ಕಾಪು: ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ಹೆಸರು ಬಳಸಿ ಫೇಸ್‌ಬುಕ್‌ನಲ್ಲಿ ಅಪರಿಚಿತ ವ್ಯಕ್ತಿಗಳು ನಕಲಿ ಖಾತೆ ತೆರೆದು ಹಣ ಕೇಳುವ ಪ್ರಯತ್ನ ನಡೆಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ವಿನಯ್ ಕುಮಾರ್ ಸೊರಕೆ ಹೆಸರಿನಲ್ಲಿ ಖಾತೆ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಅದನ್ನು ಸ್ವೀಕರಿಸಿದ ಬಳಿಕ ನನ್ನ ಸ್ನೇಹಿತ ಸಿಆರ್‌ಎಫ್ ಅಧಿಕಾರಿ ಸಂತೋಷ್ ಕುಮಾರ್ ಅವರಿಗೆ ವರ್ಗಾವಣೆಯಾಗಿದೆ. ಅವರ ಮನೆ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಅವರ ಮನೆಯಲ್ಲಿರುವ ಬೆಳೆಬಾಳುವ ವಸ್ತುಗಳನ್ನು ಕಡಿಮೆ ದರಕ್ಕೆ ನೀಡುತ್ತಿದ್ದಾರೆ. ಇದನ್ನು ನೀವು ಖರೀದಿಸಬಹುದು ಎಂದು ಮೆಸೇಜ್ ಕಳುಹಿಸಲಾಗಿದೆ.
ಈ ವಿಚಾರ ತಿಳಿಯುತ್ತಲೇ ಎಚ್ಚೆತ್ತುಕೊಂಡ ವಿನಯ್ ಕುಮಾರ್ ಸೊರಕೆ ಮತ್ತು ಅಭಿಮಾನಿಗಳು ಫೇಸ್ ಬುಕ್‌ನಲ್ಲಿ ತೆರೆದಿರುವ ಖಾತೆ ನಕಲಿ ಎಂದು ಘೋಷಿಸಿದ್ದು, ಈ ಖಾತೆಯ ಬಗ್ಗೆ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಅವರು ಉಡುಪಿ ಸೆನ್ ಪೊಲೀಸ್ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.
ತತ್‌ಕ್ಷಣ ವರದಿ ಮಾಡಿ :
ಈ ಬಗ್ಗೆ ಸೊರಕೆ ಅವರು ಸ್ಪಷ್ಟೀಕರಣ ನೀಡಿದ್ದು, ನನ್ನ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಅದರ ಮೂಲಕವಾಗಿ ಜನರೊಂದಿಗೆ ಸಂಪರ್ಕಕ್ಕೆ ಬರುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಆ ಖಾತೆಯಿಂದ ಬರುವ ರಿಕ್ವೆಸ್ಟ್ ಅಥವಾ ಸಂದೇಶಗಳಿಗೂ, ನನಗೂ ಸಂಬಂಧವಿಲ್ಲ. ಈ ರೀತಿಯ ಖಾತೆಯಿಂದ ಸಂಪರ್ಕಿಸಲ್ಪಟ್ಟರೆ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಸಂಪರ್ಕಿಸಬೇಡಿ. ಅಂತಹ ಖಾತೆಯನ್ನು ತತ್‌ಕ್ಷಣವೇ ಫೇಸ್‌ಬುಕ್‌ಗೆ ವರದಿ ಮಾಡುವಂತೆ ವಿನಂತಿಸಿದ್ದಾರೆ.