ಗಾಂಧಿನಗರ(ಗುಜರಾತ್): ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸೋಮವಾರ (ಜುಲೈ 10) ಗುಜರಾತ್ ನಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Rohit Sharma ನಾಯಕತ್ವದಿಂದ ಹೆಚ್ಚು ನಿರೀಕ್ಷೆ ಮಾಡಿದ್ದೆ, ಆದರೆ…: ಬೇಸರ ಹೊರಹಾಕಿದ ದಿಗ್ಗಜ
ಎಸ್.ಜೈಶಂಕರ್ ಅವರು ರಾಜ್ಯ ವಿಧಾನಸಭಾ ಸಂಕೀರ್ಣದಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ರಾಜ್ಯಸಭಾ ಚುನಾವಣಾ ನಾಮಪತ್ರವನ್ನು ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಜತೆಗಿದ್ದರು.
ಗುಜರಾತ್ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜುಲೈ 13, ನಾಮಪತ್ರ ವಾಮಸ್ ಪಡೆಯಲು ಕೊನೆಯ ದಿನಾಂಕ ಜುಲೈ 17. ಒಂದು ವೇಳೆ ಅವಿರೋಧ ಆಯ್ಕೆಯಾಗದೆ, ಚುನಾವಣೆ ಅನಿವಾರ್ಯವಾದರೆ ಜುಲೈ 24ರಂದು ಚುನಾವಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಜೈಶಂಕರ್ ಅವರು ಮೊದಲ ಬಾರಿಗೆ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು, ಗುಜರಾತ್ ನ 11 ರಾಜ್ಯಸಭಾ ಸ್ಥಾನಗಳಲ್ಲಿ ಪ್ರಸ್ತುತ 8 ಸ್ಥಾನ ಬಿಜೆಪಿ ಹಾಗೂ 3 ಸ್ಥಾನ ಕಾಂಗ್ರೆಸ್ ನದ್ದಾಗಿದೆ.
ಬಿಜೆಪಿಯ 8 ಸ್ಥಾನಗಳಲ್ಲಿ, ಎಸ್.ಜೈಶಂಕರ್, ಜುಗಾಲ್ಜಿ ಠಾಕೂರ್ ಮತ್ತು ದಿನೇಶ್ ಅನವಾಡಿಯಾ ಅವರ ಅವಧಿ ಆಗಸ್ಟ್ 18ಕ್ಕೆ ಕೊನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ವರದಿ ತಿಳಿಸಿದೆ.
ಗುಜರಾತ್ ನ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ತಿಳಿಸಿದೆ. ಕಳೆದ ವರ್ಷ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 156 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿತ್ತು. ಕಾಂಗ್ರೆಸ್ ಕೇವಲ 17 ಸ್ಥಾನಗಳಲ್ಲಷ್ಟೇ ಜಯ ಸಾಧಿಸಿತ್ತು.