Advertisement

ಮಳಲಿ ಮಸೀದಿಯ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟು ಕೊಡಲಿ; ಮಸೀದಿ ಬೇರೆಡೆ ನಿರ್ಮಾಣವಾಗಲಿ

12:20 AM May 31, 2022 | Team Udayavani |

ಬಂಟ್ವಾಳ: ಮಳಲಿಯ ಮಸೀದಿಯನ್ನು ಒಡೆದ ಸಂದರ್ಭದಲ್ಲಿ ದೇವಸ್ಥಾನ ಕಂಡಿದ್ದು, ಆ ವಿಚಾರವಾಗಿ ಸುಮ್ಮನೆ ಗಲಭೆ ಮಾಡುವುದಕ್ಕಿಂತ ಆ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟು ಕೊಟ್ಟು ಅಯೋಧ್ಯೆಯಂತೆ ಮಸೀದಿಗೆ ಬೇರೆ ಜಾಗ ನೀಡುವ ಮೂಲಕ ವಿವಾದವನ್ನು ಸೌಹಾರ್ದಯುತವಾಗಿ ಮುಗಿಸಬೇಕಿದೆ ಎಂದು ಆರ್‌ಎಸ್‌ಎಸ್‌ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಸಲಹೆ ನೀಡಿದ್ದಾರೆ.

Advertisement

ಅವರು ಸೋಮವಾರ ಕಲ್ಲಡ್ಕ ಸಮೀಪದ ಸುಧೆಕ್ಕಾರಿನಲ್ಲಿ ಪತ್ರಕರ್ತರ ಜತೆ ಮಾತನಾಡಿ, ಚರ್ಚ್‌, ಮಸೀದಿಗಳು ಪ್ರಾರ್ಥನಾ ಮಂದಿರಗಳಾಗಿದ್ದು, ಅದನ್ನು ಎಲ್ಲಿ ಬೇಕಾದರೂ ನಿರ್ಮಾಣ ಮಾಡಬಹುದು. ಆದರೆ ದೇವಸ್ಥಾನ, ದೈವಸ್ಥಾನ ಪ್ರಶ್ನೆ ಇಟ್ಟು ಶಾಸ್ತ್ರೋಕ್ತವಾಗಿ ನಿರ್ಮಾಣ ಮಾಡಬೇಕಾಗುತ್ತದೆ ಎಂದರು.

ಮಳಲಿ ದೇವಸ್ಥಾನ ಪುಡಿ ಮಾಡಿ ಮಸೀದಿ ನಿರ್ಮಾಣ ಮಾಡಿರುವುದು ನಮಗೆ ನೋವು ತಂದಿದೆ. ಅಂದಿನ ಪರಿಸ್ಥಿತಿಯಲ್ಲಿ ದೇವಸ್ಥಾನದ ಮೇಲೆ ಆಕ್ರಮಣ ಮಾಡಿವ ಸಂದರ್ಭ ಹಿಂದೂಗಳು ಹೆದರಿ ಓಡಿ ಹೋಗಿದ್ದಾರೆ. ಆದರೆ ಹಿಂದಿನ ಕಾಲ ಹಾಗೂ ಈಗಿನ ಕಾಲದ ಹಿಂದೂ ಮಾನಸಿಕತೆಗೆ ಸಾಕಷ್ಟು ವ್ಯತ್ಯಾಸಗಳಿವೆ. ನಾವು ಎಂದಿಗೂ ಮುಸ್ಲಿಂ, ಕ್ರಿಶ್ಚಿಯನ್‌ ವಿರೋಧಿಗಳಲ್ಲ. ಹೀಗಾಗಿ ಹೊಂದಾಣಿಕೆ ಮಾಡಿಕೊಂಡು ದೇವಸ್ಥಾನದ ಜಾಗವನ್ನು ಬಿಟ್ಟು ಕೊಡಬೇಕಿದೆ ಎಂದರು.

ಮಳಲಿ ಮಸೀದಿಯ ಸ್ಥಳದಲ್ಲಿ ಇರುವ ನಿರ್ಮಾಣ ದೇವಸ್ಥಾನದ್ದು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅದನ್ನು ಅರೇಬಿಯಾ ಶಿಲ್ಪಕಲೆ ಎಂದರೆ ನಾವು ಒಪ್ಪಿಕೊಳ್ಳಲು ಸಿದ್ಧರಿಲ್ಲ, ಅಲ್ಲಿ ಶಿಲ್ಪಕಲೆಯೇ ಇರಲಿಲ್ಲ. ಒಂದು ಹಿಡಿ ಮಣ್ಣನ್ನೂ ಕೊಡುವುದಿಲ್ಲ ಎಂದು ಎಸ್‌ಡಿಪಿಐ ಹೇಳಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದವರು ತಿಳಿಸಿದರು.

ಪಠ್ಯಪುಸ್ತಕ ಕಾಲ ಕಾಲಕ್ಕೆ ಪರಿಷ್ಕರಣೆ ಅಗತ್ಯ
ಪಠ್ಯಪುಸ್ತಕ ಕಾಲ ಕಾಲಕ್ಕೆ, ಆಯಾಯ ಸಂದರ್ಭಕ್ಕೆ ಏನಾಗಬೇಕೋ ಅದೇ ರೀತಿ ಪರಿಷ್ಕರಣೆ ಮಾಡಲಾಗಿದ್ದು, ಈಗಿನ ಸಂದರ್ಭಕ್ಕೆ ಹೊಂದಿಕೊಳ್ಳದೇ ಇರುವುದನ್ನು ಬಿಟ್ಟು ಅಗತ್ಯ ಇರುವುದನ್ನು ಸೇರಿಸಲಾಗಿದೆ. ಪಠ್ಯಪುಸ್ತಕವನ್ನು ನೋಡದೆಯೇ ಅನಗತ್ಯವಾಗಿ ಚರ್ಚೆ ಮಾಡಲಾಗುತ್ತಿದ್ದು, ರೋಹಿತ್‌ ಚಕ್ರತೀರ್ಥ ಸಮರ್ಪಕವಾಗಿ ಉತ್ತರ ಕೊಟ್ಟಿದ್ದಾರೆ. ಅವರು ಹೇಳಿದ ಪ್ರಕಾರ ಡಾ| ಹೆಗ್ಡೆವಾರ್‌ ಅವರು ಹೇಳಿದ ವಿಚಾರವನ್ನು ಓದಿ ಎಲ್ಲರೂ ಆರ್‌ಎಸ್‌ಎಸ್‌ ಆಗುವುದಾದರೆ ನೆಹರೂ, ಗಾಂಧೀಜಿ ಅವರನ್ನು ಓದಿ ಎಲ್ಲರೂ ಕಾಂಗ್ರೆಸ್‌ ಆಗಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next