Advertisement

“ಡಿಸ್ಕವರ್‌ ಇಸ್ರೇಲ್‌’ತಂಡದಲ್ಲಿ ಸಂಬ್ರಾತಾ ಶೆಟ್ಟಿ 

12:30 AM Mar 23, 2019 | |

ಉಡುಪಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2017ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದಾಗ ಅಲ್ಲಿನ ಪ್ರಧಾನಿ ಬೆಂಜಮಿನ್‌ ನೆತಾನ್ಯಹು ಅವರೊಂದಿಗೆ ನಡೆಸಿದ ಮಾತುಕತೆಯ ಫ‌ಲಶ್ರುತಿ ಉಡುಪಿಯ ಕುವರಿಯೊಬ್ಬಳಿಗೆ ಲಭಿಸಿದೆ.  

Advertisement

ಇಸ್ರೇಲ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಮಂತ್ರಣದ ಮೇರೆಗೆ ತೆರಳುವ ಭಾರತದ ನಿಯೋಗದಲ್ಲಿ ಉಡುಪಿ ಕೆಮ್ಮಣ್ಣು ಮೂಲದ ಸಂಬ್ರಾತಾ ಶೆಟ್ಟಿ ಅವರಿದ್ದಾರೆ. ಮಾ. 23ರಂದು ಇವರು ಇಸ್ರೇಲ್‌ಗೆ ತೆರಳಲಿದ್ದು ಮಾ. 28ರವರೆಗೆ ವಿವಿಧ ಚರ್ಚೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  ಇವರು ಜೈವಿಕ ತಂತ್ರಜ್ಞಾನ ಮತ್ತು ಔಷಧ ಕ್ಷೇತ್ರವನ್ನು ಪ್ರತಿನಿಧಿಸಲಿರುವ ಯುವ ಭಾರತೀಯರಾಗಿದ್ದಾರೆ. 

ಇಸ್ರೇಲ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರಂಭಿಸಿದ “ಡಿಸ್ಕವರ್‌ ಇಸ್ರೇಲ್‌’ ಕಾರ್ಯಕ್ರಮದಂತೆ ಫಾರ್ಮಾ, ಶಿಕ್ಷಣ, ರಾಜಕೀಯ, ವಾಣಿಜ್ಯ, ಸಂಶೋಧನೆ, ಮಾಧ್ಯಮ ಇತ್ಯಾದಿ ಕ್ಷೇತ್ರಗಳ ಯುವ ಜನರಿಗೆ ಇಸ್ರೇಲ್‌ನ್ನು ಪರಿಚಯಿಸಲಾಗುತ್ತಿದೆ. 
ಸಂಶೋಧನೆ, ಕೃಷಿ, ಔಷಧಿ ಇತ್ಯಾದಿ ಕ್ಷೇತ್ರಗಳಲ್ಲಿ ಭಾರತ-ಇಸ್ರೇಲ್‌ ನಡುವೆ ಪಾಲುದಾರಿಕೆಯನ್ನು ಸೃಷ್ಟಿಸುವ ಪ್ರಯತ್ನ ಇದಾಗಿದೆ. 

ಸಂಬ್ರಾತಾ ಶೆಟ್ಟಿಯವರು ನರರೋಗಕ್ಕೆ ಸಂಬಂಧಿಸಿ ಕಂಡು ಹಿಡಿದ ಔಷಧಿ ಸಂಶೋಧನೆ ಕಾರಣದಿಂದ ಇಸ್ರೇಲ್‌ಗೆ ಭೇಟಿ ನೀಡುವ ನಿಯೋಗದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ. 25ರಿಂದ 42ರ ವರೆಗಿನ ವಯೋಮಾನದವರನ್ನು ಆಯ್ಕೆ ಮಾಡಲಾಗುತ್ತದೆ.

ಬೆಂಗಳೂರು, ದಿಲ್ಲಿ, ಹೈದರಾಬಾದ್‌, ಮುಂಬೈ ಕೇಂದ್ರದಿಂದ ಸುಮಾರು ಹತ್ತು ಮಂದಿ ಯುವ ಭಾರತೀಯ ಪ್ರತಿನಿಧಿಗಳು ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. 

Advertisement

ಸಂಬ್ರಾತಾ ಶೆಟ್ಟಿಯವರು ಜೈವಿಕ ತಂತ್ರಜ್ಞಾನದ ಎಂಜಿನಿಯರಿಂಗ್‌ ಪದವೀಧರರು. ನಿಟ್ಟೆಯಲ್ಲಿ ಎಂಜಿನಿಯರಿಂಗ್‌ ಪದವಿ ಗಳಿಸಿದ ಇವರು ಯುನೈಟೆಡ್‌ ಕಿಂಗ್‌ಡಮ್‌ನ ಗ್ರೀನ್‌ವಿಚ್‌ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಯುಕೆ ಯಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಕಾರ್ಯ ನಿರ್ವಹಿಸಿದ್ದ ಸಂಬ್ರಾತಾ ಶೆಟ್ಟಿಯವರು ಪ್ರಸ್ತುತ ಬೆಂಗಳೂರಿನಲ್ಲಿ ಸಿನರ್ಜಿಯ ಕಂಪೆನಿಯಲ್ಲಿ ಸಿಒಒ ಆಗಿದ್ದಾರೆ. ಇವರು ಫಾರ್ಮಾ ಮತ್ತು ಅಫೊರ್ಡೆಬಲ್‌ ಹೆಲ್ತ್‌ಕೇರ್‌ ರಿಸರ್ಚ್‌ ವಿಭಾಗದ ಮುಖ್ಯಸ್ಥೆಯಾಗಿದ್ದು, ಸಮುದಾಯ ಆರೋಗ್ಯ, ಮಹಿಳಾ ಭದ್ರತೆ, ಸ್ಟ್ರೆಟೆಜಿಕ್‌ ಟೆಕ್ನಾಲಜಿಯಲ್ಲಿಯೂ ಕಾರ್ಯನಿರ್ವಹಿಸುತ್ತಾರೆ. ಇವರ ತಂದೆ, ತಾಯಿ ಉಡುಪಿಯ ಉದ್ಯಮಿ ಸಂಪತ್‌ಕುಮಾರ್‌ ಶೆಟ್ಟಿ, ಮಮತಾ ಶೆಟ್ಟಿಯವರು. ಪತಿ ಡಾ|ರೋಶನ್‌ ಶೆಟ್ಟಿಯವರು ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ ಸರ್ಜನ್‌ ಕನ್ಸಲ್ಟೆಂಟ್‌ ಆಗಿದ್ದಾರೆ.  

ಖುಷಿಯಿದೆ
ಇಸ್ರೇಲ್‌ಗೆ ತೆರಳುವ ನಿಯೋಗದಲ್ಲಿ ನನಗೆ ಅವಕಾಶ ಸಿಗುತ್ತದೆಂದು ನಿರೀಕ್ಷಿಸಿರಲಿಲ್ಲ. ಈ ಅವಕಾಶ ಸಿಕ್ಕಿದ್ದು ಬಹಳ ಖುಷಿಯಾಗಿದೆ. ನಿಯೋಗದ ಮೂಲ ಉದ್ದೇಶ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ವ್ಯವಹಾರ ಅಭಿವೃದ್ಧಿಪಡಿಸುವುದಾಗಿದೆ. ಅಲ್ಲಿಗೆ ಹೋಗಿ ಅಧ್ಯಯನ ನಡೆಸಿದ ಬಳಿಕ ಯಾವ ರೀತಿಯಲ್ಲಿ ವ್ಯವಹಾರ ಅಭಿವೃದ್ಧಿಪಡಿಸಬೇಕೆಂದು ಚಿಂತನೆ ನಡೆಸುತ್ತೇನೆ.
– ಸಂಬ್ರಾತಾ ಶೆಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next