Advertisement

ಶಬರಿಮಲೆ: ಹಲವು ಭಕ್ತರ ಯಾತ್ರೆ ರದ್ದು

11:25 AM Nov 08, 2018 | Team Udayavani |

ಉಡುಪಿ: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರನ್ನು ಪ್ರವೇಶಿಸಲು ಅನುವು ಮಾಡಿಕೊಡಬೇಕೆಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಸಾರ ನಡೆಯುತ್ತಿರುವ ಪ್ರತಿಭಟನೆ, ಘರ್ಷಣೆಯಿಂದ ಕ್ಷೇತ್ರಕ್ಕೆ ತೆರಳುವ ಭಕ್ತರ ಮೇಲೆ ಪರಿಣಾಮ ಬೀರಿದೆ. 

Advertisement

ನಿತ್ಯವೂ ಶಬರಿಮಲೆಗೆ ಹೋಗುವ ಭಕ್ತರು ಪತ್ರಿಕೆಗಳು, ದೃಶ್ಯ ಮಾಧ್ಯಮಗಳಲ್ಲಿ ಅಲ್ಲಿ ಏನಾಗಿದೆ ಎಂದು ಕುತೂಹಲದಿಂದ ನೋಡುತ್ತಿದ್ದು ನಿತ್ಯ ಆಗುತ್ತಿರುವ ಬೆಳವಣಿಗೆಯನ್ನು ನೋಡಿ ದಿಗಿಲುಗೊಂಡಿದ್ದಾರೆ.
ಈ ಬಾರಿ ಉಡುಪಿ, ದ.ಕ. ಜಿಲ್ಲೆಯೂ ಸೇರಿದಂತೆ ಕರ್ನಾಟಕ ಮತ್ತಿತರ ಕೇರಳಕ್ಕೆ ಹೊರತಾದ ರಾಜ್ಯಗಳಿಂದ ಭಕ್ತರು ಗಣನೀಯವಾಗಿ ಕಡಿಮೆಯಾಗಲಿದೆ. ಈಗಾಗಲೇ ಉಡುಪಿಯ ಹಲವು ಶಿಬಿರಗಳ ಮುಖ್ಯಸ್ಥರು ಶಬರಿಮಲೆ ಯಾತ್ರೆಯನ್ನು ರದ್ದು ಪಡಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿದ (169) ಕಡಿಯಾಳಿ ಶಿಬಿರದ ತಂಡ ಪ್ರವಾಸವನ್ನು ರದ್ದುಪಡಿಸಿದೆ. ಇದು ಇವರ 18ನೇ ವರ್ಷದ ಶಿಬಿರವಾಗಿತ್ತು.

ನಿತ್ಯವೂ ಶಬರಿಮಲೆಯಲ್ಲಿ ನಡೆಯುತ್ತಿರುವ ಸುದ್ದಿಗಳನ್ನು ಓದಿ ಭಕ್ತರು ಚಿಂತಿತರಾಗಿದ್ದಾರೆ. ಅಲ್ಲಿಗೆ ಹೋದ ಬಳಿಕ ತೊಂದರೆಯಾದರೆ ಏನು ಮಾಡುವುದು ಎಂಬುದು ಭಕ್ತರ ಚಿಂತೆ. ಮಲಯಾಳಕ್ಕೆ ಹೊರತಾದ ಭಾಷಿಕರಿಗೆ ತೊಂದರೆಯಾದರೆ, ಪೊಲೀಸರಿಂದ ಬಂಧನವಾಗಿ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತುವಂತಾದರೆ ಎಂದು ಭಕ್ತ ಸಮುದಾಯ ಗಲಿಬಿಲಿಗೊಂಡಿದೆ. ಸುಮಾರು ನಾಲ್ಕು ತಿಂಗಳ ಹಿಂದೆಯೇ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡಿರುವ ಭಕ್ತರು ಈಗ ರದ್ದತಿ ಮಾಡುತ್ತಿದ್ದಾರೆ.

ನವೆಂಬರ್‌ನಿಂದಲೇ ಅಯ್ಯಪ್ಪ ವ್ರತಧಾರಿಗಳು ಬೇರೆ ಬೇರೆ ಶಿಬಿರಗಳಲ್ಲಿ ನಿಂತು ಶಬರಿಮಲೆಗೆ ತೆರಳುವುದು ವಾಡಿಕೆ. ಈ ಒಂದೆರಡು ತಿಂಗಳಲ್ಲಿ ಇತರ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರ ಪಾಲು ಬಲು ದೊಡ್ಡದು. ಅಯ್ಯಪ್ಪ ವ್ರತಧಾರಿಗಳಿಂದ ಹೊಟೇಲ್‌ ಉದ್ಯಮಕ್ಕೂ ದೊಡ್ಡ ಮಟ್ಟದ ವ್ಯಾಪಾರ ವಹಿವಾಟು ಕುದುರುತ್ತಿತ್ತು. ಕೆಲವರು ಅಯ್ಯಪ್ಪ ಸೀಸನ್‌ ಮುಗಿದ ಬಳಿಕ ಪ್ರತಿ ತಿಂಗಳು ಸಂಕ್ರಮಣದ ವೇಳೆ ಭೇಟಿ ಕೊಡುವ ಯೋಚನೆ ಇದೆಯಾದರೂ ಶಿಬಿರದ ಮೂಲಕ ಹೋಗುವಷ್ಟು ಜನರು ಬೇರೆ ಸಮಯದಲ್ಲಿ ಹೋಗುವುದು ಸಂಶಯ. ಇದರಿಂದ ರೈಲು ಯಾನಕ್ಕೂ ಪ್ರಯಾಣಿಕರು ಕಡಿಮೆಯಾಗುವ ಜತೆಗೆ ಖಾಸಗಿ ಬಾಡಿಗೆ ವಾಹನಗಳಿಗೆ ಬಲು ದೊಡ್ಡ ಹೊಡೆತ ಬೀಳುತ್ತಿದೆ. ಒಂದು ಕಡೆ ಹೆಚ್ಚುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ದರ, ಇನ್ನೊಂದೆಡೆ ಉತ್ತಮ ಬಾಡಿಗೆ ದೊರೆಯುತ್ತಿದ್ದ ಅಯ್ಯಪ್ಪ ಸೀಸನ್‌ನಲ್ಲಿ ಭಕ್ತರು ಶಬರಿಮಲೆಗೆ ತೆರಳದೆ ಇರುವುದು ಬಾಡಿಗೆ ವಾಹನ ಚಾಲಕರು- ಮಾಲಕರಿಗೆ ದೊಡ್ಡ ತಲೆನೋವಾಗಿದೆ. ಶಬರಿಮಲೆಯ ವಿದ್ಯಮಾನಗಳ ಪರಿಣಾಮ ದಿಂದ ಹೂವು, ಹಣ್ಣು, ತರಕಾರಿ, ತೆಂಗಿನ ಕಾಯಿ ವ್ಯಾಪಾರಸ್ಥರಿಗೂ ವ್ಯಾಪಾರ ಗಣನೀಯ ವಾಗಿ ಕಡಿಮೆಯಾಗಲಿದೆ.

ನಾವು ಸುಮಾರು 20 ವರ್ಷಗಳಿಂದ ಶಬರಿಮಲೆಗೆ ನ್ಯಾಯವಾದಿ ಸಂಜೀವ ಎ. ಅವರ ನೇತೃತ್ವದಲ್ಲಿ ತೆರಳುತ್ತಿದ್ದೆವು. ಈ ಬಾರಿ ಅಲ್ಲಿ ಸಮಸ್ಯೆ ಇರುವ ಕಾರಣಕ್ಕೆ ರದ್ದುಪಡಿಸುತ್ತೇವೆ. ಶಬರಿಮಲೆಯಲ್ಲಿ ಪ್ರತಿ ಸಂಕ್ರಮಣಕ್ಕೆ ದೇವಸ್ಥಾನವನ್ನು ತೆರೆಯಲಾಗುತ್ತದೆ. ಅಲ್ಲಿನ ಸಮಸ್ಯೆಗಳು ತಿಳಿಯಾದ ಬಳಿಕ ಫೆಬ್ರವರಿ, ಮಾರ್ಚ್‌ನಲ್ಲಿ ಸಂಕ್ರಮಣದ ದಿನ ಹೋಗಲು ನಿರ್ಧರಿಸಿದ್ದೇವೆ.
– ಭಾಸ್ಕರ ಸುವರ್ಣ
ಕನ್ನರ್ಪಾಡಿ ದೇವಸ್ಥಾನದಿಂದ ಹೊರಡುವ ತಂಡದ ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next