Advertisement

ಗ್ರಾಮೀಣಾಭಿವೃದ್ಧಿ ಕೇಂದ್ರಿತ ಸಂಶೋಧನೆ ಹೆಚ್ಚಾಗಲಿ

04:16 PM Jul 09, 2018 | Team Udayavani |

ದಾವಣಗೆರೆ: ವಿಜ್ಞಾನ ಕ್ಷೇತ್ರದಲ್ಲಿ ಗ್ರಾಮೀಣ ಭಾರತದ ಜನರ ಶ್ರೇಯೋಭಿವೃದ್ಧಿ ಉದ್ದೇಶದ ಸಂಶೋಧನೆ ನಡೆಯುವಂತಾಗಬೇಕು ಎಂದು ಜಿಲ್ಲಾ ವಿಜ್ಞಾನ ಪರಿಷತ್‌ ಅಧ್ಯಕ್ಷ ಡಾ| ಬಿ.ಇ.ರಂಗಸ್ವಾಮಿ ಆಶಿಸಿದ್ದಾರೆ.

Advertisement

ಭಾನುವಾರ ಶಿರಮಗೊಂಡನಹಳ್ಳಿಯ ಅನ್‌ಮೋಲ್‌ ಪಬ್ಲಿಕ್‌ ಶಾಲೆಯಲ್ಲಿ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಅಭಿವೃದ್ಧಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸಂಶೋಧನೆ ನಡೆಸುವ ಮೂಲಕ ಸಮಾಜ ಮತ್ತು ದೇಶಕ್ಕೆ ಉತ್ತಮ
ಕೊಡುಗೆ ನೀಡುವಂತಾದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನದ ಅಗತ್ಯತೆ ಹಿಂದಿಗಿಂತಲೂ ಹೆಚ್ಚಾಗಿದೆ. ವಿಜ್ಞಾನ ಸಮಾಜದಲ್ಲಿನ ಅಸಮಾನತೆಯನ್ನೇ ಮೂಲೋತ್ಪಾಟನೆ ಮಾಡಬಲ್ಲದು. ಸಂಶೋಧನೆ ಮತ್ತು ಅನ್ವೇಷಣೆಯ ಮೂಲಕ ರೈತರು, ವಿಕಲ ಚೇತನರಿಗೆ ಅನುಕೂಲ ಮಾಡಿಕೊಡುವಂತಾಗಬೇಕು ಎಂದು
ತಿಳಿಸಿದರು. 

ಬುದ್ಧಿವಂತಿಕೆ ಮತ್ತು ಆವಿಷ್ಕಾರ ಎರಡೂ ಭಿನ್ನ. ಬುದ್ಧಿವಂತರಾಗಿದ್ದರೂ ಸಂಶೋಧನೆಯ ಗುಣವೇ ಇರದಿದ್ದರೆ ಯಾವುದೇ ಪ್ರಯೋಜನ ಆಗುವುದಿಲ್ಲ, ಸಂಶೋಧನೆಯತ್ತ ಆಸಕ್ತಿ ಇದ್ದವರು ಏನಾದರೂ ಒಂದು ಹೊಸದನ್ನು ಕಂಡು ಹಿಡಿಯುತ್ತಾರೆ. ವಿದ್ಯಾರ್ಥಿ ಸಮುದಾಯದಲ್ಲಿ ಸಂಶೋಧನೆ ಜ್ಞಾನ ಬೇಕಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರಲ್ಲಿ ಅನ್ವೇಷಣೆಯ ಅಭಿರುಚಿ ಮತ್ತು ಆಸಕ್ತಿ ಇದ್ದಲ್ಲಿ ವಿಜ್ಞಾನಿ ಆಗಬಹುದು. ವಿಜ್ಞಾನಿಗಳಾಗಲು ಯಾವುದೇ ಕೋರ್ಸ್‌ನ ಅಗತ್ಯ ಇಲ್ಲ. ಬುದ್ಧಿಶಕ್ತಿಯ ಮೂಲಕ ಸಂಶೋಧನೆ ನಡೆಸಿ, ಹೊಸತನ ಕಂಡು ಹಿಡಿಯಬಹುದು. ವಿದ್ಯಾರ್ಥಿಗಳು ಮೂಲ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ನಿವೃತ್ತ ಮುಖ್ಯ ಶಿಕ್ಷಕ ಎಂ.ಟಿ. ಶರಣಪ್ಪ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಅದನ್ನು ಋಣಾತ್ಮಕವಾಗಿ ಬಳಸಿಕೊಳ್ಳುವ ಮನೋಭಾವ ಹೆಚ್ಚಾಗುತ್ತಿದೆ.  ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ವಿಜ್ಞಾನದ ಉಪಯೋಗದ ಮೂಲಕ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವ ಬದಲಿಗೆ ಮಾನವೀಯತೆ ನಾಶ ಪಡಿಸಿಕೊಳ್ಳುವ ಮೂಲಕ ನಮ್ಮನ್ನು ನಾವೇ ನಾಶ ಮಾಡಿಕೊಳ್ಳುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಅನ್‌ಮೋಲ್‌ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜಿ. ದಿನೇಶ್‌ ಅಧ್ಯಕ್ಷತೆ ವಹಿಸಿದ್ದರು. ಗಣಿತ-ವಿಜ್ಞಾನ ವಿಷಯ ಪರಿವೀಕ್ಷಕ ಕೆ. ಸೋಮಶೇಖರ್‌, ಯು. ಕೊಟ್ರೇಶ್‌ ಇತರರು ಇದ್ದರು. ಎಂ.ಗುರುಸಿದ್ದಸ್ವಾಮಿ ನಿರೂಪಿಸಿದರು. ಅನ್‌ಮೋಲ್‌ ವಿದ್ಯಾಸಂಸ್ಥೆಯ ಎನ್‌.ವಿ.ಶುಕ್ಲ, ಜೈನ್‌ ವಿದ್ಯಾಲಯದ ಮನನ್‌ ವಿ.ಜೈನ್‌, ಸರ್‌. ಎಂ.ವಿ. ಪಿಯು ಕಾಲೇಜಿನ ಜೆ.ವಿ.ಜಯಂತ್‌ಗೆ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next