Advertisement

ತುರ್ತು ಸ್ಥಿತಿಯಲ್ಲಿ ಆರ್‌ಎಸ್‌ಎಸ್‌ ದೇಶ ರಕ್ಷಕ: ಕಲ್ಲಡ್ಕ ಪ್ರಭಾಕರ್‌ ಭಟ್‌

06:10 PM Jun 27, 2024 | Nagendra Trasi |

ಉದಯವಾಣಿ ಸಮಾಚಾರ
ಶಿವಮೊಗ್ಗ: ತುರ್ತು ಪರಿಸ್ಥಿತಿ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶವನ್ನು ರಕ್ಷಣೆ ಮಾಡಿತು ಎಂದು ಹಲವು ಸಾಹಿತಿಗಳೇ ಹೇಳಿದ್ದಾರೆ. ಅದು ಸತ್ಯ ಕೂಡ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಡಾ| ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದರು.

Advertisement

ನಗರದ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ವತಿಯಿಂದ ಬಂಟರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ “ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಚಾರ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಪ್ರಧಾನಿಯಾಗಿ ನೆಹರು ಆಯ್ಕೆ ತಪ್ಪು ನಿರ್ಧಾರ ಆಗಿತ್ತು. ಅವರಿಗೆ ಭಾರತದ ಧರ್ಮ, ಸಂಸ್ಕೃತಿ ಗೊತ್ತಿರಲಿಲ್ಲ. ಚೀನೀ ಭಾಯಿ ಅಂತ ಚೀನಾಕ್ಕೆ 45 ಸಾವಿರ ಚದರ ಕಿ.ಮೀ. ಹಾಗೂ ಪಾಕ್‌ಗೆ ಆಕ್ರಮಿತ ಕಾಶ್ಮೀರ ಪ್ರದೇಶ ಬಿಟ್ಟುಕೊಟ್ಟಿದ್ದೇ ಅವರ ಸಾಧನೆ ಎಂದರು.

ತುರ್ತು ಪರಿಸ್ಥಿತಿ ಹೇರಲು ಆದೇಶ: ಇಂದಿರಾ ಗಾಂಧಿ ಮದುವೆ ಆಗಿದ್ದು ಫಿರೋಜ್‌ ಖಾನ್‌ ಅವರನ್ನು. ಅವರು ಗಾಂಧಿ ಕುಟುಂಬಕ್ಕೆ ಸೇರಿದವರೂ ಅಲ್ಲ, ವಂಶಸ್ಥರೂ ಅಲ್ಲ. ಆದರೂ ಮುಗ್ಧ ಜನ ಗಾಂಧಿ ಕುಟುಂಬಕ್ಕೆ ಸೇರಿದವರು ಎಂದು ನಂಬಿದ್ದರು. ಕೇವಲ ಒಂದು ರೈಲು ಅಪಘಾತಕ್ಕೆ ಆಗಿನ ರೈಲ್ವೆ ಸಚಿವರಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರು. ಆದರೆ ಹೈಕೋರ್ಟ್‌ನಲ್ಲಿ ಇಂದಿರಾ ಗಾಂಧಿ ವಿರುದ್ಧ ತೀರ್ಪು ಬಂದಿತ್ತು. ಇವರು ರಾಜೀನಾಮೆ ಬದಲು ಅಧಿಕಾರ ಉಳಿಸಿಕೊಳ್ಳಲು ಮುಂದಾದರು. ಆಗಿನ ಕಾನೂನುಮಂತ್ರಿ ಎಸ್‌.ಎಸ್‌. ರೈ ಆಂತರಿಕ ತುರ್ತು ಪರಿಸ್ಥಿತಿ ಹೇರಲು ಸಲಹೆ ನೀಡಿದರು.

ಆಗಿನ ರಬ್ಬರ್‌ ಸ್ಟಾಂಪ್‌ ರಾಷ್ಟ್ರಪತಿ ಅದನ್ನು ಜಾರಿ ಮಾಡಿದರು. ಇಡೀ ದೇಶದಲ್ಲಿ 567 ಜನರನ್ನು ಮೂರ್ನಾಲ್ಕು ಗಂಟೆಯಲ್ಲಿ ಬಂ ಧಿಸಿದರು. ಇಂದಿರಾ ಗಾಂಧಿ ವಿರೋಧಿ ನಾಯಕರನ್ನು ಬಂಧಿಸಲಾಯಿತು ಎಂದರು.

ಇಂದಿರಾಗಾಂಧಿ ವಿರುದ್ಧ ಮಾತನಾಡುವ ತಾಕತ್ತು ಯಾರಿಗೂ ಇರಲಿಲ್ಲ. ಪತ್ರಿಕೆ ಮುದ್ರಣ ಸ್ಥಗಿತ ಆಗಿದ್ದವು. ಭಾಷಣ ಮಾಡುವ ಹಾಗಿರಲಿಲ್ಲ. ವೈಯಕ್ತಿಕ ಸ್ವಾತಂತ್ರ್ಯ ಸಂಪೂರ್ಣ ಹರಣ ಮಾಡಲಾಗಿತ್ತು ಎಂದರು. ಆಗ ಆರ್‌ಎಸ್‌ಎಸ್‌ ಪ್ರತಿಭಟನೆಯ ನಿರ್ಧಾರ ಮಾಡಿತು. ಜನರು ಇದನ್ನು ಹುಚ್ಚು ಎಂದರು. ಹೆಗಡೇವಾರ್‌ ಅವರು ಇದು ದೇಶದ ಹುಚ್ಚು ಅಂತ ಹೇಳಿದರು. ರಸ್ತೆಗೆ ಇಳಿದು ಕಾರ್ಯಕರ್ತರು ಭಾರತ್‌ ಮಾತಾ ಕೀ ಜೈ ಘೋಷಣೆ ಕೂಗಿದ್ದರು. ಆಗ ಮಂಗಳೂರಿನಲ್ಲಿ ಕಹಳೆ ಪತ್ರಿಕೆ ಗುಪ್ತವಾಗಿ ಆರಂಭವಾಯಿತು.

Advertisement

ಪೊಲೀಸ್‌ ಠಾಣೆಗೆ ಪೇಪರ್‌ ಅಂಟಿಸಿದರು. ಪೇಪರ್‌ ಹಂಚುವಾಗ ಕೆಲವರ ಬಂಧನವೂ ಆಯಿತು. 263 ಪತ್ರಕರ್ತರ ಮೇಲೆ ಪ್ರಕರಣ ಮೀಸಾ ಕಾಯ್ದೆಯಡಿಯಲ್ಲಿ ದಾಖಲಾಗಿತ್ತು. ಆಗ ನಿಷ್ಠಾವಂತ ಕಾರ್ಯಕರ್ತರು ಇದ್ದರು ಎಂದರು. ಡಾ| ಶ್ರೀನಿವಾಸ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ| ರಾಚಪ್ಪ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ವೈ.ಎ. ನಾರಾಯಣ ಸ್ವಾಮಿ, ಗದಗ್‌ ಗ್ರಾಮೀಣ ಅಭಿವೃದ್ಧಿ ವಿವಿ ನಿವೃತ್ತ ಕುಲಪತಿ ಪ್ರೊ| ವಿಷ್ಣುಕಾಂತ್‌, ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ರಾಮು ನಾಯ್ಕ ಉಪಸ್ಥಿತರಿದ್ದರು.

ಸರ್ವಾಧಿಕಾರಿ ಆದವರಿಗೆ ಕಿವಿ ಕಣ್ಣು ಇರುವುದಿಲ್ಲ. ಇಂದಿರಾ ಎಂದರೆ ಇಂಡಿಯಾ ಎಂಬ ಭಾವನೆ ಅವರಲ್ಲಿ ಮೂಡಿತ್ತು. ಕೊನೆಗೆ ಇದೇ ಹುಂಭತನದಲ್ಲಿ ಚುನಾವಣೆ ಘೋಷಣೆ ಮಾಡಿದರು. ಆಗ ಸಂಘದ ಮೂರನೇ ಸರಸಂಘ ಚಾಲಕರು
ಪಕ್ಷರಹಿತವಾಗಿ ಚುನಾವಣೆ ಸ್ಪರ್ಧೆ ಮಾಡಲು ಹೇಳಿದ್ದರು. ಫಲಿತಾಂಶ ಬಂದಾಗ ಇಂದಿರಾ ಗಾಂಧಿ ಸೋತು ಹೋಗಿದ್ದರು. ಹಲವಾರು ರಾಜ್ಯದಲ್ಲಿ ಇಂದಿರಾ ಗಾಂಧಿ ಪಕ್ಷ ಶೂನ್ಯ ಸಾಧನೆ ಮಾಡಿತು. ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಯಶಸ್ಸು. ಇದು ಎರಡನೇ ಸ್ವಾತಂತ್ರ್ಯ ಹೋರಾಟ.
●ಡಾ| ಕಲ್ಲಡ್ಕ ಪ್ರಭಾಕರ್‌ ಭಟ್‌, ಹಿರಿಯ ಸ್ವಯಂಸೇವಕ

Advertisement

Udayavani is now on Telegram. Click here to join our channel and stay updated with the latest news.

Next