Advertisement

ಸ್ಥಳೀಯರ ಬಾಳಿನ ಬೆಳಕು ಕಸಿದ ಆರ್‌ಟಿಪಿಎಸ್‌!

11:16 PM May 07, 2019 | Team Udayavani |

ರಾಯಚೂರು: ಇಲ್ಲಿಯ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ ಜಿಲ್ಲೆಗೆ ಸಮರ್ಪಕ ಬೆಳಕು ನೀಡದಿದ್ದರೂ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯುತ್‌ ಕೇಂದ್ರದ ವಿಷಕಾರಿ ಹಾರುಬೂದಿ ಕಂಡಲ್ಲೆಲ್ಲ ಹರಡುತ್ತಿದ್ದು, ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದೆ.

Advertisement

ಸುರಕ್ಷಿತವಾಗಿ ಸಾಗಿಸಬೇಕಾದ ಹಾರುಬೂದಿ ನಿರ್ವಹಣೆ ಹದಗೆಟ್ಟಿದ್ದು, ಕಳೆದ 3-4 ದಿನಗಳ ಹಿಂದೆ ರಾತ್ರೋರಾತ್ರಿ ಚಿಮಣಿಗಳ ಮೂಲಕ ಹೊರ ಬಿಡಲಾಗಿತ್ತು. ಇದರಿಂದ ಬೆಳಗಾಗುವುದರಲ್ಲಿ ಮನೆ, ಹೊಲ, ಗದ್ದೆಗಳೆಲ್ಲ ಬೂದಿಯಿಂದ ಆವೃತಗೊಂಡು ಜನ ಕಂಗೆಡುವಂತಾಗಿತ್ತು.

ಗಿಡ ಮರ, ವಾಹನಗಳ ಮೇಲೆಲ್ಲ ಹರಿದಾಡಿತ್ತು. ಈ ಬಗ್ಗೆ ಅಧಿ ಕಾರಿಗಳನ್ನು ಕೇಳಿದರೆ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ, ಕೂಡಲೇ ಸರಿ ಮಾಡಲಾಗಿದೆ ಎಂದು ಸಮಜಾಯಿಷಿ ನೀಡುತ್ತಾರೆ. ಆದರೆ ವರ್ಷಾನುಗಟ್ಟಲೇ ಕಣ್ಣಿಗೆ ಕಾಣದ ರೀತಿಯಲ್ಲಿ ಹಾರುಬೂದಿ ನೇರವಾಗಿ ದೇಹ ಸೇರುತ್ತಿರುವ ಬಗ್ಗೆ ನಿರುತ್ತರರಾಗುತ್ತಾರೆ.

ಆರ್‌ಟಿಪಿಎಸ್‌ ಇಡೀ ರಾಜ್ಯಕ್ಕೆ ಶೇ.40 ವಿದ್ಯುತ್‌ ನೀಡುವ ಬೃಹತ್‌ ಕೇಂದ್ರ. ಆದರೆ, ಸ್ಥಳೀಯರ ಬಾಳನ್ನೇ ಕತ್ತಲೆಗೆ ದೂಡುತ್ತಿದೆ. ಕೇಂದ್ರದ ಸುತ್ತಲಿನ ಗ್ರಾಮಗಳಾದ ವಡ್ಲೂರು, ಯದ್ಲಾಪುರ, ರಂಗಾಪುರ, ಚಿಕ್ಕಸೂಗುರು, ಕುಕುನೂರು ಸೇರಿ ಇನ್ನಿತರ ಗ್ರಾಮಗಳಿಗೆ ಈ ಕೇಂದ್ರದಿಂದ ಬಿಡುವ ಹಾರುಬೂದಿ ಸಮಸ್ಯೆಯಾಗಿ ಪರಿಣಮಿಸಿದೆ.

1720 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಈ ಕೇಂದ್ರದಲ್ಲಿ ನಿತ್ಯ ಸಾವಿರಾರು ಟನ್‌ ಕಲ್ಲಿದ್ದಲು ಉರಿಸಲಾಗುತ್ತದೆ. ಈ ಮುಂಚೆಯೂ ಈ ಸಮಸ್ಯೆಗೆ ಸುತ್ತಲಿನ ಜನ ಬೇಸತ್ತಿದ್ದಾರೆ. ಬೂದಿ ಮಿಶ್ರಿತ ಗಾಳಿ ಸೇವಿಸಿ ಜನರಿಗೆ ಅಸ್ತಮಾ, ಚರ್ಮರೋಗ, ಕ್ಯಾನ್ಸರ್‌ನಂಥ ಕಾಯಿಲೆಗಳೂ ಆವರಿಸಿಕೊಳ್ಳುತ್ತಿವೆ.

Advertisement

ಹಾರುಬೂದಿ ಸಾಗಿಸುವ ವಾಹನಗಳು ಅದನ್ನು ರಸ್ತೆಗಳ ಮೇಲೆ ಚೆಲ್ಲಾಡಿಕೊಂಡು ಹೋಗುತ್ತಿರುವುದು ಒಂದೆಡೆಯಾದರೆ, ಬೂದಿ ಗಾಳಿ ಜತೆ ಮಿಶ್ರಣಗೊಂಡು ನೇರವಾಗಿ ದೇಹ ಸೇರುತ್ತಿರುವುದು ಮತ್ತೂಂದೆಡೆ. ಕಳೆದ ಕೆಲ ವರ್ಷಗಳಿಂದ ಬೆಳೆಗಳ ಮೇಲೆಲ್ಲ ಬೂದಿ ಹರಡಿ ಇಳುವರಿ ಕೂಡ ಸರಿಯಾಗಿ ಬರುತ್ತಿಲ್ಲ ಎಂಬುದು ರೈತರ ದೂರು. ಜನರು ಕೂಡ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ.

ಊರು ತೊರೆದ ಜನ: ಹಾರುಬೂದಿ ಪ್ರಮಾಣ ಮಿತಿ ಮೀರಿದ ಹಿನ್ನೆಲೆಯಲ್ಲಿ ಸುತ್ತಲಿನ ಗ್ರಾಮಗಳಲ್ಲಿ ಕೆಲ ನಿವಾಸಿಗಳು ತಾತ್ಕಾಲಿಕವಾಗಿ ಊರು ತೊರೆದು ಸಂಬಂ ಧಿಕರ ಮನೆಗಳಿಗೆ ತೆರಳಿದ್ದಾರೆ. ಮನೆಯಲ್ಲೆಲ್ಲ ಹಾರುಬೂದಿ ಹರಡಿದ್ದನ್ನು ಕಂಡ ಜನ ಭಯಭೀತರಾಗಿದ್ದಾರೆ. ಮುಂಚೆಯೂ ಸಣ್ಣ ಪ್ರಮಾಣದಲ್ಲಿ ಹಾರುಬೂದಿ ಕಾಣಿಸಿಕೊಳ್ಳುತ್ತಿತ್ತು, ಈಗ ಹೆಚ್ಚಾಗಿದೆ ಎಂಬುದು ಗ್ರಾಮಸ್ಥರ ದೂರು.

ಆರ್‌ಟಿಪಿಎಸ್‌ನ ಹಾರು ಬೂದಿ ವಿಭಾಗದಲ್ಲಿ ತಾಂತ್ರಿಕ ಸಮಸ್ಯೆಯಾಗಿತ್ತು. ಇದರಿಂದ ಸ್ವಲ್ಪ ಮಟ್ಟಿಗೆ ಬೂದಿ ಗಾಳಿಯಲ್ಲಿ ಹರಿದಾಡಿದೆ. ಕೂಡಲೇ ದುರಸ್ತಿ ಮಾಡಲಾಗಿದೆ. ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಜನರಿಗೆ ಸಮಸ್ಯೆ ಕುರಿತು ಮನವರಿಕೆ ಮಾಡಕೊಡಲಾಗಿದೆ. ಮಾಲಿನ್ಯ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪರಿಸರಕ್ಕೆ, ಜನರ ಆರೋಗ್ಯಕ್ಕೆ ಹಾನಿಯಾಗದ ರೀತಿಯಲ್ಲಿ ಹಾರುಬೂದಿ ನಿರ್ವಹಣೆ ಮಾಡಲಾಗುತ್ತಿದೆ.
-ಮಲ್ಲಿಕಾರ್ಜುನ ಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಆರ್‌ಟಿಪಿಎಸ್‌

Advertisement

Udayavani is now on Telegram. Click here to join our channel and stay updated with the latest news.

Next