Advertisement

Parliament ರಾಷ್ಟ್ರಪತಿ ಭಾಷಣದಲ್ಲೂ ಎಮರ್ಜೆನ್ಸಿ!

11:51 PM Jun 27, 2024 | Team Udayavani |

ಹೊಸದಿಲ್ಲಿ: ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಅತ್ಯಂತ ಕರಾಳ ಅಧ್ಯಾಯವಾಗಿದ್ದು, ಅದು ದೇಶದ ಸಂವಿಧಾನದ ಮೇಲೆ ನಡೆದ ನೇರ ಮತ್ತು ಅತ್ಯಂತ ದೊಡ್ಡ ದಾಳಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟೀಕಿಸಿದ್ದಾರೆ. ಇಂಥ ದಾಳಿಯ ಹೊರತಾಗಿಯೂ ಅಸಂವಿಧಾನಿಕ ಶಕ್ತಿಗಳ ವಿರುದ್ಧ ಹೋರಾಟ ನಡೆಸಿ ದೇಶ ಜಯಶಾಲಿಯಾಗಿದೆ ಎಂದು ಹೇಳಿದ್ದಾರೆ.

Advertisement

ಗುರುವಾರ ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಅವರು ಮಾತನಾಡಿದರು. ಬುಧವಾರ ಸ್ಪೀಕರ್‌ ಓಂ ಬಿರ್ಲಾ ಸದನದಲ್ಲಿ ಎಮರ್ಜೆನ್ಸಿ ವಿಚಾರ ಪ್ರಸ್ತಾವಿಸಿ, ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ರಾಷ್ಟ್ರಪತಿಯವರೂ ತಮ್ಮ ಭಾಷಣದಲ್ಲಿ ತುರ್ತು ಪರಿಸ್ಥಿತಿಯನ್ನು ಖಂಡಿಸುವ ಮೂಲಕ ವಿಪಕ್ಷ ಕಾಂಗ್ರೆಸ್‌ನ ಆಕ್ರೋಶದ ಬೆಂಕಿಗೆ ತುಪ್ಪ ಸುರಿದರು. ಅತ್ತ ದ್ರೌಪದಿ ಮುರ್ಮು ಅವರು ಎಮರ್ಜೆನ್ಸಿ ವಿರುದ್ಧ ಟೀಕೆ ನಡೆಸುತ್ತಿದ್ದಂತೆ, ಇತ್ತ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿದರು. ಎನ್‌ಡಿಎ ಸಂಸದರು ಮೇಜು ಕುಟ್ಟುವ ಮೂಲಕ ರಾಷ್ಟ್ರಪತಿ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

18ನೇ ಲೋಕಸಭೆ ಅಧಿವೇಶನದ ಆರಂಭದಿಂದಲೂ ವಿಪಕ್ಷ ಸದಸ್ಯರು  ಸಂವಿಧಾನದ ಪ್ರತಿ ಹಿಡಿದುಕೊಂಡೇ ಪ್ರತಿಜ್ಞೆ ಸ್ವೀಕಾರ ಮಾಡಿದ್ದ ಹಿನ್ನೆಲೆ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ತುರ್ತು ಪರಿಸ್ಥಿತಿ, ಸಂವಿಧಾನದ ಬಗ್ಗೆ ಮಾತನಾಡಿದ್ದು ಮಹತ್ವ ಪಡೆದಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿನ ಕ್ರಮ: ರಾಷ್ಟ್ರಪತಿ

ನೀಟ್‌ ಯುಜಿ ಸೇರಿದಂತೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಬಗ್ಗೆಯೂ ಪ್ರಸ್ತಾವಿಸಿದ ರಾಷ್ಟ್ರಪತಿ ಮುರ್ಮು, ಇವುಗಳನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ನಿಷ್ಪಕ್ಷ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ. ತಪ್ಪಿತಸ್ಥರನ್ನು ಕಾನೂನಿನ ಅನ್ವಯ ಶಿಕ್ಷಿಸಲಾಗುತ್ತದೆ ಎಂದು ಹೇಳಿದ್ದಾರೆ. ಜತೆಗೆ, ಕೇಂದ್ರ ಸರಕಾರದ ಇಲಾಖೆಗಳಿಗೆ ನಡೆಸುವ ನೇಮಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಯಾವುದೇ ಹಂತದ ಪರೀಕ್ಷೆಯಲ್ಲಿ  ಸಂಪೂರ್ಣ ಹಾಗೂ ಆಮೂಲಾಗ್ರ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರಕಾರ ಶ್ರಮಿಸುತ್ತಿದೆ ಎಂದರು. ಅವರು ತಮ್ಮ ಭಾಷಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ವಿಪಕ್ಷಗಳ ಸಾಲಿನಲ್ಲಿದ್ದ ಕೆಲವು ಸದಸ್ಯರು “ನೀಟ್‌’, “ನೀಟ್‌’ ಎಂದು ಘೋಷಣೆ ಕೂಗಿದರು.

Advertisement

70 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ

ಇನ್ನು ಮುಂದೆ 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಆಯುಷ್ಮಾನ್‌ ಭಾರತ್‌ ಆರೋಗ್ಯ ಯೋಜನೆ ಅನ್ವಯ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ. ಇದುವರೆಗೆ ಈ ಯೋಜನೆಯ ಅನ್ವಯ ದೇಶದ 55 ಕೋಟಿ ಮಂದಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ 70 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಉಚಿತ ಆರೋಗ್ಯ ವ್ಯವಸ್ಥೆ ಕಲ್ಪಿಸಲಿದೆ. ಜತೆಗೆ, ದೇಶದ ವಿವಿಧ ಭಾಗಗಳಲ್ಲಿ 25,000 ಜನ ಔಷಧಿ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ. ಬಿಜೆಪಿ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲೂ 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್‌ ಅನ್ವಯ ಉಚಿತ ಚಿಕಿತ್ಸೆಯ ಆಶ್ವಾಸನೆ ನೀಡಿತ್ತು. ಅಲ್ಲದೇ ಕೇಂದ್ರ ಆರೋಗ್ಯ ಇಲಾಖೆಯ “100 ದಿನಗಳ ಅಜೆಂಡಾ’ದಲ್ಲೂ ಇದನ್ನು ಸೇರಿಸಲಾಗಿತ್ತು.

ಇನ್ನು ನಗರಪ್ರದೇಶದ ಬೀದಿಬದಿ ವ್ಯಾಪಾರಿಗಳಿಗೂ ಆರ್ಥಿಕ ನೆರವು

ಈವರೆಗೆ ನಗರ ಪ್ರದೇಶಗಳ ಬೀದಿಬದಿ ವ್ಯಾಪಾರಿಗಳಿಗೆ 50 ಸಾವಿರ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸುವ “ಪಿಎಂ ಸ್ವನಿಧಿ’ ಯೋಜನೆ ಇನ್ನು ಮುಂದೆ ಗ್ರಾಮೀಣ, ಅರೆನಗರದ ವ್ಯಾಪಾರಿಗಳಿಗೂ ಅನ್ವಯವಾಗಲಿದೆ. ಹೀಗೆಂದು, ರಾಷ್ಟ್ರಪತಿ ಮುರ್ಮು ಅವರು ಭಾಷಣದಲ್ಲಿ ಘೋಷಿಸಿದ್ದಾರೆ. 2020ರಲ್ಲಿ ಈ ಯೋಜನೆ ಜಾರಿಯಾಗಿತ್ತು.

ರಾಷ್ಟ್ರಪತಿ ಹೇಳಿದ್ದೇನು?

ಸಂವಿಧಾನ ರೂಪಿಸುವ ವೇಳೆ ಭಾರತ ಸೋಲಲಿ ಎಂಬ ಧೋರಣೆ ಕೆಲವು ರಾಷ್ಟ್ರಗಳಿಗೆ ಇತ್ತು

ಇದರ ಹೊರತಾಗಿಯೂ ದೇಶ ಹಲವು ರಂಗಗಳಲ್ಲಿ ಪ್ರಗತಿ ಸಾಧಿಸಿದೆ

ಸರಕಾರಕ್ಕೆ ಸಂವಿಧಾನ ಆಡಳಿತ ನಡೆಸುವ ಮಾಧ್ಯಮ ಮಾತ್ರ ಅಲ್ಲ.

ಅದು ಜನರ ಜೀವನ ವ್ಯವಸ್ಥೆಯ ಅವಿಭಾಜ್ಯ ಅಂಗ ಎನ್ನುವುದು ನಮ್ಮ ಭಾವನೆ

ಸಿಎಎ(ಪೌರತ್ವ ಕಾಯ್ದೆ) ಜಾರಿ ಮೂಲಕ ದೇಶ ವಿಭಜನೆ ವೇಳೆ ನೋವುಂಡವರಿಗೆ ಘನತೆಯ ಬದುಕು ಕಲ್ಪಿಸಲಾಗಿದೆ

370ನೇ ವಿಧಿ ರದ್ದತಿ ಬಳಿಕ ದೇಶಕ್ಕೆ ಒಂದೇ ರೀತಿಯ ಸಂವಿಧಾನ ಜಾರಿಯಾಗಿದೆ.

ಎಮರ್ಜೆನ್ಸಿ, ಸಂವಿಧಾನದ ಮೇಲೆ ನಡೆದ ನೇರ ಮತ್ತು ಅತ್ಯಂತ ದೊಡ್ಡ ದಾಳಿ

ತುರ್ತು ಪರಿಸ್ಥಿತಿ ವಿರುದ್ಧ ನಿರ್ಣಯ: ಸ್ಪೀಕರ್‌ ಕಚೇರಿಗೆ ತೆರಳಿ ಪ್ರತಿಭಟನೆ

ಲೋಕಸಭೆಯಲ್ಲಿ ತುರ್ತು ಪರಿಸ್ಥಿತಿ ಖಂಡಿಸಿ ಸ್ಪೀಕರ್‌ ಓಂ ಬಿರ್ಲಾ ಅವರು ಮಂಡಿಸಿದ ನಿರ್ಣಯಕ್ಕೆ ಕಾಂಗ್ರೆಸ್‌ನ ಆಕ್ರೋಶ ತಣಿದಿಲ್ಲ.  ವಿಪಕ್ಷ ನಾಯಕ ರಾಹುಲ್‌ ಗಾಂಧಿ, ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷ ಒಕ್ಕೂಟದ ಪ್ರಮುಖರು ಗುರುವಾರ ಸಂಸತ್‌ ಭವನದಲ್ಲಿ ಇರುವ ಲೋಕಸಭೆ ಸ್ಪೀಕರ್‌ ಕಚೇರಿಗೆ ತೆರಳಿ ಅಧಿಕೃತವಾಗಿ ಪ್ರತಿಭಟನೆ ಸಲ್ಲಿಸಿದ್ದಾರೆ. ಲೋಕಸಭೆ ಸ್ಪೀಕರ್‌ ಆಗಿ ಬುಧವಾರ ಆಯ್ಕೆಯಾದ ಬೆನ್ನಲ್ಲೇ ಬಿರ್ಲಾ ಅವರು “ತುರ್ತು ಪರಿಸ್ಥಿತಿ ಹೇರಿಕೆ ದೇಶದ ಅತ್ಯಂತ ಕರಾಳ ದಿನಗಳು’ ಎಂದು ಹೇಳಿದ್ದರು.

“ತುರ್ತುಪರಿಸ್ಥಿತಿ ಖಂಡಿಸಿ 2 ನಿಮಿಷ ಮೌನ ಆಚರಿಸುವ ಅಗತ್ಯ ಇರಲಿಲ್ಲ. ತುರ್ತು ಪರಿಸ್ಥಿತಿ ಖಂಡಿಸಿ ಒಂದು ಪಕ್ಷಕ್ಕೆ ಅನುಗುಣವಾಗಿ ನಿರ್ಣಯ ಮಂಡಿಸುವುದು ಲೋಕಸಭೆ ಸ್ಪೀಕರ್‌ ಹುದ್ದೆಗೆ ತಕ್ಕುದಾದ ವರ್ತನೆಯಲ್ಲ ಎಂಬ ಅಂಶವನ್ನು ಕಾಂಗ್ರೆಸ್‌ ತನ್ನ ಪ್ರತಿಭಟನೆಯಲ್ಲಿ ಪ್ರಸ್ತಾವಿಸಿದೆ.

ಮಧ್ಯಪ್ರದೇಶ ಶಾಲಾ ಪಠ್ಯದಲ್ಲಿ ತುರ್ತು ಪರಿಸ್ಥಿತಿ ಪಾಠ: ಸಿಎಂ

ದೇಶದಲ್ಲಿ 1975-77ರ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ತುರ್ತು ಪರಿಸ್ಥಿತಿಯ ವಿಷಯವನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಲಾಗು ವುದು ಎಂದು ಮಧ್ಯಪ್ರದೇಶ ಸಿಎಂ ಮೋಹನ್‌ ಯಾದವ್‌ ಹೇಳಿದ್ದಾರೆ. ತುರ್ತು ಪರಿಸ್ಥಿತಿ ಜಾರಿಯಾದ 50ನೇ ವರ್ಷದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸಕ್ತ ಪೀಳಿಗೆಗೆ ತುರ್ತು ಪರಿಸ್ಥಿತಿಯ ಹೋರಾಟದ ಅರಿವು ಮೂಡಿಸಲು ಪಠ್ಯದಲ್ಲಿ ಸೇರಿಸಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next