ಹುಬ್ಬಳ್ಳಿ: ಇಂಗ್ಲಿಷ್ ಎಂದರೆ ಬೆಚ್ಚಿ ಬೀಳುತ್ತಿದ್ದ ಕುಗ್ರಾಮಗಳ ಮಕ್ಕಳ ಬಾಯಿಂದ ಹರಳು ಹುರಿದಂತೆ ಇಂಗ್ಲಿಷ್ ಮಾತನಾಡುವಂತೆ ಮಾಡಿದ ಸ್ಕಿಲ್ ಇನ್ ವಿಲೇಜ್ ಯೋಜನೆ, ಇದೀಗ ಹಳ್ಳಿ ಮಕ್ಕಳು ಝೂಮ್ ಆ್ಯಪ್ ಬಳಸುವ ಮೂಲಕ ಇಂಗ್ಲಿಷ್ ಕಲಿಕೆಯೊಂದಿಗೆ ತಂತ್ರಜ್ಞಾನ ಬಳಕೆಯಲ್ಲೂ ಸೈ ಎನ್ನಿಸಿಕೊಳ್ಳುವಂತೆ ಮಾಡಿದೆ.
ತಂತ್ರಜ್ಞಾನ ಬಳಕೆ ನಗರವಾಸಿಗಳಿಗೆ ಹೆಚ್ಚು ಸುಲಭ ಎಂಬ ಮಾತುಗಳನ್ನು ಸುಳ್ಳಾಗಿಸಿದ ಕುಗ್ರಾಮಗಳ ವಿದ್ಯಾರ್ಥಿಗಳು, ಝೂಮ್ ಆ್ಯಪ್ ನಂತಹ ತಂತ್ರಜ್ಞಾನ ಬಳಕೆಯಲ್ಲಿ ನಾವೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಇಂಗ್ಲಿಷ್ ಮಾತುಗಳ ಮೂಲಕವೂ ಗಮನ ಸೆಳೆದಿದ್ದಾರೆ.
ದೇಶಪಾಂಡೆ ಪ್ರತಿಷ್ಠಾನ ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ನಿಟ್ಟಿನಲ್ಲಿ 2017ರಲ್ಲಿ ಆರಂಭಿಸಿದ್ದ ಸ್ಕಿಲ್ ಇನ್ ವಿಲೇಜ್ ಯೋಜನೆ ಉತ್ತಮ ಫಲಿತಾಂಶ ನೀಡುತ್ತಿದ್ದು, ಕರ್ನಾಟಕ ಹಾಗೂ ತೆಲಂಗಾಣದ ಕುಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ನಾಲ್ಕೈದು ದೇಶಗಳ ಪ್ರತಿನಿಧಿಗಳೊಂದಿಗೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಮೂಲಕ ಹಳ್ಳಿ ಪ್ರತಿಭೆಯ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆಗೆ ಹಿನ್ನಡೆ ಆಗಬಾರದೆಂದು ದೇಶಪಾಂಡೆ ಪ್ರತಿಷ್ಠಾನದ ದೇಶಪಾಂಡೆ ಎಜ್ಯುಕೇಶನ್ ಟ್ರಸ್ಟ್ (ಡಿಇಟಿ) ಮಕ್ಕಳಿಗೆ ತಂತ್ರಜ್ಞಾನ ಬಳಸಿಕೊಂಡು ಕಲಿಕೆಗೆ ಮುಂದಾಗಿದ್ದು, ಎಲ್ಲ 42 ಗ್ರಾಮಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ :ರಾಮುಲು-ಸುಧಾಕರ್ ಸಂಧಾನ ಪ್ರಹಸನ: ಎಲ್ಲವೂ ಸರಿಯಿದೆ ಎನ್ನುತ್ತಲೇ ಪರಸ್ಪರ ಕಾಲೆಳೆದ ಸಚಿವರು!
5000 ಮಕ್ಕಳಿಗೆ ಇಂಗ್ಲಿಷ್ ದೀಕ್ಷೆ: ದೇಶಪಾಂಡೆ ಪ್ರತಿಷ್ಠಾನದ ಎಜ್ಯುಕೇಶನ್ ಟ್ರಸ್ಟ್ ಕುಗ್ರಾಮಗಳಲ್ಲಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾತನಾಡುವ, ಬರೆಯುವ, ಓದುವ ಕೌಶಲ ವೃದ್ಧಿಸುವ ನಿಟ್ಟಿನಲ್ಲಿ 2017ರಲ್ಲಿ ಸ್ಕಿಲ್ ಇನ್ ವಿಲೇಜ್ ಎಂಬ ಯೋಜನೆ ಆರಂಭಿಸಿತು. ರಾಜ್ಯದ ಧಾರವಾಡ, ಹಾವೇರಿ, ಗದಗ ಜಿಲ್ಲೆ ಹಾಗೂ ತೆಲಂಗಾಣದ ಸಿದ್ದಿಪೇಟೆ ಹಾಗೂ ನಿಜಾಮಬಾದ್ ಜಿಲ್ಲೆಗಳಲ್ಲಿ ಸ್ಕಿಲ್ ಇನ್ ವಿಲೇಜ್ ಯೋಜನೆ ಆರಂಭಿಸಿದೆ. ಇದುವರೆಗೆ ಸುಮಾರು 5,000 ಮಕ್ಕಳ ಸಂಪರ್ಕದಲ್ಲಿದ್ದು, ಇವರಿಗೆ ಇಂಗ್ಲಿಷ್ ಕಲಿಕೆ ಆರಂಭಿಸಿದೆ. ಸುಮಾರು 45-50 ಶಿಕ್ಷಕರು ಇದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವರ್ಷಕ್ಕೆ ಸುಮಾರು 200 ತಾಸುಗಳ ಯೋಜನೆ ಇದಾಗಿದ್ದು, ಗ್ರಾಮೀಣ ಮಕ್ಕಳಿಗೆ ಶಾಲಾ ವೇಳೆ ಹೊರತಾದ ಸಮಯದಲ್ಲಿ ಇಂಗ್ಲಿಷ್ ಕಲಿಕೆಯನ್ನು ಚಟುವಟಿಕೆಗಳ ಆಧಾರದಲ್ಲಿ ಕಲಿಸಲಾಗುತ್ತಿದೆ. ಬೆಳಗ್ಗೆ 7ರಿಂದ 9 ಗಂಟೆ ಹಾಗೂ ಸಂಜೆ 5:30ರಿಂದ 7:30ರವರೆಗೆ ತರಬೇತಿ ನಡೆಯುತ್ತದೆ. ಈ ಹಿಂದೆ ಬೇರೆ ಬೇರೆ ಕಡೆಯ ಶಿಕ್ಷಕರನ್ನು ತರಬೇತಿಗೊಳಿಸಿ ಹಳ್ಳಿಗಳಿಗೆ ನಿಯೋಜನೆ ಮಾಡಲಾಗುತ್ತಿತ್ತು. ಇದೀಗ ಆಯಾ ಗ್ರಾಮದಲ್ಲಿನ ವಿವಿಧ ಪದವಿ, ಡಿಇಡಿ, ಬಿಇಡಿ ಮುಗಿಸಿದವರು, ಇಂಗ್ಲಿಷ್ ಬಗ್ಗೆ ಮಾಹಿತಿ ಇದ್ದವರನ್ನೇ ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗುತ್ತದೆ.
– ಅಮರೇಗೌಡ ಗೋನವಾರ