ಹಾಗೆ ನೋಡಿದ್ರೆ ಬಹುಭಾಷಾ “RRR” ಸಿನಿಮಾ ಈಗಾಗಲೇ ಬೆಳ್ಳಿ ಪರದೆ ಮೇಲೆ ರಾರಾಜೀಸಬೇಕಿತ್ತು. ಆದರೆ, ಕೋವಿಡ್ ಮಹಾಮಾರಿಯಿಂದ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ. ಸೋಂಕಿನಿಂದಾಗಿ ಶೂಟಿಂಗ್ ತಡವಾಯಿತು, ಪರಿಣಾಮ ಹೇಳಿದ ದಿನದಂದು ಸಿನಿಮಾ ಕೂಡ ತೆರೆಗೆ ಬರಲಿಲ್ಲ. ಇದೀಗ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ RRR ಸಿನಿಮಾದ ಕುರಿತು ವದಂತಿಯೊಂದು ಹರಿದಾಡುತ್ತಿದ್ದು, ಅಭಿಮಾನಿಗಳ ತಲೆ ಬಿಸಿ ಮಾಡಿದೆ.
ಸ್ಟಾರ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಜ್ಯೂನಿಯರ್ ಎನ್‍ಟಿಆರ್ ಹಾಗೂ ಪವರ್ ಸ್ಟಾರ್ ರಾಮ್ ಚರಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘RRR’ ಚಿತ್ರ ಡಿಜಿಟಲ್ ಪ್ಲಾಟ್‍ಫಾರಂ ‘OTT’ಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಇದು ಸಹಜವಾಗಿಯೇ ಸಿನಿಮಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಬಾಹುಬಲಿಯಂತಹ ದೊಡ್ಡ ಚಿತ್ರಗಳನ್ನು ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಂಡಿರುವ ಸಿನಿ ಪ್ರೇಮಿಗಳು RRR ಚಿತ್ರವನ್ನೂ ಕೂಡ ಚಿತ್ರಮಂದಿರಗಳಲ್ಲಿಯೇ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಕಥಾ ಹಂದರದ ಈ ಚಿತ್ರವನ್ನು ದೊಡ್ಡ ಪರದೆ ( ಥಿಯೇಟರ್) ಮೇಲೆ ನೋಡಿದರೆನೇ ಒಂದು ಥ್ರಿಲ್ ಎನ್ನುವುದು ಅಭಿಮಾನಿಗಳ ಇಂಗಿತ. ಆದರೆ, ಸದ್ಯ ಕೇಳಿ ಬಂದಿರುವ ರೂಮರ್ ಸಹಜವಾಗಿಯೇ ಇವರಿಗೆ ಬೇಸರ ಮೂಡಿಸಿದೆ.
ರೂಮರ್ ತಳ್ಳಿ ಹಾಕಿದ ಪೆನ್ ಸ್ಟುಡಿಯೋ :
ಓಟಿಟಿಯಲ್ಲಿ RRR ಸಿನಿಮಾ ರಿಲೀಸ್ ವದಂತಿಯನ್ನು ಪೆನ್ ಸ್ಟುಡಿಯೋಸ್ ತಳ್ಳಿ ಹಾಕಿದೆ. ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಅದು ಹೇಳಿದೆ. ಅಂದಹಾಗೆ RRR ಚಿತ್ರದ ವಿತರಣೆ ಹಕ್ಕನ್ನು ಪೆನ್ ಸ್ಟುಡಿಯೋ ಪಡೆದುಕೊಂಡಿದೆ.
ಇನ್ನು ಬಾಹುಬಲಿ ಸರಣಿ ಸಿನಿಮಾಗಳ ಬಳಿಕ ರಾಜಮೌಳಿ ಅವರು RRR ಚಿತ್ರವನ್ನು ಕೈಗೆತ್ತಿಕೊಂಡರು. ಈ ಚಿತ್ರದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಗಳಾದ ರಾಮ್ ಚರಣ ಹಾಗೂ ಜ್ಯೂ.ಎನ್‍ಟಿಆರ್ ನಟಿಸುತ್ತಿರುವುದು ವಿಶೇಷ. ಮತ್ತೊಂದು ಇಂಟ್ರೆಸ್ಟಿಂಗ ವಿಚಾರ ಏನಂದರೆ ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ನಟಿ ಆಲಿಯಾ ಭಟ್ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.