ತರೀಕೆರೆ: ಕುಸ್ತಿ ಒಂದು ಪ್ರಾಚೀನ ಕಲೆ. ರಾಜಾಶ್ರಯದಲ್ಲಿ ಬೆಳೆದು ಬಂದ ಜಾನಪದ ಕ್ರೀಡೆ ಇಂದಿಗೂ ಎಲ್ಲಾ ವಯೋಮಾನದವರನ್ನು ಸೆಳೆಯುತ್ತಿರುವುದು ಸಂತೋಷದ ಸಂಗತಿ ಎಂದು ಜಿ.ಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹೇಳಿದರು.
ಅವರು ಶ್ರೀ ಗುರು ರೇವಣಸಿದ್ದೇಶ್ವರ ಕುಸ್ತಿ ಸಂಘ ಬಯಲು ರಂಗಮಂದಿರದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಬಯಲು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ತರೀಕೆರೆಯಲ್ಲಿ ಪಾಳೇಗಾರರ ಕಾಲದಿಂದ ನಡೆದು ಬಂದಿರುವ ಕುಸ್ತಿ ಸ್ಪರ್ಧೆಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಕುಸ್ತಿ ಅಭ್ಯಾಸ ಮಾಡುವುದರಿಂದ ಕುಸ್ತಿ ಪಟುವಿಗೆ ಸಮಾಜದಲ್ಲಿ ಉತ್ತಮ ಸ್ಥಾನ ದೊರೆಯುತ್ತದೆ. ಆತ ದೈಹಿಕವಾಗಿ ಬಲಿಷ್ಠವಾಗದೆ ತನ್ನ ಮನಸ್ಥಿತಿಯನ್ನು ತನ್ನ ಹತೋಟಿಯಲ್ಲಿಟ್ಟು ಕೊಳ್ಳುತ್ತಾನೆ. ಗರಡಿ ಮನೆಗಳಲ್ಲಿ ತನ್ನ ದೇಹವನ್ನು ಹುರುಪುಗೊಳಿಸುವುದರಿಂದ ಆತ ಆರೋಗ್ಯವಾಗಿರುತ್ತಾನೆ ಎಂದರು.
ಪುರಸಭಾಧ್ಯಕ್ಷೆ ಅಶ್ವಿನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕುಸ್ತಿ ಪಂದ್ಯಾವಳಿಗಳಿಗೆ ಮಹಿಳೆಯರನ್ನು ಸಮಾರಂಭಕ್ಕೆ ಆಹ್ವಾನಿಸುತ್ತಿರುವುದು ಸಂತಸದ ವಿಷಯ. ಹಿಂದಿನ ದಿನಗಳಲ್ಲಿ ಕೇವಲ ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಓದಿ ಕುಸ್ತಿ ಪಂದ್ಯಾವಳಿಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದವು. ತರೀಕೆರೆ
ಕುಸ್ತಿಗೆ ತನ್ನದೆ ಆದ ಇತಿಹಾಸವಿದೆ.
ಇಲ್ಲಿನ ಕುಸ್ತಿ ಪಾಳೇಗಾರರ ಬಳುವಳಿ, ಅವರು ಬಿಟ್ಟು ಹೋದ ಕುಸ್ತಿ ಕಲೆಯನ್ನು ಇಂದಿಗೂ ಉಳಿಸಿ ಬೆಳೆಸಿಕೊಂಡು ಬಂದಿರುವುದು ಶ್ಲಾಘನೀಯ ವಿಚಾರ ಎಂದು ಹೇಳಿದರು. ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಮಹೇಂದ್ರ ಮಾತನಾಡಿ, ನೂರಾರು ವರ್ಷಗಳಿಂದ ಕುಸ್ತಿ ಸ್ಪರ್ಧೆಯನ್ನು ಆಯೋಜಕರು ಆಯೋಜಿಸುತ್ತಿರುವುದು ಸುಲಭದ ಮಾತಲ್ಲ. ರಾಜ್ಯ ಮಟ್ಟದ ಹೆಸರು ಮಾಡಿರುವ ತರೀಕೆರೆ ಕುಸ್ತಿ ಸ್ಪರ್ಧೆಯನ್ನು ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಭಾಗವಹಿಸುವಂತೆ ಸಂಘಟಕರು ಮಾಡಬೇಕಾಗಿದೆ.
ಕುಸ್ತಿಯನ್ನು ಏರ್ಪಡಿಸುವುದಕ್ಕೆ ಎಲ್ಲರ ಸಹಕಾರ ಮುಖ್ಯ. ಕುಸ್ತಿ ಸಂಘದ ಪದಾಧಿಕಾರಿಗಳು ಶ್ರದ್ಧೆಯಿಂದ ಸಂಘಟಿಸುತ್ತಿರುವುದು ಸುತ್ಯಾರ್ಹವಾದುದು ಎಂದರು.
ಕುಸ್ತಿ ಸಂಘದ ಗೌರವಾಧ್ಯಕ್ಷ ವಗ್ಗಪ್ಪ ಮಂಜಣ್ಣ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಟಿ.ಎಲ್. ರಮೇಶ್, ಕುಸ್ತಿ ಸಂಘದ ಅಧ್ಯಕ್ಷ ಟಿ.ಆರ್.ಕೇಶವ, ಪುರಸಭಾ ಸದಸ್ಯ ಬೈಟು ರಮೇಶ್, ಕರಡಿ ಲಕ್ಷ್ಮಣ, ಗೋವಿಂದಪ್ಪ ಮಾತನಾಡಿದರು. ಸಮಾರಂಭದಲ್ಲಿ ಮಾಜಿ ಪೈಲ್ವಾನರು, ರವಿ, ಟಿ.ಎಂ.ಭೋಜರಾಜ್ ಪದಾಧಿಕಾರಿಗಳು ಇದ್ದರು.