Advertisement

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

09:18 PM Jun 30, 2024 | Team Udayavani |

ರಬಕವಿ-ಬನಹಟ್ಟಿ : ರೈತನೆ ದೇಶದ ಬೆನ್ನೆಲುಬು ಎಂಬ ಗಾದೆ ಮಾತು ಇದೆ. ಆದರೆ ಹವಾಮಾನ, ಮಾರುಕಟ್ಟೆ, ಯಾವುದು ರೈತನಿಗೆ ಅನುಕೂಲಕರವಾಗಿಲ್ಲ. ಈ ವರ್ಷ ಅಂತು ಹೆಚ್ಚಿನ ತಾಪಮಾನ, ನೀರಿನ ಕೊರತೆ ಯಾವುದೇ ಬೆಳೆ ಮಾಡಿದರೂ ಯಶಸ್ಸು ಕಾಣದಂತಾಗಿ ರೈತ ಸಂಕಷ್ಟ ಪರಿಸ್ಥಿತಿ ಅನುಭವಿಸಿದ್ದಾನೆ. ಅದೇ ರೀತಿ ಬಾಗಲಕೋಟೆ ಜಿಲ್ಲೆ ಹಳಿಂಗಳಿ ಗ್ರಾಮದ ಪ್ರಗತಿಪರ ರೈತರಾದ ಧನಪಾಲ ನಾನಪ್ಪ ಯಲ್ಲಟ್ಟಿ ಇವರ ನಿರಂತರವಾಗಿ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದ್ದಾರೆ.

Advertisement

ತಾವು ಬೆಳೆದ ಟೋಮ್ಯಾಟೋ ಕೈ ಕೊಟ್ಟಾಗ ಅಂಜಿ ಸುಮ್ಮನೇ ಕುಳಿತುಕೊಳ್ಳದೇ ಅದಕ್ಕೆ ಪರ್ಯಾಯವಾಗಿ ಅದರಲ್ಲಿಯೇ ಹೀರೆಕಾಯಿಯನ್ನು ಬೆಳೆದು ಕೈ ತುಂಬ ಹಣ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

2010ರಲ್ಲಿ ಕೃಷಿ ಪಂಡಿತ ಮತ್ತು 2012ರಲ್ಲಿ ಕೃಷಿರತ್ನ ಪ್ರಶಸ್ತಿ, 2014ರಲ್ಲಿ ರಾಷ್ಟ್ರ ಮಟ್ಟದ ಮಹಿಂದ್ರಾ ಸಮೃದ್ಧಿ ಪ್ರಶಸ್ತಿ ವಿಜೇತ ಹಳಿಂಗಳಿಯ ಧನಪಾಲ್ ಯಲ್ಲಟ್ಟಿ. ಇವರು ಕಲಿತ್ತಿದ್ದು ಮಾತ್ರ ಎಸ್‌ಎಸ್‌ಎಲ್‌ಸಿ. ಆದರೆ ಕೃಷಿಯಲ್ಲಿ ಮಾತ್ರ ಹಲವಾರು ಬಗೆಯ ವಿಭಿನ್ನ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದ ರೈತ.

ಫೆಬ್ರವರಿ ಮೊದಲವಾರ, 2024ರಲ್ಲಿ ಸುಮಾರು 1.30 ಗಂಟೆ ಕ್ಷೇತ್ರದಲ್ಲಿ ಬೆಡ್‌ಗಳನ್ನು ಮಾಡಿ ಮೂಲಗೊಬ್ಬರವಾಗಿ ಸಾರಜನಕ, ರಂಜಕ – ಪೊಟ್ಯಾಷ್ ಗಳನ್ನು ಒದಗಿಸುವ ಡಿಎಪಿ, ಮೊಪ, ಗ್ರೀನ್ ಕೊಪ್ 108, ಮಿಂಗ್ ಪಿ ಹಾಗೂ ಆ್ಯಂಪಲ್ ಜಿ ಗಳನ್ನು ಬೆಡ್ ನಲ್ಲಿ ಹಾಕಿ (ಅದಕ್ಕಿಂತ ಮುಂಚೆ ಎರೆಹುಳು ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರಗಳನ್ನು ಭೂಮಿಯಲ್ಲಿ ಮಿಶ್ರಣ ಮಾಡಿದ್ದೆವು.) ಪ್ಲಾಸ್ಟಿಕ್ ಮಲ್ಚಿಂಗ್‌ಪೇಪರ ಅಳವಡಿಸಿ ಜಿಗಜ್ಯಾಗ್ ಪದ್ದತಿಯಲ್ಲಿ ಸಸಿಯಿಂದ ಸಸಿಗೆ ಒಂದುವರೆ ಅಡಿ ಅಂತರದಲ್ಲಿ ಟೋಮ್ಯಾಟೋ ಸಸಿಗಳನ್ನು ನಾಟಿ ಮಾಡಿದೆವು, ಬೆಳೆ ತುಂಬಾ ಚೆನ್ನಾಗಿ ಬಂದರು ಹೆಚ್ಚಿದ ತಾಪಮಾನದಿಂದಾಗಿ ಒಟ್ಟು ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಮಾತ್ರ ಆದಾಯ ಗಳಿಸಲು ಸಾಧ್ಯವಾಯಿತು. ಆದರೆ ಖರ್ಚು ಸುಮಾರು 2.5 ಲಕ್ಷ ಮಾಡಿದ್ದರಿಂದ ಇನ್ನೇನು ಮಾಡಬೇಕು ಅಂಥ ಚಿಂತಿಸುವಾಗ ಟೋಮ್ಯಾಟೋ ಬೆಳೆ ಇನ್ನು30% ಇರುವಾಗಲೇ ಜಿಗ್‌ಜ್ಯಾಗ್ ಪದ್ದತಿಯಲ್ಲಿ ಸಸಿಯಿಂದ ಸಸಿಗೆ 2.5 ಅಡಿ ಅಂತರದಲ್ಲಿ ಅದೇ ಬೆಡ್‌ನಲ್ಲಿ ಹೀರೆಕಾಯಿ ಸಸಿಯನ್ನು ನಾಟಿ ಮಾಡಿ, ಬೆಳೆಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುವ ಎಕ್ಸೀಡ್, ಮಿಂಗಲ್ ಎಲ್, ಹಾಗೂ ವೇಗವರ್ಧಕಗಳಾದ ಎಂಪಲ್‌ಗಳನ್ನು ಸಿಂಪರಣೆ ಮಾಡಿ ನೀರಿನಲ್ಲಿ ಕರಗುವ ಎನ್‌ಪಿಕೆಗಳ ಜೊತೆಗೆ ಮಿಂಗಲ್ ಪಿ, ಆ್ಯಗ್ರಿಪ್ಲೆಕ್ಸ್ ಗಳನ್ನು ಡ್ರಿಪ್ ಮುಖಾಂತರ ಕೊಟ್ಟು ಭರ್ಜರಿ ಬೆಳೆಯನ್ನು ಪಡೆದುಕೊಂಡಿದ್ದಾರೆ.

ಈಗ ಹೀರೆಕಾಯಿ ಮೊದಲ 1 ವಾರ ಪ್ರತಿದಿನ 13 ರಿಂದ 14 ಕೆಜಿಯಂತೆ 1ಟ್ರೇ, ಅಂದರೆ1ನೇವಾರ ಪ್ರತಿದಿನ 10 ಟ್ರೇ, 2ನೇವಾರ 22ಟ್ರೇ, 3ನೇವಾರ 35 ರಿಂದ 40 ಟ್ರೇ ಹೀಗೆ ಒಟ್ಟು ಕಳೆದ 30ದಿನಗಳಿಂದ ಹೀರೆಕಾಯಿ ಬೆಳೆ ಇಳುವರಿ ಬರುತ್ತಿದ್ದು ಅದರಲ್ಲಿ ಇಲ್ಲಿಯವರೆಗೆ ಸುಮಾರು 8.5 ಯಿಂದ9 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಅಂದರೆ ಮೊದಲ ವಾರ ಪ್ರತಿ 1 ಟ್ರೇಗೆ ದರ600 ರೂ, ದೊರೆತ್ತಿದ್ದು, ಇದೀಗ ಮೂರನೇ ವಾರದಿಂದ ಪ್ರತಿ ಟ್ರೇಗೆ 650 ರಿಂದ 750 ರೂ ದೊರೆಯುತ್ತಿದೆ.

Advertisement

ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಇರುವುದರಿಂದ ಸಾಗಾಣಿಕೆ ಅನುಕೂಲವಾಗುತ್ತಿದೆ. ಅಲ್ಲದೇ ಬಿಸಿಲಿನ ತಾಪಮಾನದಿಂದ ಕೈ ಬಿಟ್ಟಿದ್ದ ಟೋಮ್ಯಾಟೋ ಕೂಡಾ ಈಗ ಮತ್ತೇ ಅಲ್ಲಿಯೇ ಚಿಗಿಯುತ್ತಿದ್ದು, ಅದು ಕೂಡಾ ಉತ್ತಮ ಲಾಭ ತರುವ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಧನಪಾಲ ಯಲ್ಲಟ್ಟಿ.

ಬೆಳೆ ನಾಶವಾಗಿದೆ ಏನು ಮಾಡಬೇಕು ಎಂದು ಕೈಕಟ್ಟಿ ಕುಳಿತು ಕೊಳ್ಳದೇ ಅದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡು ಅದರಲ್ಲಿಯೇ ಉತ್ತಮ ಲಾಭ ಗಳಿಸಿರುವ ಧನಪಾಲ ಒಟ್ಟಾರೆಯಾಗಿ ಪ್ರಾಮಾಣಿಕ ಪ್ರಯತ್ನ, ಕೃಷಿಯಲ್ಲಿನ ಅಭಿವೃದ್ದಿ ಅವರನ್ನು ಶ್ರೇಷ್ಠ ಕೃಷಿಕರನ್ನಾಗಿ ಮಾಡಿದೆ.

ಸಾವಯವ ಕೃಷಿ, ವಾಣಿಜ್ಯ ಬೆಳೆಗಳ ನಿರ್ವಹಣೆಯಲ್ಲಿ ಸಾಕಷ್ಟು ಪರಿಣಿತಿ ಹೊಂದಿರುವ ಧನಪಾಲ ಯಲ್ಲಟ್ಟಿಯವರ ಕೃಷಿ ಪದ್ಧತಿಯನ್ನು ವಿಕ್ಷಿಸಲು ಬಂದ ಕೃಷಿ ಅಧಿಕಾರಿಗಳು, ತಜ್ಞರು ಅಭಿಪ್ರಾಯ ಪಡುವಂತೆ, ಅಕ್ಕಪಕ್ಕದ ಪ್ರದೇಶದ ರೈತರಿಗೆ ಮಾದರಿಯಾಗಿರುವ ಧನಪಾಲ್ ಕಡಿಮೆ ಹೂಡಿಕೆ ಮತ್ತು ಅವಧಿಯಲ್ಲಿ ಹೆಚ್ಚು ವರಮಾನ ಪಡೆಯುವ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಾ ಇತರೆ ರೈತರಿಗೂ ಇವರು ಮಾದರಿಯಾಗಿದ್ದಾರೆ ಎನ್ನುತ್ತಾರೆ.

ಕಡಿಮೆ ಹೂಡಿಕೆ ಮತ್ತು ಹೆಚ್ಚು ಆದಾಯ ಪಡೆಯಲು ಹರಸಾಹಸ ಪಡುವ ವಾಣಿಜ್ಯೋದ್ಯಮಿಗಳಿಗಿಂತ ಭೂತಾಯಿಯ ಮಡಿಲಲ್ಲಿ ಕಡಿಮೆ ಕಾಲಾವಧಿ ಮತ್ತು ವೆಚ್ಚದಲ್ಲಿ ಹೆಚ್ಚಿನ ಇಳುವರಿಯನ್ನು ಮಿಶ್ರ ಬೆಳೆ ಪದ್ದತಿ ಮೂಲಕ ಪಡೆಯಬಹುದೆಂಬುದನ್ನೂ ನಿರೂಪಿಸಿದ ಧನಪಾಲ ಕೃಷಿಯಲ್ಲಿ ನಿಜಕ್ಕೂ ಧನವಂತರೆ ಸರಿ !

ಹೆಚ್ಚಿನ ಮಾಹಿತಿಗಾಗಿ ಧನಪಾಲ ಎನ್. ಯಲ್ಲಟ್ಟಿ, ಹಳಿಂಗಳಿ ಗ್ರಾಮ ಜಿ. ಬಾಗಲಕೋಟ ಮೊ: 9900030678 ಗೆ ಸಂಪರ್ಕಿಸಬಹುದು.

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next