Advertisement

ಬೆಳಗಾವಿ: ತುರ್ತು ಪರಿಸ್ಥಿತಿ ಮರೆಯಲು ಸಾಧ್ಯವೇ ಇಲ್ಲ- ಆರ್‌. ಅಶೋಕ

06:11 PM Jun 26, 2024 | Team Udayavani |

■ ಉದಯವಾಣಿ ಸಮಾಚಾರ
ಬೆಳಗಾವಿ: ದೇಶದಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಜನರು ಮರೆಯಲು ಸಾಧ್ಯವಿಲ್ಲ. ಸಂವಿಧಾನದ ಆಶೋತ್ತರಗಳನ್ನು  ಧಿಕ್ಕರಿಸಿ ಜನರ ಮೇಲೆ ನಡೆಸಿದ್ದ ದೌರ್ಜನ್ಯವನ್ನು ಮರೆಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು.

Advertisement

ನಗರದ ಹಿಂದವಾಡಿಯ ಮಹಾವೀರ ಭವನದಲ್ಲಿ ಮಂಗಳವಾರ ನಡೆದ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ಮಾಡಿದ ಅಪಚಾರ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಗೆ ಈಗ 50 ವರ್ಷ ಆಗಿದೆ. ಇದನ್ನು ಜನರು ಮರೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು, ಅಯೋಧ್ಯೆಯಲ್ಲಿ ಬಾಬರ್‌ ಶ್ರೀರಾಮ ಮಂದಿರ ಬೀಳಿಸಿದ್ದು, ಭಗತ್‌ ಸಿಂಗ್‌ರನ್ನು ನೇಣು ಹಾಕಿದ್ದನ್ನು ಮರೆತು ಬಿಡಲು ಸಾಧ್ಯವೇ? ಕಾಂಗ್ರೆಸ್‌ನವರೇ, ಎಷ್ಟೆಲ್ಲವನ್ನೂ ನಾವು ಮರೆಯಬೇಕು. ಬ್ರಿಟಿಷರು ದಾಳಿ ಮಾಡಿ ಲೂಟಿ ಮಾಡಿದ್ದನ್ನು, ಸಂವಿಧಾನವನ್ನು ಲೂಟಿ ಮಾಡಿ ತುರ್ತು ಪರಿಸ್ಥಿತಿ ಘೋಷಿಸಿದ್ದನ್ನು ಖರ್ಗೆ  ಮರೆತುಬಿಡಿ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.

ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಜನರು ಸಾಕಷ್ಟು ನೋವು, ಕಷ್ಟ ಅನುಭವಿಸಿದ್ದಾರೆ. ಸಂತ್ರಸ್ತರು, ಅವರ ಕುಟುಂಬಸ್ಥರ ಮೇಲೆ ನಡೆದ ದೌರ್ಜನ್ಯ ಮರೆಯಲು ಸಾಧ್ಯವೇ? ತುರ್ತು ಪರಿಸ್ಥಿತಿ ಘೋಷಿಸಿದ್ದನ್ನು ಮತ್ತು ಜನರಿಗೆ ಮಾಡಿದ ಅನ್ಯಾಯವನ್ನು ಕಾಂಗ್ರೆಸ್‌ ನವರು ಮರೆತು ಸುಮ್ಮನಾಗಬಹುದು. ಆದರೆ ಇಂದಿರಾ
ಗಾಂಧಿ ಸಂವಿಧಾನದ ಕೊಲೆ ಮಾಡಿದ ಕರಾಳ ದಿನವನ್ನು ನಾವು ಮರೆಯಲು ಸಾಧ್ಯವಿಲ್ಲ. ಈ ಬಗ್ಗೆ ಕಾಂಗ್ರೆಸ್‌ನವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸುಳ್ಳು ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂಬ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಖರ್ಗೆ ಆರೋಪಿಸಿದ್ದರು. ಆದರೆ ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲದಿದ್ದರೆ ಕಾಂಗ್ರೆಸ್‌ ಹಾಗೂ ಇತರೆ ವಿಪಕ್ಷದವರು ಸಂಸತ್‌ ಭವನದಲ್ಲಿ ಪ್ರತಿಭಟನೆ ನಡೆಸಲು ಅವಕಾಶವೇ ಇರುತ್ತಿರಲಿಲ್ಲ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನದ ವಿರುದ್ಧ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ನವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್‌ ತನ್ನನ್ನು ಸಂವಿಧಾನದ ರಕ್ಷಕ ಎಂಬಂತೆ ತೋರಿಸಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ಬದಲಿಸಲಿದ್ದಾರೆ ಎಂಬ ಸುಳ್ಳು ಪ್ರಚಾರ ಮಾಡಿದೆ. ಆದರೆ ಡಾ|ಬಾಬಾಸಾಹೇಬ ಅಂಬೇಡ್ಕರ ಅವರೇ ವಾಪಸ್‌ ಬಂದರೂ ಸಂವಿಧಾನ ಬದಲಿಸಲು ಸಾಧ್ಯವೇ ಇಲ್ಲ ಎಂದು ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ಆದರೆ ಈ ವಿಷಯದಲ್ಲಿ ಕಾಂಗ್ರೆಸ್‌ ನಾಟಕ ಜೋರಾಗಿದೆ.

ಸಂವಿಧಾನಕ್ಕೆ ದ್ರೋಹ ಮಾಡಿದ ಕಾಂಗ್ರೆಸ್‌ ಪ್ರಜಾಪ್ರಭುತ್ವವನ್ನು ನಾಶಪಡಿಸಿದೆ. ತುರ್ತು ಪರಿಸ್ಥಿತಿ ಘೋಷಣೆ ಕುರಿತು ಆತ್ಮಾವಲೋಕನದ ಅಗತ್ಯವಿದೆ. ಇಂದು ಅಂಬೇಡ್ಕರ್‌ ಬದುಕಿದ್ದರೆ ಸಂವಿಧಾನ ಉಲ್ಲಂಘಿಸಿದ್ದಕ್ಕೆ ಇಂದಿರಾ ಗಾಂಧಿ ಅವರಿಗೆ ತಕ್ಕ ಉತ್ತರ ನೀಡುತ್ತಿದ್ದರು. ಹೀಗಾಗಿ ಕಾಂಗ್ರೆಸ್‌ ಕ್ಷಮೆ ಕೇಳಬೇಕು ಎಂದರು. 2006ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಸೇರ್ಪಡೆಯಾಗುವ ಮುನ್ನ ತುರ್ತು ಪರಿಸ್ಥಿತಿ ಕುರಿತು ಅನೇಕ ಸಲ ಇಂದಿರಾ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಾರೆ.

ಬಹಿರಂಗವಾಗಿ ಅನೇಕ ಸಲ ವಿರೋಧ ಮಾಡಿದ್ದಾರೆ. ಆದರೆ ಈಗ ಮೌನ ವಹಿಸಿದ್ದಾದರೂ ಏಕೆ? ತುರ್ತು ಪರಿಸ್ಥಿತಿ ಘೋಷಣೆ ಬಗ್ಗೆ ರಾಹುಲ್‌ ಗಾಂಧಿ  ಕಾರಣ ನೀಡಬೇಕು ಎಂದರು.

ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತುರ್ತು ಪರಿಸ್ಥಿತಿ ಕುರಿತು ಉಪನ್ಯಾಸ ನೀಡಿದರು. ನಿವೃತ್ತ ಕ್ಯಾಪ್ಟನ್‌ ಚಾಂಗಪ್ಪ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರಾದ ಅಭಯ ಪಾಟೀಲ, ವಿಠಲ ಹಲಗೇಕರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್‌ ಬೆನಕೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next