಪಾಯಿತು ಎಂದರೆ ನಾಡು ಒಪ್ಪದು. ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ರಮೇಶ್‌ ಆಗ್ರಹಿಸಿದ್ದಾರೆ.

Advertisement

ಸಂಘದ ಉಪಾಧ್ಯಕ್ಷ ಎಚ್‌.ಎಂ ರಾಮಚಂದ್ರ ರಾವ್‌, ಖಜಾಂಚಿ ರವಿಕುಮಾರ್‌, ನಿರ್ದೇಶಕರಾದ ಎಸ್‌.ವಿ ಗೋಪಾಲ್‌, ಬಿ.ಪಿ ಸಾಂಗ್ಲಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next