ಕಾಪು : ತ್ರಿಸ್ತರ ಪಂಚಾಯತ್ ವ್ಯವಸ್ಥೆಯಿಂದ ಮಾತ್ರ ತಳಮಟ್ಟದ ಪ್ರತಿಯೊಬ್ಬರನ್ನೂ ತಲುಪಲು ಸಾಧ್ಯ. ಹಾಗಾಗಿ ಗ್ರಾ. ಪಂ., ತಾ. ಪಂ., ಜಿ. ಪಂ., ಶಾಸಕರ ಸಹಿತ ಜನಪ್ರತಿನಿಧಿಗಳು ಪರಸ್ಪರ ಸರಪಣಿಯಂತೆ ಬೆಸೆದು ಸಮರ್ಪಕವಾಗಿ ಅಭಿವೃದ್ಧಿ ಕಾರ್ಯ ನಡೆಸಬೇಕಿದೆ ಎಂದು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.
ಎಲ್ಲೂರು ಗ್ರಾ. ಪಂ. ಸಮುದಾಯ ಭವನದಲ್ಲಿ ಮಾ. 17ರಂದು ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆ ಮತ್ತು ಫಾರೆಸ್ಟ್ ಇಲಾಖೆ ಜಂಟಿ ಸರ್ವೇ ನಡೆಸಿ 94ಸಿಸಿ ಅಡಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಯನ್ನು ಪರಿಶೀಲಿಸಿ ಹಕ್ಕು ಪತ್ರ ನೀಡಲಾಗುತ್ತದೆ. ಅಕ್ರಮ ಸಕ್ರಮ, 53ರಡಿ ಅರ್ಜಿದಾರರು, ಕುಮ್ಕಿ, ಡೀಮ್ಡ್ ಫಾರೆಸ್ಟ್, ಪರಂಬೋಕು, ಡಿ. ಸಿ. ಮನ್ನಾ ಭೂಮಿಯಡಿ ಸುಮಾರು 2,500 ಅರ್ಜಿದಾರರ ಸಮಸ್ಯೆಗಳನ್ನು ನಿವಾರಿಸಿಕೊಂಡು ಮಂಜೂರಾತಿ ನೀಡಲಾಗುವುದು. ಎಲ್ಲೂರು ಗ್ರಾಮದಲ್ಲಿ ಸುಮಾರು 300ರಿಂದ 400 ಅರ್ಜಿಗಳಿದ್ದು ಹಕ್ಕುಪತ್ರ ಶೀಘ್ರದಲ್ಲಿಯೇ ನೀಡಲು ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ಉಡುಪಿ ತಾ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ ಮಾತನಾಡಿ, ಎಲ್ಲೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಕಾನೂನಾತ್ಮಕ ದಾಖಲೆಗಳನ್ನು ಸರಿಪಡಿಸಿ ಚೆಕ್‌ಬಂಧಿ ನಡೆಸಿ, ಗಡಿರೇಖೆ ಗುರುತಿಸಿ ಮನೆ ನಿವೇಶನ ನೀಡಲು ಸಿದ್ಧತೆ ನಡೆಸಲಾಗುತ್ತದೆ. ಈ ಬಗ್ಗೆ ಶೀಘ್ರವಾಗಿ ಕಾರ್ಯ ಪ್ರವೃತ್ತರಾಗಲಿದ್ದೇವೆ ಎಂದರು.
ಎಲ್ಲೂರು ಗ್ರಾ. ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿ. ಸಿ. ಎಂ. ವಿಸ್ತರಣಾಧಿಕಾರಿ ದಯಾನಂದ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಉಡುಪಿ ಜಿ. ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ. ಪಂ. ಸದಸ್ಯ ಕೇಶವ ಮೊಯ್ಲಿ, ಗ್ರಾ. ಪಂ. ಉಪಾಧ್ಯಕ್ಷ ಜಯಂತ್ ಕುಮಾರ್, ಗ್ರಾ. ಪಂ. ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ಸವಲತ್ತು ವಿತರಣೆ : ಜಿ. ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ ಶಿಫಾರಸಿನಂತೆ ಜಿ. ಪಂ. ಅಧ್ಯಕ್ಷರ ವಿವೇಚನಾ ನಿಧಿಯಡಿ ಒಬ್ಬ ಫಲಾನುಭವಿಗೆ 10 ಸಾವಿರ ರೂ. ಸಹಾಯಧನ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಡಿ 10,000 ರೂ. ಅನುದಾನವನ್ನು ಫಲಾನು ಭವಿಗಳಿಗೆ ವಿತರಿಸಲಾಯಿತು. ಗ್ರಾ.ಪಂ. ಶೇ. 25ರಡಿ ಪ. ಜಾತಿ., ಪ. ಪಂಗಡ 10 ಫಲಾನುಭವಿಗಳಿಗೆ ಮನೆ ದುರಸ್ತಿಗೆ ತಲಾ ರೂ.15 ಸಾವಿರ ಅನುದಾನದ ಚೆಕ್ ವಿತರಿಸಲಾಯಿತು. ಗ್ರಾಮಸ್ಥರ ಅರ್ಜಿ ಅಹವಾಲುಗಳನ್ನು ಸ್ವೀಕರಿಸಲಾಯಿತು. ಗ್ರಾ. ಪಂ. ಪ್ರಭಾರ ಆಭಿವೃದ್ಧಿ ಅಧಿಕಾರಿ ಲೋಲಾಕ್ಷಿ ಸ್ವಾಗತಿಸಿದರು. ಗ್ರಾ. ಪಂ. ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ವಂದಿಸಿದರು. ಲೆಕ್ಕಸಹಾಯಕ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.