Advertisement

3 ದಶಕದ ಬಳಿಕ ಅಂಗನವಾಡಿಗೆ ಸಿಗಲಿದೆ ಆರ್‌ಟಿಸಿ!

05:52 AM Jan 05, 2019 | Team Udayavani |

ಬೆಳಂದೂರು: ಅಂಗನವಾಡಿ ಕೇಂದ್ರವೊಂದಕ್ಕೆ ತನ್ನ ಹೆಸರಿನಲ್ಲಿ ಪಹಣಿ ಪತ್ರ ಆಗಲು ಬರೋಬ್ಬರಿ 3 ದಶಕಗಳೇ ಬೇಕಾಯಿತು. 25 ವರ್ಷಗಳ ಸತತ ಮನವಿಗೆ ಕೊನೆಗೂ ಸ್ಪಂದನೆ ಸಿಕ್ಕಿದೆ.

Advertisement

1989ರಲ್ಲಿ ಸ್ಥಾಪನೆಗೊಂಡ ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಕುದ್ಮಾರು ಗ್ರಾಮದ ಕೂರ ಅಂಗನವಾಡಿ ಕೇಂದ್ರಕ್ಕೆ ಆರ್‌ಟಿಸಿ ದೊರೆಯಲಿದೆ. ಆರ್‌ಟಿಸಿ ರಚನೆ ಕುರಿತಂತೆ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಿದೆ. ಅಂಗನವಾಡಿ ಕೇಂದ್ರದ ಜಾಗವು ಲೋಕೋಪಯೋಗಿ ಇಲಾಖೆಯದ್ದಾಗಿದ್ದ ಕಾರಣ ಆರ್‌ಟಿಸಿ ನೀಡುವಲ್ಲಿ ತೊಡಕಿತ್ತು ಎಂದು ಹೇಳಲಾಗುತ್ತಿತ್ತು. ವಾಸ್ತವವಾಗಿ ಕೂರ ಅಂಗನವಾಡಿ ಕೇಂದ್ರವು ಮುಖ್ಯರಸ್ತೆಯಿಂದ 40 ಮೀ. ದೂರದಲ್ಲಿತ್ತು.

ಸತತ ಮನವಿ
ಅಂಗನವಾಡಿ ಕಾರ್ಯಕರ್ತೆ ಕಳೆದ 25 ವರ್ಷಗಳಿಂದ ಗ್ರಾಮಸಭೆ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಆರ್‌ಟಿಸಿ ಮಾಡಿಕೊಡುವಂತೆ ಮನವಿ ನೀಡುತ್ತಾ ಬಂದಿದ್ದರು. ಆರ್‌ಟಿಸಿ ಮಾಡಿಕೊಡಲು ಕಂದಾಯ ಇಲಾಖೆಯಿಂದ ಸಾಧ್ಯವಿಲ್ಲವೆಂದಾದಲ್ಲಿ ಪ್ರತ್ಯೇಕ ಸರಕಾರಿ ಜಾಗದಲ್ಲಾದರೂ ನಿವೇಶನಕ್ಕಾಗಿ ಜಾಗ ಕಾದಿರಿಸುವಂತೆ ಕಾರ್ಯಕರ್ತೆ ವಸಂತಿ ಅವರು ನಿರಂತರವಾಗಿ ವಿನಂತಿಸಿಕೊಂಡಿದ್ದರು. ಸಿಡಿಪಿಒ ಕೂಡ ಈ ನಿಟ್ಟಿನಲ್ಲಿ ತಹಶೀಲ್ದಾರ್‌ ಅವರಲ್ಲಿ ಕೋರಿಕೊಂಡಿದ್ದರು. ಆದರೆ ಈ ಪ್ರಯತ್ನವೂ ಕೈಗೂಡಿರಲಿಲ್ಲ. ಅನೇಕ ಅಂಗನವಾಡಿ ಕೇಂದ್ರಗಳು ಇಂತಹದ್ದೇ ಸಮಸ್ಯೆಗಳನ್ನು ಇನ್ನು ಕೂಡ ಎದುರಿಸುತ್ತಲೇ ಇದೆ.

ಸೌಲಭ್ಯ ಪಡೆಯಲು ತೊಡಕು
ಪ್ರಸ್ತುತ ಅಂಗನವಾಡಿ ಕೇಂದ್ರದ ಹೆಸರಲ್ಲಿ ಆರ್‌ಟಿಸಿ ಇಲ್ಲದ ಕಾರಣ ಸರಕಾರದಿಂದ ಹೊಸ ಕಟ್ಟಡಕ್ಕೆ ಸಿಗುವ ಅನುದಾನ ಪಡೆಯಲು ಸಾಧ್ಯವಾಗಿಲ್ಲ. ಅದಲ್ಲದೇ ನಾನಾ ಕಾರಣಗಳಿಗಾಗಿ ಆರ್‌ಟಿಸಿಯ ಅಗತ್ಯತೆ ಇದ್ದು, ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಅಂಗನವಾಡಿ ಕೇಂದ್ರ ಅನುಭವಿಸಿತ್ತು.

ತಾ.ಪಂ. ಸದಸ್ಯರ ಮುತುವರ್ಜಿ
ತಾ.ಪಂ. ಸದಸ್ಯೆ ಲಲಿತಾ ಈಶ್ವರ ಅವರು ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಸರ್ವೆ ಕಾರ್ಯ ನಡೆಸುವಂತೆ ಕೇಳಿಕೊಂಡರು. ಸ್ಥಳಕ್ಕಾಗಮಿಸಿದ ಪಿಡಬ್ಲೂ ್ಯಡಿ ಎಂಜಿನಿಯರ್‌ ಅಂಗನವಾಡಿ ಕೇಂದ್ರ ಪಿಡಬ್ಲ್ಯೂಡಿ ರಸ್ತೆ ಅಂತರದಿಂದ ಹೊರಗಿರುವುದನ್ನು ಖಚಿತಪಡಿಸಿದರು. ಬಳಿಕ ತಾ.ಪಂ. ಸದಸ್ಯೆ ಲಲಿತಾ ಅವರು ಸಂಬಂಧಪಟ್ಟ ಕಡತಗಳೊಂದಿಗೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಲ್ಲಿ ಈ ವಿಚಾರ ಪ್ರಸ್ತಾವಿಸಿ ಶೀಘ್ರದಲ್ಲೇ ಆರ್‌ಟಿಸಿ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದರು.

Advertisement

ಸರ್ವೆ ಕಾರ್ಯ ಪೂರ್ಣ
ಮಂಗಳವಾರ ಸರ್ವೇಯರ್‌ ಶಿವಣ್ಣ, ಕುದ್ಮಾರು ಗ್ರಾಮದ ಗ್ರಾಮ ಕರಣಿಕ ಸಂತೋಷ್‌, ಗ್ರಾಮ ಸಹಾಯಕ ಯೋಗೀಶ್‌ ಬರೆಪ್ಪಾಡಿ, ಬಾಬಣ್ಣ ಬರೆಪ್ಪಾಡಿ ಅವರು ಕೂರ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಸರ್ವೇ ಕಾರ್ಯ ನಡೆಸಿದರು. ಆರ್‌ಟಿಸಿಗೆ ಸಂಬಂಧಪಟ್ಟಂತಹ ಪ್ರಕ್ರಿಯೆ ಶೀಘ್ರದಲ್ಲೇ ಮಾಡಲಾಗುವುದು ಎಂದು ಶಿವಣ್ಣ ಭರವಸೆ ನೀಡಿದ್ದಾರೆ.

ತಾ.ಪಂ. ಸದಸ್ಯೆ ಲಲಿತಾ ಈಶ್ವರ, ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ, ಬಾಲವಿಕಾಸ ಸಮಿತಿ ಝೈನಾಬಿ, ಮಾಜಿ ಅಧ್ಯಕ್ಷ ಮೇದಪ್ಪ ಕೆಡೆಂಜಿ, ಅಂಗನವಾಡಿ ಕಾರ್ಯಕರ್ತೆ ವಸಂತಿ, ಸಹಾಯಕಿ ಲಲಿತಾ, ಹೆತ್ತವರಾದ ಲವಕುಮಾರ್‌ ನೂಜಿ, ಹರೀಶ್‌ ಜನತಾಗೃಹ ಅವರು ಸರ್ವೇ ಕಾರ್ಯದ ಸಂದರ್ಭ ಉಪಸ್ಥಿತರಿದ್ದರು.

ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದೆ
ಕೂರ ಅಂಗನವಾಡಿ ಕೇಂದ್ರ ಪಹಣಿ ಪತ್ರ ಹೊಂದಿರದ ಹಿನ್ನೆಲೆಯಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಆರ್‌ಟಿಸಿ ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಕೋರಿಕೊಂಡಿದ್ದೆ. ಅದೆಷ್ಟೋ ವರ್ಷಗಳ ಬಳಿಕ ಅಂಗನವಾಡಿ ಕೇಂದ್ರಕ್ಕೆ ಆರ್‌ಟಿಸಿಯಾಗುತ್ತಿರುವುದು ಸಂತಸ ತಂದಿದೆ. ಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸಿದಂತಾಗಿದೆ. 
– ಲಲಿತಾ ಈಶ್ವರ, ಸದಸ್ಯರು, ತಾ.ಪಂ. ಪುತ್ತೂರು

ಬೇಡಿಕೆ ಈಡೇರುತ್ತಿದೆ
ಆರ್‌ಟಿಸಿ ರಚನೆಗಿದ್ದ ಸಮಸ್ಯೆಗಳು ಬಗೆಹರಿದು ಬಹುವರ್ಷಗಳ ಬೇಡಿಕೆ ಈಡೇರುತ್ತಿದೆ. ಪಹಣಿ ಪತ್ರ ಮಾಡಿಕೊಡುವಂತೆ ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಾಲವಿಕಾಸ ಸಮಿತಿಯವರು ಪ್ರತಿ ಗ್ರಾಮಸಭೆಯಲ್ಲೂ ಮನವಿ ಮಾಡಿಕೊಂಡು ಬಂದಿದ್ದರು. ಮನವಿಗೆ ಕಂದಾಯ ಇಲಾಖೆಯಿಂದ ಸ್ಪಂದನೆ ದೊರೆತಿದೆ.
 – ಉಮೇಶ್ವರಿ ಅಗಳಿ, ಅಧ್ಯಕ್ಷರು, ಗ್ರಾ.ಪಂ. ಬೆಳಂದೂರು

ಆರ್‌ಟಿಸಿ ಸಿಕ್ಕರೆ ಸಾಕಷ್ಟು ಅನುಕೂಲ
ಹಲವಾರು ವರ್ಷಗಳ ಬಳಿಕ ಅಂಗನವಾಡಿ ಕೇಂದ್ರಕ್ಕೆ ಪಹಣಿ ಪತ್ರ ಲಭಿಸುತ್ತಿರುವುದು ಸಂತಸದ ವಿಚಾರ. ಇದರಿಂದ ಮುಂದಿನ ದಿನಗಳಲ್ಲಿ ನಮಗೆ ಸಾಕಷ್ಟು ಅನುಕೂಲವಾಗಲಿದ್ದು, ಆರ್‌ಟಿಸಿ ಮಾಡಿಕೊಡುವಂತೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಕೂರ ಅಂಗನವಾಡಿ ಕಾರ್ಯಕರ್ತೆ ವಸಂತಿ ಹೇಳಿದ್ದಾರೆ.

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next